ಮಡಿಕೇರಿ, ಮೇ 14: ಕ್ರೀಡೆಯ ತವರೂರು ಎಂದೇ ಖ್ಯಾತಿವೆತ್ತಿರುವ ಕೊಡಗು ಜಿಲ್ಲೆಗೆ ಕ್ರೀಡೆಗೆಂದು ಸಿಗುತ್ತಿರುವ ಗೌರವ ಅನುದಾನ ಅಷ್ಟಕಷ್ಟೇ. ಆದರೂ ರಕ್ತದಲ್ಲಿಯೇ ಕ್ರೀಡೆಯನ್ನು ಅದರಲ್ಲೂ ಹಾಕಿಯನ್ನು ಕರಗತ ಮಾಡಿಕೊಂಡಿರುವ ಕೊಡಗಿನ ಕ್ರೀಡಾಪ್ರೇಮಿಗಳು, ಕ್ರೀಡಾಭಿಮಾನಿಗಳು ಕ್ರೀಡೆಯನ್ನು ಪ್ರೋತ್ಸಾಹಿಸುತ್ತಾ, ಮೈದಾನಗಳನ್ನು ಉಳಿಸಿಕೊಳ್ಳುತ್ತಾ ಬರುತ್ತಿದ್ದಾರೆ. ಇದಕ್ಕೆ ನಿದರ್ಶನವೆಂಬಂತೆ ಜಿಲ್ಲೆಯಾದ್ಯಂತ ನಡೆಯುವ ಜನಾಂಗೀತ ಕ್ರೀಡಾಕೂಟಗಳು ಹಾಗೂ ಹಾಕಿ, ಕ್ರಿಕೆಟ್, ಕಬಡ್ಡಿ, ಫುಟ್‍ಬಾಲ್ ಪಂದ್ಯಾವಳಿಗಳು.

ಅಪ್ರತಿಮ ಸೇನಾನಿ ಜ. ತಿಮ್ಮಯ್ಯ ಅವರ ಹೆಸರಿನಲ್ಲಿರುವ ಜಿಲ್ಲಾ ಕ್ರೀಡಾಂಗಣ ಜಿಲ್ಲೆಯ ಏಕೈಕ ಕ್ರೀಡಾಂಗಣವಾಗಿದೆ. ಇರುವ ಮೈದಾನಗಳಲ್ಲಿ ಕಟ್ಟಡ, ಇನ್ನಿತರ ಚಟುವಟಿಕೆಗಳಿಂದಾಗಿ ಮೈದಾನಗಳು ಅಳಿದು ಹೋಗುತ್ತಿದ್ದು, ಕ್ರೀಡಾಪ್ರೇಮಿಗಳ ಹೋರಾಟದ ಫಲವಾಗಿ ಜಿಲ್ಲಾ ಕ್ರೀಡಾಂಗಣ ಅಲ್ಪಮಟ್ಟಗಾದರೂ ಉಳಿದುಕೊಂಡಿದೆ. ಜಿಲ್ಲೆಯ ಬಹುತೇಕ ಕ್ರೀಡಾಕೂಟಗಳು, ಸರಕಾರಿ ಕಾರ್ಯಕ್ರಮಗಳು ಜನಾಂಗೀಯ ಕ್ರೀಡಾಕೂಟಗಳು ಈ ಕ್ರೀಡಾಂಗಣದಲ್ಲಿಯೇ ನಡೆಯುತ್ತದೆ. ಪ್ರತಿನಿತ್ಯ ನೂರಾರು ಮಂದಿ ಇಲ್ಲಿ ವಾಯು - ವಿಹಾರ, ವ್ಯಾಯಾಮಕ್ಕಾಗಿ ಆಗಮಿಸುತ್ತಾರೆ. ನೂರಾರು ಮಂದಿ ಮಕ್ಕಳು ಆಟವಾಡುತ್ತಾರೆ. ಅಭಿಮಾನವಿದ್ದವರು ಕ್ರೀಡಾಂಗಣವನ್ನು ಸ್ವಚ್ಛಗೊಳಿಸುತ್ತಾರೆ.

ಆದರೆ, ಮೊನ್ನೆ ನಡೆದ ಕ್ರೀಡಾಕೂಟದಲ್ಲಿ ಭಾಗಿಯಾದ ಕ್ರೀಡಾಭಿಮಾನಿಗಳು ಅವರು ನಡೆಸಿದ ಕ್ರೀಡಾಕೂಟಕ್ಕೆ ಮಸಿ ಬಳಿಯುವಂತಹ ಕಾರ್ಯ ಮಾಡಿದ್ದಾರೆ. ಕ್ರೀಡಾಂಗಣದಲ್ಲಿ ಎಲ್ಲೆಂದರಲ್ಲಿ ಕಸಗಳನ್ನು ಸುರಿಯಲಾಗಿದೆ. ರಾತ್ರಿ ಮಳೆ ಬಂದ ಸಂದರ್ಭದಲ್ಲಿ ಅಳಿದುಳಿದಿರುವ ಟ್ರ್ಯಾಕ್‍ಗಳ ಮೇಲೆ ವಾಹನಗಳನ್ನು ಓಡಿಸಿ ಹಾಳುಗೆಡಹಲಾಗಿದೆ. ಮಕ್ಕಳು ಆಟವಾಡುವ ರಿಂಕ್ ಹಾಕಿ ಮೈದಾನದಲ್ಲಿ ಮದ್ಯ ಸೇವನೆ ಮಾಡಿ ಬಾಟಲಿಗಳನ್ನು ಎಸೆದಿರುವದರಲ್ಲದೆ, ಒಡೆದು ಹಾಕಿ ವಿಕೃತ ಮನೋಭಾವ ಮೆರೆಯಲಾಗಿದೆ. ಮೈದಾನ ಸುತ್ತಲೂ ಎಲ್ಲೆಂದರಲ್ಲಿ ಕಸ, ಬಾಟಲಿಗಳನ್ನು ಎಸೆಯಲಾಗಿದೆ. ಕನಿಷ್ಟ ಆಟ ಮುಗಿದ ಮೇಲೆ ಮೈದಾನ ಶುಚಿಗೊಳಿಸುವ ಕಾರ್ಯಕ್ಕೂ ಸಂಘಟನೆ ಮುಂದಾಗದಿರುವದು ದುರಂತವೇ ಸರಿ.

ಕಣ್ಣಿದ್ದೂ ಕುರುಡು

ಯುವ ಸಬಲೀಕಣ ಮತ್ತು ಕ್ರೀಡಾ ಇಲಾಖೆ ಸುಪರ್ದಿಯಲ್ಲಿರುವ ಈ ಕ್ರೀಡಾಂಗಣವನ್ನು ಹೇಳುವವರು ಕೇಳುವವರೇ ಇಲ್ಲವಾಗಿದೆ. ಇಲಾಖೆಯಿಂದ ಸ್ವಚ್ಛತಾ ಕಾರ್ಯ ಕನಸಿನ ಮಾತು. ಇನ್ನೂ ಮೈದಾನ ಬಿಟ್ಟುಕೊಡುವಾಗ ವಾಹನಗಳನ್ನು ಮೈದಾನದ ಒಳಗಡೆ ಕೊಂಡೊಯ್ಯದಂತೆ ಕ್ರಮಕೈಗೊಳ್ಳುವ ಕನಿಷ್ಟ ಸೌಜನ್ಯ ಕೂಡ ಈ ಇಲಾಖೆಗೆ ಇಲ್ಲವಾಗಿದೆ.

ಇಂದು ಮೈದಾನದಲ್ಲಿ ಆಡಲೆಂದು ಬಂದವರು ಸ್ವಚ್ಛತೆಗೆ ಮುಂದಾಗಿದ್ದಾರೆ. ಅಷ್ಟರಲ್ಲಿ ಪೊಲೀಸ್ ಇಲಾಖೆಯ ನೇಮಕಾತಿ ಇದ್ದುದರಿಂದ ಪೊಲೀಸರು ಎಲ್ಲರನ್ನು ಅಲ್ಲಿಂದ ಕಳುಹಿಸಿದ್ದರಿಂದ ಬಾಟಲಿಗಳು, ಕಸಗಳು ಮೈದಾನದಲ್ಲಿಯೇ ಬಿದ್ದಿವೆ. ಇನ್ನಾದರೂ ಇಲಾಖೆ ಇರುವ ಮೈದಾನವನ್ನು ಉಳಿಸಿಕೊಳ್ಳಲಿ ಎಂಬದೇ ಕ್ರೀಡಾಭಿಮಾನಿಗಳ ಆಶಯವಾಗಿದೆ.

-ಸಂತೋಷ್