ನಾಪೋಕ್ಲು, ಮೇ 12: ರೈತರು ಸಂಘಟಿತರಾಗುವ ಮೂಲಕ ಹೋರಾಟದೊಂದಿಗೆ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಅನಿವಾರ್ಯತೆ ಇದೆ ಎಂದು ಕರ್ನಾಟಕ ರೈತ ಸಂಘ ನಂಜುಂಡಸ್ವಾಮಿ ಬಣದ ಜಿಲ್ಲಾಧ್ಯಕ್ಷ ಚಿಮ್ಮಂಗಡ ಗಣೇಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಾಪೋಕ್ಲು ಸಮೀಪದ ನೆಲಜಿ ಫಾರ್ಮರ್ಸ್ ರಿಕ್ರಿಯೇಶನ್ ಅಸೋಸಿಯೇಶನ್ ಕ್ಲಬ್‍ನ ಸಭಾಂಗಣದಲ್ಲಿ ನಡೆದ ಗ್ರಾಮಮಟ್ಟದ ಸಮಿತಿಗಳ ರಚನೆ ಹಾಗೂ ಸಂಘದ ಸದಸ್ಯತ್ವ ನೋಂದಣಿ ಕುರಿತು ಅವರು ಮಾತನಾಡಿದರು. ಕಾಡಾನೆ ಮತ್ತು ಇತರ ವನ್ಯಮೃಗಗಳ ಹಾವಳಿಯಿಂದಾಗಿ ರೈತರು ಬೆಳೆದ ಬೆಳೆಗಳಿಗೆ ನಷ್ಟದ ಜೊತೆಗೆ ಜೀವಹಾನಿ ಸಂಭವಿಸುತ್ತಿದೆ ಈ ಬಗ್ಗೆ ಅರಣ್ಯಾಧಿಕಾರಿಗಳ ಗಮನ ಸೆಳೆದರೂ ಸೂಕ್ತ ಸ್ಪಂದನೆ ಸಿಗುತ್ತಿಲ್ಲ ಎಂದು ಆರೋಪಿಸಿದರು.

ಜಿಲ್ಲಾ ರೈತ ಸಂಘದ ಕಾರ್ಯದರ್ಶಿ ಕಳ್ಳಿಚಂಡ ಧನು ಮಾತನಾಡಿ, ರೈತರು ಸ್ವಂತ ಉಪಯೋಗಕ್ಕೆ ಮಾತ್ರ ಮರಳನ್ನು ತೆಗೆಯುತ್ತಿದ್ದಾರೆಯೇ ವಿನಾಃ ದಂಧೆ ಮಾಡಲು ಅಲ್ಲವೆಂದು ನುಡಿದರು. ಅರಣ್ಯ, ಕಂದಾಯ ಮತ್ತು ತಹಶೀಲ್ದಾರ್ ಕಚೇರಿಗಳಲ್ಲಿ ರೈತರು ತಮ್ಮ ಕೆಲಸಗಳನ್ನು ತಾವೇ ಮಾಡಿಸಿಕೊಳ್ಳಬೇಕು. ನಿರ್ಲಕ್ಷ್ಯ ತೋರುವ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಸಂಬಂಧಿಸಿದ ಇಲಾಖೆಯ ಹಿರಿಯ ಅಧಿಕಾರಿಗಳ ಗಮನ ಸೆಳೆದು ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಸೇವ್ ಕೊಡಗು ಸಂಘಟನೆಯ ನೂರಂಬಾಡ ಉದಯಶಂಕರ್, ಮಚÀ್ಚುರ ರವಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ನೆಲಜಿ ಫಾರ್ಮರ್ಸ್ ರಿಕ್ರಿಯೇಶನ್ ಕ್ಲಬ್‍ನ ಅಧ್ಯಕ್ಷ ಮಂಡಿರ ನಂದಾ ನಂಜಪ್ಪ ವಹಿಸಿದ್ದರು.

ಸಭೆಯಲ್ಲಿ ಪ್ರಮುಖರಾದ ಕುಲ್ಲೇಟಿರ ಅರುಣ್ ಬೇಬಾ, ಬಿದ್ದಾಟಂಡ ಜನ್ನು ನಾಣಯ್ಯ, ಬೆದಂಚೆಟ್ಟೀರ ದೇವಿ ದೇವಯ್ಯ, ಕೈಬುಲಿರ ಸಾಬು, ಮುಕ್ಕಾಟಿರ ವಿನಯ್, ಪಾಲೆಯಂಡ ಸಂತೋಷ್ ಮಾತನಾಡಿದರು. ನಾಲ್ಕುನಾಡು ವ್ಯಾಪ್ತಿಯ ಗ್ರಾಮಸ್ಥರು ಸಭೆಯಲ್ಲಿ ಪಾಲ್ಗೊಂಡಿದ್ದರು, ಮಾಳೆಯಂಡ ಬಿಜು ಪೆಮ್ಮಯ್ಯ ಸ್ವಾಗತಿಸಿ, ಕೈಬುಲಿರ ಉಮೇಶ್ ವಂದಿಸಿದರು.