ಶನಿವಾರಸಂತೆ, ಮೇ 11: ನಿಡ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೌಡನಳ್ಳಿ ಕಾಫಿ ತೋಟವೊಂದರಲ್ಲಿ ಏಪ್ರಿಲ್ 30 ರಂದು ನಡೆದಿದ್ದ ಅಕ್ರಮ ಬೀಟೆ ಮರ ಸಾಗಾಟ ಯತ್ನ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಅರಣ್ಯ ಇಲಾಖೆ ಬಂಧಿಸಿದೆ.
ಇಂದು ಬೆಳಗ್ಗಿನ ಜಾವ ಅಪ್ಪಶೆಟ್ಟಳ್ಳಿ ಗ್ರಾಮದ ಪ್ರಯಾಣಿಕರ ತಂಗುದಾಣದಲ್ಲಿ ಅರಣ್ಯ ವಲಯಾಧಿಕಾರಿ ಕೊಟ್ರೇಶ್ ಹಾಗೂ ಸಿಬ್ಬಂದಿ ದಾಳಿ ನಡೆಸಿ ಪರಾರಿಯಾಗಿದ್ದ ಆರೋಪಿಗಳಾದ ಗುಂಡೂರಾವ್ ಬಡಾವಣೆ ನಿವಾಸಿ ಜೋಸಪ್ ಜೈಸನ್, ಕೂಗೇಕೋಡಿ ಗ್ರಾಮದ ಕೆ.ಎಸ್. ಈರಪ್ಪ, ಹೊಸೂರು ಗ್ರಾಮದ ಅಜೀಜ್ ಇವರುಗಳನ್ನು ಬಂಧಿಸಿದ್ದಾರೆ. ಉಳಿದ ನಾಲ್ವರು ಆರೋಪಿಗಳನ್ನು ಬಂದಿಸಲು ಅರಣ್ಯ ಇಲಾಖೆ ಬಲೆ ಬೀಸಿದೆ.
ಇಂದು ಬಂಧನಕ್ಕೊಳಗಾದ ಮೂವರು ಆರೋಪಿಗಳು ಶನಿವಾರಸಂತೆ ವಲಯ ವ್ಯಾಪ್ತಿಯಲ್ಲಿ ಹಲವು ಮರ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ಕೆ. ಕೊಟ್ರೇಶ್ ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಅರಣ್ಯ ಉಪ ಸಂರಕ್ಷಣಾಧಿಕಾರಿಗಳಾದ ಶ್ರೀನಿವಾಸ್, ಶಿವಕುಮಾರ್, ಸಿಬ್ಬಂದಿಗಳಾದ ಲೋಹಿತ್, ಜೈಕುಮಾರ್, ರಮೇಶ್, ಕೃಷ್ಣಪ್ಪ, ನವೀನ್ ಕುಮಾರ್, ಚಾಲಕರಾದ ಹರೀಶ್ ಕುಮಾರ್, ಭರತ್ ಪಾಲ್ಗೊಂಡಿದ್ದರು.