ಮಡಿಕೇರಿ, ಮೇ 11: ಮಡಿಕೇರಿ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ತಾ. 14 ರಂದು ಶ್ರೀ ದೇವಿ ಜಯಂತಿಯನ್ನು ಆಚರಿಸಲಾಗುತ್ತಿದೆ. ಆ ಪ್ರಯುಕ್ತ ಬೆಳಿಗ್ಗೆ 9 ಗಂಟೆಗೆ ಶ್ರೀ ಚೌಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಮೆರವಣಿಗೆಯ ಮೂಲಕ ಕೊಂಡೊಯ್ದು ಶ್ರೀ ಬಸವೇಶ್ವರ ದೇವಾಲಯ ಹಾಗೂ ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ದೇವಾಲಯದ ಪ್ರಾಂಗಣದಲ್ಲಿ ಶ್ರೀ ದೇವಿಗೆ ಪಂಚೋಪಚಾರ ಪೂಜೆ, ಉಯ್ಯಾಲೆ ಸೇವೆ, ಮಧ್ಯಾಹ್ನ 12.30ಕ್ಕೆ ಶ್ರೀ ಅಮ್ಮನವರಿಗೆ ಮಹಾಪೂಜೆ ನಡೆಯಲಿದೆ. ನಂತರ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿದೆ.ಸಂಜೆ 6 ಗಂಟೆಗೆ ಭಜನಾ ಕಾರ್ಯಕ್ರಮ, 8 ಗಂಟೆಗೆ ದೀಪಾರಾಧನೆ, ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.