ಕುಶಾಲನಗರ, ಮೇ 14: ಕುಶಾಲನಗರ ಸಮೀಪ ಹಾರಂಗಿ ನದಿಯಿಂದ ಅಕ್ರಮವಾಗಿ ಮರಳು ಸಾಗಾಟ ಪ್ರಕರಣ ಸಂಬಂಧ ಕುಶಾಲನಗರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿ ಪ್ರಕರಣವನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.

‘ಶಕ್ತಿ’ಯಲ್ಲಿ ಪ್ರಕಟಗೊಂಡ ಹಾರಂಗಿ ನದಿಯ ಮರಳು ಸಾಗಾಟ ಪ್ರಕರಣ ವರದಿ ಬೆನ್ನಲ್ಲೇ ಅಧಿಕಾರಿಗಳು ಕಾರ್ಯೋನ್ಮುಖರಾಗಿದ್ದು ನದಿಯಿಂದ ಮರಳು ಸಾಗಾಟಕ್ಕೆ ಸಂಬಂಧಿಸಿದ ವಾಹನಗಳ ಮಾಲೀಕರ ಮೇಲೆ ಮೊಕದ್ದಮೆ ದಾಖಲಿಸಲಾಗಿದೆ.

ಹಾರಂಗಿಯಲ್ಲಿರುವ ಅರಣ್ಯ ಇಲಾಖೆಯ ಟ್ರೀ ಪಾರ್ಕ್‍ನಲ್ಲಿ ಸಂಗ್ರಹಿಸಲಾದ ಮರಳು ಮತ್ತು ನದಿಯಲ್ಲಿ ಜೆಸಿಬಿ ಮೂಲಕ ರಾಶಿ ಹಾಕಿರುವ ಮರಳಿನ ಬಗ್ಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡುವದರೊಂದಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆ ನಡೆಯುತ್ತಿದೆ. ಅರಣ್ಯ ಇಲಾಖೆಗೆ ಸೇರಿದ ಟ್ರೀ ಪಾರ್ಕ್ ಕಾಮಗಾರಿಯನ್ನು ಗುತ್ತಿಗೆದಾರರೊಬ್ಬರಿಗೆ ನೀಡಲಾಗಿದ್ದು ಈ ಸಂಬಂಧ ಕೂಡ ತನಿಖೆ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.