ಮಡಿಕೇರಿ, ಮೇ 13: ಸಾಕಷ್ಟು ಅಡಚಣೆಗಳ ನಡುವೆಯೂ ಮಡಿಕೇರಿ ತಾಲೂಕು ಕಂದಾಯ ಇಲಾಖೆ ಆಡಳಿತ ಕಚೇರಿಗಳ ಮಿನಿ ವಿಧಾನ ಸೌಧದ ನೂತನ ಕಟ್ಟಡ ಕಾಮಗಾರಿಯೂ ಮೇಲೇಳ¯ Áರಂಭಿಸಿದೆ. ಇಂತಹ ಕಟ್ಟಡ ಕಾಮಗಾರಿಯೊಂದು ಈ ರೀತಿಯಲ್ಲಿ ನಿರ್ಮಾಣ ಗೊಳ್ಳುತ್ತಿರುವದು ಕೊಡಗಿನ ಮಟ್ಟಿಗೆ ಪ್ರಪ್ರಥಮವೆನಿಸಿದೆ. ನಗರದ ಕಾಲೇಜು ರಸ್ತೆಗೆ ಹೊಂದಿ ಕೊಂಡಂತೆ ವಿಜಯ ವಿನಾಯಕ ಬಡಾವಣೆ ಪಕ್ಕ ಈ ಮಿನಿ ವಿಧಾನ ಸೌಧ ಇದೀಗ ಮೇಲೇಳುವಂತಾಗಿದೆ.

ರಾಜ್ಯ ಸರಕಾರದಿಂದ 2016ರಲ್ಲಿ ರೂ. 5 ಕೋಟಿ ವೆಚ್ಚದಲ್ಲಿ ಪ್ರಥಮ ಹಂತದ ಯೋಜನೆಯೊಂದಿಗೆ; ಕರ್ನಾಟಕ ಗೃಹ ನಿರ್ಮಾಣ ಮಂಡಳಿಯಿಂದ ಮಿನಿ ವಿಧಾನ ಸೌಧದ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆಯೊಂದಿಗೆ, ಬೆಂಗಳೂರಿನ ಕೆ. ಬಾಬುರಾಜ್ ಕನ್ಸ್ಟ್ರಕ್ಷನ್ಸ್‍ಗೆ ಗುತ್ತಿಗೆ ನೀಡಲಾಗಿತ್ತು. ಗುತ್ತಿಗೆದಾರರು ಭೂಮಿಪೂಜೆ ನೆರವೇರಿಸಿ, ನಿವೇಶನ ಸಮತಟ್ಟುಗೊಳಿಸುವ ಕಾಮಗಾರಿ ಆರಂಭಿಸಿದ್ದರು. ಈ ಕೆಲಸ ಪೂರೈಸುವಷ್ಟರಲ್ಲಿ ಮುಂಗಾರು ಮಳೆ ಆರಂಭಗೊಂಡು, ಇಡೀ ನಿವೇಶನದಲ್ಲಿ ನೀರು ಕಾಣಿಸಿಕೊಂಡು ಕೆರೆಯ ಸ್ವರೂಪ ಪಡೆದುಕೊಂಡಿತು. ಆ ಬೆನ್ನಲ್ಲೇ ಮಣ್ಣಿನ ಗುಣಮಟ್ಟದ ಪರೀಕ್ಷೆ ಕೂಡ ನಡೆಸಲಾಯಿತು. ಬೃಹತ್ ಕಟ್ಟಡ ನಿರ್ಮಿಸಲು ಈ ನಿವೇಶನ ಸೂಕ್ತವಲ್ಲವೆಂಬ ಅಪಸ್ವರವೂ ವ್ಯಕ್ತಗೊಂಡಿತ್ತು.ಈ ವೇಳೆ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಂ.ಆರ್. ಸೀತಾರಾಂ ಅವರ ವಿಶೇಷ ಕಾಳಜಿಯೊಂದಿಗೆ, ಸೂರತ್ಕಲ್ ಇಂಜಿನಿಯರಿಂಗ್ ಸಂಸ್ಥೆಯಿಂದ ಮರಳಿ ಮಣ್ಣು ಪರೀಕ್ಷೆ ನಡೆಸುವ ಮುಖಾಂತರ ಮೂಲ ನಕಾಶೆಯ ಯೋಜನೆಯಲ್ಲಿ ಮಾರ್ಪಾಡು ಗೊಳಿಸಲಾಯಿತು. ಆ ಪ್ರಕಾರ ಈ ಕಟ್ಟಡ ಕಾಮಗಾರಿಗೆ ಅಡಿಪಾಯ ನಿರ್ಮಿಸುವ ಮುನ್ನ 22 ಅಡಿ ಆಳದಿಂದ ಸುರಕ್ಷಾ ಕಂಬ (ಬೀಮ್)ಗಳನ್ನು ನಿರ್ಮಿಸಿ ಅನಂತರ, ಅಡಿಪಾಯ ಕಾಮಗಾರಿಗೆ ನಿರ್ದೇಶಿಸಲಾಯಿತು. ಇದೀಗ 22 ಅಡಿ ಆಳದಷ್ಟು ಭೂಮಿಯೊಳಗೆ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಅಲ್ಲದೆ ಕಟ್ಟಡದ ನೆಲ ಅಂತಸ್ತು ಕಾಮಗಾರಿ ಭರದಿಂದ ಸಾಗಿದೆ.

ಸರಕಾರದ ನಿರ್ದೇಶನದಂತೆ ಕಾಮಗಾರಿ ವಿಳಂಬ ಕುರಿತು ಕಳೆದ ವಿಧಾನ ಮಂಡಲ ಅಧಿವೇಶನದಲ್ಲಿ ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಗಮನ ಸೆಳೆದಿದ್ದರು. ಆ ವೇಳೆ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಅವರು ಮಿನಿ ವಿಧಾನ ಸೌಧದ ಕೆಲಸ

(ಮೊದಲ ಪುಟದಿಂದ) ಮುಂದುವರಿಯುವ ಸುಳಿವು ನೀಡಿದ್ದರು. ಆ ಬೆನ್ನಲ್ಲೇ ಇದೀಗ ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿ ರಾಜ್‍ಕುಮಾರ್ ಖತ್ರಿ ಅವರು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭ, ಮಿನಿ ವಿಧಾನ ಸೌಧ ಕಾಮಗಾರಿಯನ್ನು ಖುದ್ದು ಪರಿಶೀಲಿಸಿ, ಆದಷ್ಟು ಬೇಗನೆ ಮೊದಲ ಹಂತದ ಕಾಮಗಾರಿ ಪೂರೈಸುವಂತೆ ಸಂಬಂಧಿಸಿದ ಗುತ್ತಿಗೆ ದಾರರು ಹಾಗೂ ಇಂಜಿನಿಯರ್‍ಗೆ ಸೂಚಿಸಿದ್ದಾರೆ. ಈ ವೇಳೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹಾಗೂ ಇತರ ಅಧಿಕಾರಿಗಳು ಹಾಜರಿದ್ದು, ಮಿನಿ ವಿಧಾನ ಸೌಧ ಕಾಮಗಾರಿ ಸಂಬಂಧ ಚರ್ಚೆ ನಡೆಸಿದ್ದಾರೆ.

‘ಶಕ್ತಿ’ಗೆ ಮಾಹಿತಿ : ಕರ್ನಾಟಕ ಗೃಹ ನಿರ್ಮಾಣ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರ ಕೃಷ್ಣಪ್ಪ ಅವರನ್ನು ‘ಶಕ್ತಿ’ ಸಂಪರ್ಕಿಸಿದಾಗ ಈಗಾಗಲೇ ಮಿನಿ ವಿಧಾನ ಸೌಧ ಕಾಮಗಾರಿಗೆ ರೂ. 3.50 ಕೋಟಿ ಬಿಡುಗಡೆಯಾಗಿದ್ದು, ಪ್ರಥಮ ಹಂತದಲ್ಲಿ ರೂ. 5 ಕೋಟಿಯ ಕಾಮಗಾರಿ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಅಲ್ಲದೆ ಒಟ್ಟು ರೂ. 11 ಕೋಟಿ ವೆಚ್ಚದ ಕೆಲಸಕ್ಕೆ ಯೋಜನೆ ರೂಪಿಸಿದ್ದು, ಈಗಿನ ಅಂದಾಜು ಪ್ರಕಾರ ರೂ. 10 ಕೋಟಿಯಲ್ಲಿ ಒಟ್ಟಾರೆ ಕೆಲಸ ಪೂರ್ಣಗೊಳಿಸುವಂತೆ ಸರಕಾರ ನಿರ್ದೇಶಿಸಿರುವದಾಗಿ ವಿವರಿಸಿದ್ದಾರೆ.

ಪ್ರಸಕ್ತ ಮಿನಿ ವಿಧಾನ ಸೌಧದ ಕಟ್ಟಡದ ನೆಲ ಅಂತಸ್ತು ಕೆಲಸ ಭರದಿಂದ ಸಾಗಿದ್ದು, ಮೇ ಅಂತ್ಯಕ್ಕೆ ಪ್ರಥಮ ಹಂತದ ಕಾಮಗಾರಿ ಪೂರ್ಣಗೊಳಿಸಲಾಗುವದು ಎಂದು ಗುತ್ತಿಗೆದಾರ ಪ್ರಮುಖರು ಖಚಿತಪಡಿಸಿ ದ್ದಾರೆ. ಅಲ್ಲದೆ ಅಧಿಕಾರಿ ರಾಜ್‍ಕುಮಾರ್ ಖತ್ರಿ ಅವರ ಸಲಹೆಯಂತೆ ರೂ. 10 ಕೋಟಿಯಲ್ಲಿ ಮೂಲಭೂತ ಸೌಕರ್ಯದೊಂದಿಗೆ ಕಟ್ಟಡ ಪೂರ್ಣಗೊಳಿಸುವ ಆಶಯ ವ್ಯಕ್ತಪಡಿಸಿದ್ದಾರೆ. ತಾ. 9 ರಂದು ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಕೂಡ ಖುದ್ದು ಕಾಮಗಾರಿ ಪರಿಶೀಲನೆ ನಡೆಸಿದ್ದರು.