ಮಡಿಕೇರಿ, ಮೇ 13: ಇಲ್ಲಿನ ಹಳೆಯ ಖಾಸಗಿ ಬಸ್ ನಿಲ್ದಾಣದ ಬೆಟ್ಟ ಸಾಲು ಕಳೆದ ಮಳೆಗಾಲದಲ್ಲಿ ಕುಸಿದಿರುವ ಹಿನ್ನೆಲೆಯಲ್ಲಿ; ಈ ಪ್ರದೇಶದಲ್ಲಿ ಹಿರಿಯ ನಾಗರಿಕರೊಂದಿಗೆ ಪ್ರವಾಸಿಗರು ವಿರಮಿಸುವ ದಿಸೆಯಲ್ಲಿ ಮಡಿಕೇರಿ ಸ್ಕ್ವೇರ್ ನಿರ್ಮಿಸುವ ಬೇಡಿಕೆಗೆ, ರಾಜ್ಯ ಪ್ರವಾಸೋದ್ಯಮ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಸ್ಪಂದಿಸಿದ್ದಾರೆ. ಈ ಸಂಬಂಧ ಈಚೆಗೆ ನಡೆಸಿರುವ ಅಧಿಕಾರಿಗಳ ಸಭೆಯಲ್ಲಿ ಅವರು, ನಗರಸಭೆಯಿಂದ ತರಾತುರಿಯಲ್ಲಿ ತಡೆಗೋಡೆ ನಿರ್ಮಿಸದಂತೆ ನಿರ್ದೇಶಿಸಿದ್ದಾರೆ.ಬದಲಾಗಿ ತಾ. 14 ರಂದು (ಇಂದು) ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ‘ಆರ್ಕಿಟೆಕ್ಟ್’ ಆಗಿರುವ ಅರವಿಂದ್ ಎಂಬ ಅಧಿಕಾರಿ ಖುದ್ದು ಪರಿಶೀಲಿಸಿ; ಅಗತ್ಯ ತಾಂತ್ರಿಕ ಸಲಹೆ ನೀಡುವಂತೆ ಸಚಿವರು ಸೂಚಿಸಿದ್ದಾರೆ. ಈ ಸಂಬಂಧ ಮಾಧ್ಯಮ ಬಳಗ ಸೇರಿದಂತೆ ಸ್ಥಳೀಯ ನಾಗರಿಕರು ಈ ಹಿಂದೆಯೇ ನುರಿತ ತಜ್ಞರಿಂದ ನೀಲ ನಕಾಶೆಯೊಂದನ್ನು ರೂಪಿಸಿ ‘ಮಡಿಕೇರಿ ಸ್ಕ್ವೇರ್’ ನಿರ್ಮಾಣದ ಮುಖಾಂತರ ಖಾಸಗಿ ಹಳೆಯ ನಿಲ್ದಾಣ ಪ್ರದೇಶದಲ್ಲಿ ಆಕರ್ಷಕ ತಾಣವೊಂದನ್ನು ನಿರ್ಮಿಸುವ ಬೇಡಿಕೆ ಇರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಅದಕ್ಕೆ ಪೂರಕವಾಗಿ ಸ್ಪಂದಿಸಿರುವ ಪ್ರವಾಸೋದ್ಯಮ ಸಚಿವರು; ತಂತ್ರಜ್ಞರ ಸಲಹೆ ಪಡೆದು, ಅನಂತರದಲ್ಲಿ ಕೈಗೊಳ್ಳಬೇಕಾದ ಕಾಮಗಾರಿಗೆ ಸರಕಾರದಿಂದ ಅಗತ್ಯ ಅನುದಾನದ ಇಂಗಿತ ವ್ಯಕ್ತಪಡಿಸಿದ್ದಾರೆ. ಆ ಮೇರೆಗೆ ತಾ. 14 ರಂದು (ಇಂದು) ತಂತ್ರಜ್ಞರು ಖುದ್ದು ಪರಿಶೀಲಿಸಿ; ಸಚಿವರಿಗೆ ವರದಿ ಸಲ್ಲಿಸುವದರೊಂದಿಗೆ ಕಾಮಗಾರಿ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವದು ಎಂದು ವಿಶ್ವಾಸನೀಯ ಮೂಲಗಳಿಂದ ಗೊತ್ತಾಗಿದೆ.