(ವಿಶೇಷ ವರದಿ. ಹೆಚ್.ಕೆ. ಜಗದೀಶ್)

ಗೋಣಿಕೊಪ್ಪಲು, ಮೇ 13: ಭಾರತೀಯನಾಗಿರುವ ಗೋಣಿಕೊಪ್ಪ ಸಮೀಪದ ಕೈಕೇರಿ ಗ್ರಾಮದ ನಿವಾಸಿ ಕುಶಾಲಪ್ಪ ಹಾಗೂ ಮೀನಾಕ್ಷಿ ದಂಪತಿಗಳ ಪುತ್ರ ಯಶವಂತ್ ಎಂಬಾತನು ಪಾಕಿಸ್ತಾನದ ಜೈಲಿನಲ್ಲಿ ಬಂಧಿಯಾಗಿದ್ದಾನೆ ಎಂಬ ಮಾಹಿತಿ ಹಳೆಯದಾದರೂ ಕಳೆದ 13 ವರ್ಷಗಳಿಂದ ಆಸೆ ಕಣ್ಣುಗಳನ್ನು ಮಗನ ಬರುವಿಕೆಗಾಗಿ ಎದುರು ನೋಡುತ್ತಿದೆ.

ಪಾಕಿಸ್ತಾನದಲ್ಲಿ ಬಂಧನದಲ್ಲಿರುವ ಯಶವಂತ್ ತನ್ನ ಮಗನೆಂದು ಹೆತ್ತ ಕರುಳು ಆತನ ಬಿಡುಗಡೆಗಾಗಿ ಹಲವು ಅಧಿಕಾರಿಗಳ, ಜನಪ್ರತಿನಿಧಿಗಳ ಬಳಿಗೆ ತೆರಳಿ ಹಲವು ಬಾರಿ ಮನವಿ ಮಾಡಿವೆ. ಇವರ ಮನವಿಗೆ ಸ್ಪಂಧನೆಯಂತೂ ದೊರಕಿಲ್ಲ. ಬೆಂಗಳೂರಿನ ವಕೀಲರ ಮೂಲಕ ಸತತ ಪ್ರಯತ್ನ ನಡೆಸಿರುವ ದಂಪತಿ ಮಗನಿಗಾಗಿ ಲಕ್ಷ ಲಕ್ಷ ಹಣವನ್ನು ಕಳೆದಿದ್ದಾರೆ. ದೆಹಲಿಗೆ ತೆರಳಿ ಅಲ್ಲಿನ ಅಧಿಕಾರಿಗಳನ್ನು ವಕೀಲರ ಮೂಲಕ ಭೇಟಿ ಮಾಡಿ ಹಲವು ದಿನಗಳು ಕಳೆದಿವೆ. ಇತ್ತೀಚೆಗೆ 125 ಭಾರತೀಯ ಮೀನುಗಾರರನ್ನು ಪಾಕಿಸ್ತಾನದಿಂದ ಬಿಡುಗಡೆಗೊಳಿಸುವ ಬಗ್ಗೆ ಮಾಹಿತಿ ತಿಳಿದ ಪೋಷಕರು ತನ್ನ ಮಗನನ್ನು ಬಿಡುಗಡೆಗೊಳಿಸುತ್ತಾರೆ. ಎಂಬ ಅಚಲ ನಂಬಿಕೆ ಹೆತ್ತ ಕರುಳಿನದ್ದು. ಈ ಬಗ್ಗೆ ಸುಪ್ರಿಂಕೋರ್ಟಿನ ಕದ ತಟ್ಟಿರುವ ಇವರ ವಕೀಲರು ನ್ಯಾಯಾಲಯದ ಮೂಲಕವೇ ಮಗನನ್ನು ಕರೆಸಿ ತರುವ ಪ್ರಯತ್ನಕ್ಕೆ ಚಾಲನೆ ನೀಡಿದ್ದಾರೆ.

ಪಾಲಿಟೆಕ್ನಿಕ್ ಕಾಲೇಜು

ಕೈಕೇರಿ ಕಳತ್ಮಾಡುವಿನ ಕಾಫಿ ಬೆಳೆಗಾರರಾದ ಕುಶಾಲಪ್ಪ ಹಾಗೂ ಮೀನಾಕ್ಷಿ ದಂಪತಿಯ ಪುತ್ರ ಯಶವಂತ್ 2004ರಲ್ಲಿ ಗೋಣಿಕೊಪ್ಪಲುವಿನ ಕಾವೇರಿ ಪಾಲಿಟೆಕ್ನಿಕ್ ಕಾವೇರಿ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯೂನಿಕೇಷನ್‍ನಲ್ಲಿ ಸೇರಿಕೊಂಡಿದ್ದ. ಹಾಜರಾತಿ ಕಡಿಮೆ ಇದ್ದ ಕಾರಣ 4ನೇ ಸೆಮಿಸ್ಟರ್‍ನಲ್ಲಿ ಯಶವಂತ್‍ಗೆ ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲ. ಈ ಕಾರಣದಿಂದ ಹೆತ್ತ ಪೋಷಕರು ಯಶವಂತ್‍ನನ್ನು ಮೈಸೂರಿನ ಜನ ಶಿಕ್ಷಣ ಸಂಸ್ಥಾನದಲ್ಲಿ 6 ತಿಂಗಳ ಎಲೆಕ್ಟ್ರಾನಿಕ್ಸ್ ಕೋರ್ಸ್‍ಗೆ 2006ರಲ್ಲಿ ಸೇರಿಸಿದ್ದರು. 6 ತಿಂಗಳ ಕೋರ್ಸ್ ಮುಗಿಸಿದ ಯಶವಂತ್ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದ. ನಂತರ ಯಶವಂತ್ ತನ್ನ ಪೋಷಕರಿಗೆ ದೂರವಾಣಿ ಮಾಡಿ ಒಂದು ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದ. ಮಗನ ಬೇಡಿಕೆಯ ಹಿನ್ನೆಲೆಯಲ್ಲಿ ಕುಶಾಲಪ್ಪ ಮೀನಾಕ್ಷಿ ದಂಪತಿಗಳು ಮೈಸೂರಿಗೆ ತೆರಳಿ ಮಗನ ಕೈಗೆ ಹಣ ನೀಡಿ ವಾಪಾಸ್ಸಾಗಿದ್ದರು. ನಂತರದ ದಿನದಲ್ಲಿ ತಂದೆ ತಾಯಿಯ ಸಂಪರ್ಕಕ್ಕೆ ಯಶವಂತ್ ಸಿಗಲೇ ಇಲ್ಲ.

ಮಗನ ಹುಡುಕಾಟ - ದಂಪತಿಗಳ ತೊಳಲಾಟ

ತನ್ನ ಮಗನ ತೊಳಲಾಟದಲ್ಲಿದ್ದ ಕುಶಾಲಪ್ಪ ಮೀನಾಕ್ಷಿ ದಂಪತಿಗಳಿಗೆ ಪತ್ರಿಕೆಯಲ್ಲಿ ಬಂದ ಸುದ್ದಿಯ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿ ಬಂಧಿಯಾಗಿರುವ ನನ್ನ ಮಗನನ್ನು ಕರೆಸುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಗೃಹ ಸಚಿವಾಲಯಕ್ಕೆ, ಕೇಂದ್ರ ಕಾನೂನು ಮಂತ್ರಿ ಡಿ.ವಿ.ಸದಾನಂದ ಗೌಡ ಹಾಗೂ ಶಾಸಕ ಕೆ.ಜಿ.ಬೋಪಯ್ಯನವರಿಗೆ ಪತ್ರ ಬರೆದಿದ್ದರು. ಪೋಷಕರ ಬಳಿಯಿರುವ ಯಶವಂತ್‍ನ ಹಳೆಯ ಭಾವ ಚಿತ್ರ ಹಾಗೂ ಪ್ರಕಟಗೊಂಡಿರುವ ರಮೇಶ್‍ನ ಭಾವಚಿತ್ರಕ್ಕೂ ತಾಳೆ ಹೊಂದುತ್ತಿದ್ದು, ಪಾಲಿಟೆಕ್ನಿಕ್ ಗೆ ಹೋಗುತ್ತಿದ್ದ ಸಂದರ್ಭ ಯಶವಂತ್‍ನ ಕುತ್ತಿಗೆಗೆ ಕರೆಂಟ್ ಶಾಕ್ ಒಂದು ತಗುಲಿ ಕಪ್ಪು ಕಲೆ ಉಂಟಾಗಿತ್ತು. ಹಾಗೂ ಯಶವಂತ್ ಕೊಂಚ ತೊದಲುವಿಕೆ ಇದ್ದು ಗಾಬರಿಗೊಂಡರೆ ಆತನ ಬಾಯಿಯಿಂದ ಮಾತೇ ಬರುವದಿಲ್ಲ.

ಈ ಎಲ್ಲಾ ಲಕ್ಷಣಗಳು ಯಶವಂತ್‍ನಲ್ಲಿ ಕಾಣುತ್ತಿದೆ. ವಿಚಾರಣೆ ವೇಳೆ ರಮೇಶ್ ಏನು ಮಾತನಾಡದೆ ನಾನು ಭಾರತೀಯ ಎಂದು ವಿವರ ನೀಡಿದ್ದಾನೆ. ಈ ಕಾರಣದಿಂದ ತಾಯಿ ಮೀನಾಕ್ಷಿ ಪಾಕಿಸ್ತಾನದಲ್ಲಿ ಬಂಧಿಯಾಗಿರುವ ತನ್ನ ಮಗನನ್ನೇ ಹೋಲುವ ರಮೇಶ್‍ನನ್ನು ಭೇಟಿ ಮಾಡುವ ತೊಳಲಾಟದಲ್ಲಿ ಇದ್ದಾರೆ.