ಗೋಣಿಕೊಪ್ಪಲು, ಮೇ 12: ಗಿರಿಜನ ಸಮುದಾಯದ 15ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿರುವ ಜಾಗದಲ್ಲಿ ಅನಧಿಕೃತ ಸರ್ವೆ ನಡೆಸುವ ಮೂಲಕ ಕಿರುಕುಳ ನೀಡುತ್ತಿರುವ ಬಗ್ಗೆ ಹಿರಿಯ ಅಧಿಕಾರಿಗಳ ಮುಂದೆ ಗ್ರಾಮದ ಮುಖಂಡರು ತಮ್ಮ ಅಹವಾಲು ಮಂಡಿಸಿದರು.

ಬಿ.ಶೆಟ್ಟಿಗೇರಿ ಸಮೀಪವಿರುವ ಕುಟ್ಟಂದಿ ಕಾಟೀಗುಂಡಿ ಬೆಟ್ಟಕುರುಬ ಜನಾಂಗ ವಾಸಿಸುತ್ತಿರುವ ಪ್ರದೇಶವನ್ನು ಅರಣ್ಯ ಇಲಾಖೆ ಸರ್ವೆ ನಡೆಸಿರುವ ಬಗ್ಗೆ ‘ಶಕ್ತಿ’ ವರದಿ ಪ್ರಕಟಿಸಿತ್ತು. ಈ ವರದಿಯ ಮೇಲೆ ಗ್ರಾಮಸ್ಥರು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ನಾಗರಹೊಳೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ರೈತರೊಂದಿಗಿನ ಸಭೆಯಲ್ಲಿ ಗಮನ ಸೆಳೆದರು.

ಅರಣ್ಯ ಇಲಾಖೆಯ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿ ಸಂತೋಷ್ ಕುಮಾರ್ ಈ ಬಗ್ಗೆ ಕಿರಿಯ ಅಧಿಕಾರಿಗಳಿಂದ ಸಮಜಾಯಿಸಿಕೆ ಬಯಸಿದರು.ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು ಅನಾವಶ್ಯಕವಾಗಿ ಆದಿವಾಸಿಗಳಿಗೆ ತೊಂದರೆಯಾಗದಂತೆ ನಿಗಾ ವಹಿಸಬೇಕು ಎಂದರು.

ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಡೇಮಾಡ ಅಶೋಕ್ ಚಿಟ್ಟಿಯಪ್ಪ ಹಾಗೂ ಗ್ರಾಮದ ಹಿರಿಯ ಮುಖಂಡ ತೀತೀರ ಲಾಲಾ ತಮ್ಮ ಭಾಗದ ಬೆಟ್ಟ ಕುರುಬ ಜನಾಂಗದ ಕುಟುಂಬಗಳನ್ನು ರೈತ ಸಭೆಗೆ ಕರೆಸುವ ಮೂಲಕ ಪರಿಹಾರ ಕಂಡುಕೊಳ್ಳುವಲ್ಲಿ ಯಶಸ್ವಿಯಾದರು. ಈ ಬಗ್ಗೆ ‘ಶಕ್ತಿ’ ಬೆಳಕು ಚೆಲ್ಲಿದ್ದನ್ನು ಇಲ್ಲಿ ಸ್ಮರಿಸಬಹುದು.

-ಹೆಚ್.ಕೆ.ಜಗದೀಶ್