ಸೋಮವಾರಪೇಟೆ, ಮೇ 11: ಮಳೆಯಿಂದ ಹಾನಿಗೊಳಗಾದ ಬೆಳೆಗಾರರಿಗೆ ಜಿಲ್ಲಾಡಳಿತದಿಂದ ಸೂಕ್ತ ಪರಿಹಾರ ಬಿಡುಗಡೆಯಾಗಿಲ್ಲ ಎಂದು ಆರೋಪಿಸಿ ತಾ. 13ರಂದು ಜಿಲ್ಲಾಡಳಿತದ ವಿರುದ್ಧ ಸೋಮವಾರ ಪೇಟೆ ತಾಲೂಕು ಕಚೇರಿ ಎದುರು ಬೆಳಿಗ್ಗೆ 11 ಗಂಟೆಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ವಿವಿಧ ಸಂಘಟನೆಗಳ ಪದಾಧಿಕಾರಿಗಳು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ತಾಲೂಕು ಕಾಫಿ ಬೆಳೆಗಾರರ ಸಂಘದ ಉಪಾಧ್ಯಕ್ಷ ಕೆ.ಪಿ. ಬಸಪ್ಪ, ಕಳೆದ ವರ್ಷ ಮಳೆಗಾಲದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ತಾಲೂಕಿನಾದ್ಯಂತ ಬೆಳೆಹಾನಿಯಾಗಿದೆ. ಆದರೆ ಇದುವರೆಗೆ ರೈತರಿಗೆ ಬೆಳೆಹಾನಿ ಪರಿಹಾರದ ಹಣ ಪಾವತಿಸಿಲ್ಲ ಎಂದು ಆರೋಪಿಸಿದರು.
ಬೆಳೆಹಾನಿಯಾದ ಸಂದರ್ಭ ಎಲ್ಲಾ ಸಂತ್ರಸ್ತರಿಗೆ ತಕ್ಷಣ ಪರಿಹಾರ ಕಲ್ಪಿಸುವದಾಗಿ ಭರವಸೆ ನೀಡಿದ್ದು, ಹನ್ನೊಂದು ತಿಂಗಳು ಕಳೆದರೂ ಇಂದಿಗೂ ರೈತರಿಗೆ ಸಮರ್ಪಕ ಪರಿಹಾರ ಲಭಿಸಿಲ್ಲ ಎಂದು ದೂರಿದರು. ಕಳೆದ ಜೂನ್ 11 ರಂದು ಭೂಕುಸಿತದಿಂದ ತನಗೆ ಸೇರಿದ ಒಂದು ಎಕರೆ ಕಾಫಿ ತೋಟ ನಾಶವಾಗಿದೆ. ಕಾಫಿ ಮಂಡಳಿ, ಕಂದಾಯ ಇಲಾಖೆ, ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ್ದಾರೆ. ಸಂಸದರಿಗೆ, ಮುಖ್ಯಮಂತ್ರಿಗಳಿಗೂ ಮನವಿ ಸಲ್ಲಿಸಲಾಗಿದೆ. ಆದರೆ ಇದುವರೆಗೆ ನಯಾ ಪೈಸೆ ಪರಿಹಾರ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಸಕ್ತ ವರ್ಷವೂ ನಿಗದಿತ ಸಮಯದಲ್ಲಿ ಮಳೆ ಬೀಳದ ಹಿನ್ನೆಲೆಯಲ್ಲಿ ಕಾಫಿ ಫಸಲು ನಷ್ಟ ಭೀತಿ ಎದುರಾಗಿದೆ. ಸರ್ಕಾರ ಕಾಫಿ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಗೋಷ್ಠಿಯಲ್ಲಿದ್ದ ಬೆಳೆಗಾರರ ಸಂಘದ ಉಪಾಧ್ಯಕ್ಷ ಬಿ.ಎಂ. ಲವ ಒತ್ತಾಯಿಸಿದರು.
ತಾಲೂಕು ಕಾಫಿ ಬೆಳೆಗಾರರ ಹೋರಾಟ ಸಮಿತಿಯ ನಿರ್ದೇಶಕ ಕೆ.ಎಂ.ದಿನೇಶ್ ಮಾತನಾಡಿ, ಪ್ರಕೃತಿ ವಿಕೋಪದ ಸಂದರ್ಭ ಸಂತ್ರಸ್ತರಿಗಾಗಿ ಕೋಟಿಗಟ್ಟಲೆ ಹಣ ಬಂದಿದೆ. ಈ ವರ್ಷವೂ ಪ್ರಕೃತಿ ವಿಕೋಪದ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕಳೆದ ವರ್ಷದ ಪರಿಹಾರವನ್ನು ವಿತರಿಸಲು ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳ ಬೇಕೆಂದು ಆಗ್ರಹಿಸಿದರು. ಪ್ರಗತಿಪರ ಕೃಷಿಕ ಐ.ಹೆಚ್. ನಿಂಗಪ್ಪ ಮಾತನಾಡಿ, ಡಿ.ಸಿ., ಎ.ಸಿ., ತಾಲೂಕು, ಕಚೇರಿಗಳಲ್ಲಿ ರೈತರ ಆಸ್ತಿ ದಾಖಲಾತಿಯ ಕಡತಗಳ ವಿಲೇವಾರಿ ವಿಳಂಬವಾಗುತ್ತಿದೆ. ಬಡ ರೈತರ ಗೋಳನ್ನು ಕೇಳುವವರೆ ಇಲ್ಲ ದಂತಾಗಿದೆ. ಆಸ್ತಿಯ ಆಕಾರಬಂದಿ, ದುರಸ್ತಿ, ಪೋಡಿಯಾಗದೆ ಯಾವದೇ ಸೌಲಭ್ಯಗಳು ಸಿಗುತ್ತಿಲ್ಲ. ಕಂದಾಯ ಇಲಾಖೆ ರೈತಪರವಾಗಿ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾ ರಿಗಳು ಸ್ಟಷ್ಟ ಸೂಚನೆ ನೀಡಬೇ ಕೆಂದರು. ಗೋಷ್ಠಿಯಲ್ಲಿ ಸಂಘದ ಸದಸ್ಯರುಗಳಾದ ಎಂ.ಬಿ. ಮಂದಣ್ಣ, ಸುರೇಶ್, ಅಶೋಕ್ ಉಪಸ್ಥಿತರಿದ್ದರು.