ಶ್ರೀವiಂಗಲ, ಮೇ 14 : ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ನಷ್ಟಗೊಂಡು ರೈತರು ಪರಿಹಾರಕ್ಕಾಗಿ ಸಲ್ಲಿಸಿದ ಅರ್ಜಿಗಳಿಗೆ ಇದುವರೆಗೆ ಸೂಕ್ತ ಪರಿಹಾರ ಪಾವತಿಯಾಗಿಲ್ಲ. ಅಲ್ಲದೆ ಬಹುತೇಕ ಬೆಳೆಗಾರರಿಗೆ ಕೇವಲ ಅಲ್ಪ ಪ್ರಮಾಣದ ಪರಿಹಾರ ವಿತರಣೆಯಾಗಿದ್ದು, ಈ ಬಗ್ಗೆ ಉಂಟಾಗಿರುವ ಲೋಪದೋಷದ ಬಗ್ಗೆ ತನಿಖೆ ನಡೆಸಿ ಅರ್ಹ ರೈತರಿಗೆ ಅವರ ದಾಖಲಾತಿ ಅನುಸಾರ ಸೂಕ್ತವಾದ ಪರಿಹಾರವನ್ನು ತ್ವರಿತವಾಗಿ ವಿತರಿಸಲು ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಕೊಡಗು ಬೆಳೆಗಾರರ ಒಕ್ಕೂಟ ಒತ್ತಾಯಿಸಿದೆ.
ಟಿ. ಶೆಟ್ಟಿಗೇರಿ ಕೊಡವ ಸಮಾಜದಲ್ಲಿ ಒಕ್ಕೂಟದ ಅಧ್ಯಕ್ಷ ಕೈಬಿಲೀರ ಹರೀಶ್ ಅಪ್ಪಯ್ಯರವರ ಅಧ್ಯಕ್ಷತೆಯಲ್ಲಿ ನಡೆದ ಬೆಳೆಗಾರರ ಸಭೆಯಲ್ಲಿ, ಬಹುತೇಕ ಬೆಳೆಗಾರರಿಗೆ ಇನ್ನೂ ಪರಿಹಾರ ಅವರ ಖಾತೆಗೆ ಪಾವತಿಯಾಗಿಲ್ಲ. ಇನ್ನೂ ಬಹಳಷ್ಟು ಬೆಳೆಗಾರರಿಗೆ ಅಲ್ಪಪ್ರಮಾಣದ ಪರಿಹಾರ ಪಾವತಿಯಾಗಿದೆ. ಕೆಲವು ಬೆಳೆಗಾರರಿಗೆ ಜನವರಿ ತಿಂಗಳಲ್ಲೇ ಪರಿಹಾರ ಹಣ ಪಾವತಿಯಾಗಿದ್ದು, ನಂತರ ಕೆಲವೇ ದಿನಗಳಲ್ಲಿ ಅದರಲ್ಲಿ ಅರ್ಧದಷ್ಟನ್ನು ವಾಪಾಸ್ಸು ಪಡೆಯಲಾಗಿದೆ ಎಂದು ಬೆಳೆಗಾರರು ಅಸಮಾಧಾನ ವ್ಯಕ್ತಪಡಿಸಿದರು.
ಬಿರುನಾಣಿ ಗ್ರಾ.ಪಂ ನ ಬೆಳೆಗಾರ ಬಿ.ಯು ಚಂಗಪ್ಪ ಅವರಿಗೆ ರೂ. ಒಂದು ಸಾವಿರದ ಪರಿಹಾರ ಹಾಗೂ ಕೈಕೇರಿ ಗ್ರಾಮದ ಜಮ್ಮಡ ಮೋಹನ್ ಮಾದಪ್ಪರವರಿಗೆ ರೂ. ಎರಡು ಸಾವಿರ ಮುನ್ನೂರು ಅತ್ಯಲ್ಪ ಪರಿಹಾರ ಖಾತೆಗೆ ಸಂದಾಯವಾಗಿದೆ. ಇದರಿಂದ ಬೆಳೆ ನಷ್ಟ ಅನುಭವಿಸಿ ಸಂಕಷ್ಟದಲ್ಲಿರುವ ಬೆಳೆಗಾರರಿಗೆ ಅನ್ಯಾಯವಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಹರೀಶ್ ಅಪ್ಪಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಎನ್.ಡಿ.ಆರ್.ಎಫ್ ಮಾನದಂಡದಂತೆ ಒಂದು ಎಕ್ಟೇರ್‍ಗೆ ರೂ. 18 ಸಾವಿರ ಪರಿಹಾರ ನೀಡಬೇಕಾಗಿದೆ. ಗರಿಷ್ಠ ಎರಡು ಎಕ್ಟೇರ್‍ಗೆ ರೂ. 36 ಸಾವಿರ ಪರಿಹಾರ ನೀಡಬೇಕಾಗಿದ್ದರೂ, ಪರಿಹಾರ ವಿತರಣೆಯಲ್ಲಿ ತಾರತಮ್ಯ ಉಂಟಾಗಿದೆ. ಈ ಬಗ್ಗೆ ಕಂದಾಯ ಅಧಿಕಾರಿಗಳನ್ನು ವಿಚಾರಿಸಿದಾಗ ಪರಿಹಾರದ ಸ್ವಲ್ಪ ಭಾಗವನ್ನು ಈಗ ವಿತರಿಸಲಾಗುತ್ತಿದ್ದು, ಉಳಿದ ಭಾಗ ಮುಂದಿನ ದಿನಗಳಲ್ಲಿ ಖಾತೆಗೆ ಸಂದಾಯವಾಗುತ್ತದೆ ಎಂಬ ಸಮಜಾಯಿಸಿಕೆ ಬಂದಿz.É ಇದರಿಂದ ಬೆಳೆಗಾರರು ತೀವ್ರ ಗೊಂದಲಕ್ಕೆ ಒಳಗಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶೇ. 30 ರಷ್ಟು ಬೆಳೆ ಹಾನಿ ಉಂಟಾದರೆ ಎನ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ ಪರಿಹಾರ ನೀಡಬೇಕಾಗುತ್ತದೆ. ಆದರೆ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಕಾಫಿ, ಕಾಳು ಮೆಣಸು, ಅಡಿಕೆ, ಭತ್ತ ಇತ್ಯಾದಿ ಬೆಳೆಗಳು ಅತೀ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಶೇ. 60ರಿಂದ 80ರಷ್ಟು ನೆಲಕಚ್ಚಿದೆ. ಆದರೂ ಸೂಕ್ತ ಪರಿಹಾರ ಪಾವತಿಯಾಗಿಲ್ಲ. ಪರಿಹಾರ ವಿತರಣೆಯಲ್ಲಿಯೂ ಬಹಳಷ್ಟು ವಿಳಂಬವಾಗಿದ್ದರೂ ಸಹ ಸಮರ್ಪಕವಾಗಿ ಪರಿಹಾರ ವಿತರಣೆಯಾಗಿಲ್ಲ ಎಂದು ಬೆಳೆಗಾರರು ಬೇಸರ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಗಳು ಈ ಬಗ್ಗೆ ವಿಶೇಷವಾಗಿ ಗಮನಹರಿಸಬೇಕು. ಈ ಮೊದಲು ಪರಿಹಾರ ಪಾವತಿ ಮಾಡಿ ಅದರಲ್ಲಿ ಅರ್ಧದಷ್ಟು ಕಡಿತ ಮಾಡಿ ವಾಪಾಸ್ಸು ಪಡೆದ ಬಗ್ಗೆ, ನಂತರ ಅತ್ಯಲ್ಪ ಪರಿಹಾರ ವಿತರಿಸುತ್ತಿರುವ ಬಗ್ಗೆ ಹಾಗೂ ಒಂದೇ ಪ್ರಮಾಣದ ಆಸ್ತಿವೊಂದಿದ್ದರೂ ಪರಿಹಾರದಲ್ಲಿ ತಾರತಮ್ಯವನ್ನು ಬೆಳೆಗಾರರಿಗೆ ಮಾಡಿರುವ ಬಗ್ಗೆ ಬೆಳೆಗಾರರಿಗೆ ಉಂಟಾಗುತ್ತಿರುವ ಗೊಂದಲವನ್ನು ತ್ವರಿತವಾಗಿ ಸರಿಪಡಿಸಬೇಕಾಗಿದೆ. ಬೆಳೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿರುವ ಎಲ್ಲಾ ಬೆಳೆಗಾರರ ಅರ್ಜಿಯ ದಾಖಲೆಗಳನ್ನು ಪರಿಶೀಲಿಸಿ ಅಂತಿಮಗೊಳಿಸಿ ಹಾಗೂ ಅದಕ್ಕೆ ಪರಿಹಾರವನ್ನು ನಿಗಧಿಪಡಿಸಿ ನಂತರದಲ್ಲಿ ಎಲ್ಲಾ ಬೆಳೆಗಾರರಿಗೂ ಏಕಕಾಲದಲ್ಲಿ ಪರಿಹಾರ ಪಾವತಿಸಲು ಕ್ರಮ ಕೈಗೊಳ್ಳಬೇಕು. ಈಗಾಗಲೇ ಪರಿಹಾರ ವಿತರಣೆಯಲ್ಲಿ ಉಂಟಾದ ಲೋಪದೋಷ ಹಾಗೂ ಗೊಂದಲಕ್ಕೆ ಕಾರಣದ ಬಗ್ಗೆ ತನಿಖೆ ನಡೆಸಿ ಇದರಲ್ಲಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಬೆಳೆಗಾರರು ಒತ್ತಾಯಿಸಿದರು. ಈ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಬೆಳೆಗಾರರನ್ನು ಸಂಘಟಿಸಿ ಹೋರಾಟ ನಡೆಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಜಂಟಿ ಕಾರ್ಯದರ್ಶಿ ಬಾಚಂಗಡ ದಾದ ದೇವಯ್ಯ, ಖಜಾಂಚಿ ಮಾಣೀರ ವಿಜಯ ನಂಜಪ್ಪ, ಶ್ರೀಮಂಗಲ ಹೋಬಳಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಕಾಳಿಮಾಡ ತಮ್ಮು ಮುತ್ತಣ್ಣ, ಬೆಳೆಗಾರರ ಪ್ರಮುಖರಾದ ತೀತಿರ ಧರ್ಮಜ ಉತ್ತಪ್ಪ, ಕೋಟ್ರಮಾಡ ಅರುಣ್ ಅಪ್ಪಣ್ಣ, ಚೊಟ್ಟೆಯಂಡಮಾಡ ವಿಶು, ಮಚ್ಚಮಾಡ ಸೋಮಯ್ಯ, ಮನ್ನೇರ ರಮೇಶ್, ಚೊಟ್ಟೆಯಂಡಮಾಡ ವಿಶ್ವನಾಥ್, ಕೋಟ್ರಮಾಡ ವಿಜಯ, ಆಂಡಮಾಡ ಸತೀಶ್ ಹಾಜರಿದ್ದರು.