ಪೊನ್ನಂಪೇಟೆ, ಮೇ 11: ಕೊಳತ್ತೋಡು-ಬೈಗೋಡಿನ ಮುರುವಂಡ ಕುಟುಂಬ ಸಂಘ ಮತ್ತು ಕುಟುಂಬದ ಅಧೀನದ ಶ್ರೀ ಅಯ್ಯಪ್ಪ ಪ್ರಸಾದ ಸಂಘದ ವತಿಯಿಂದ ಸ್ವಚ್ಛ ಭಾರತ ಅಭಿಯಾನ ಯೋಜನೆಯಡಿ ಸ್ವಚ್ಛಗೊಳಿಸಿ ತ್ಯಾಜ್ಯ ಮುಕ್ತ ರಸ್ತೆಯನ್ನಾಗಿ ಮಾಡಲಾಯಿತು.
ಕುಟುಂಬಸ್ಥರು ಮತ್ತು ಕಾರ್ಮಿಕರು ಜೊತೆ ಸೇರಿ ಬಿಟ್ಟಂಗಾಲ ಜಂಕ್ಷನ್ನಿಂದ ಆರಂಭಿಸಲಾದ ಸ್ವಚ್ಛ ಭಾರತ ಅಭಿಯಾನ, ಕೊಳತ್ತೋಡು-ಬೈಗೋಡು ಜಂಕ್ಷನ್ನಲ್ಲಿ ಕೊನೆಗೊಂಡಿತು. ಅಭಿಯಾನದಡಿ ವೀರಾಜಪೇಟೆ-ಗೋಣಿಕೊಪ್ಪಲು ಹೆದ್ದಾರಿಯ 2 ಕಿ.ಮೀ. ದೂರದ ರಸ್ತೆಯ ಎರಡೂ ಬದಿಗಳಲ್ಲಿ ಬಿದ್ದಿದ್ದ ಬಾಟಲಿ, ಪ್ಲಾಸ್ಟಿಕ್ ಮೊದಲಾದ ತ್ಯಾಜ್ಯಗಳನ್ನು ಸಂಗ್ರಹಿಸಲಾಯಿತು.
ಮುರುವಂಡ ಕುಟುಂಬಸ್ಥರ ಸಾಮಾಜಿಕ ಕಾಳಜಿಯಿಂದಾಗಿ ಮುಖ್ಯ ರಸ್ತೆಯ ಬದಿಯಲ್ಲಿದ್ದ 2 ಟಿಪ್ಪರಿಗೂ ಅಧಿಕ ತ್ಯಾಜ್ಯ ವಿಲೇವಾರಿಗೊಂಡು 2 ಕಿ.ಮೀ. ಉದ್ದದ ರಸ್ತೆ ಪೂರ್ಣವಾಗಿ ಸ್ವಚ್ಛಗೊಂಡಿತು. ಈ ವೇಳೆ ಮಾತನಾಡಿದ ಮುರುವಂಡ ಕುಟುಂಬ ಸಂಘದ ಅಧ್ಯಕ್ಷ ಎಂ.ಎ. ಪೊನ್ನಣ್ಣ, ಸ್ವಚ್ಛತೆ ಮೊದಲು ಮನೆ ಮತ್ತು ಗ್ರಾಮಗಳಿಂದ ಪ್ರಾರಂಭವಾಗಬೇಕು. ಪ್ರತೀ ಗ್ರಾಮದ ಜನರು ಸಮಾಜಮುಖಿಗಳಾಗಿ ಚಿಂತಿಸಿದರೆ ಸ್ವಚ್ಛ ಭಾರತದ ಕಲ್ಪನೆಯ ಉದ್ದೇಶ ಈಡೇರುತ್ತದೆ ಎಂದು ಹೇಳಿದರು.
ಸಂಘದ ಕಾರ್ಯದರ್ಶಿ ಎಂ.ಎ. ಮಾದಪ್ಪ, ಕುಟ್ಟಪ್ಪ ಸೇರಿದಂತೆ ಆಡಳಿತ ಮಂಡಳಿ ಪದಾಧಿಕಾರಿಗಳು ಮತ್ತು ಕುಟುಂಬಸ್ಥರು ಭಾಗವಹಿಸಿದ್ದರು.