ಮಡಿಕೇರಿ, ಮೇ 11: ಕೊಡಗು ಜಿಲ್ಲೆಯಲ್ಲಿ ಬರಪರಿಸ್ಥಿತಿ ಅವಲೋಕನ, ಕಳೆದ ಸಾಲಿನ ಅತಿವೃಷ್ಟಿ ಸಂಬಂಧ ಪರಿಹಾರ ಕಾರ್ಯಕ್ರಮಗಳ ಅನುಷ್ಠಾನ ಸೇರಿದಂತೆ ಕುಡಿಯುವ ನೀರಿನ ಸಮಸ್ಯೆ ಇತ್ಯಾದಿ ಬಗ್ಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವದು ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ತಿಳಿಸಿದ್ದಾರೆ. ಇಬ್ಬನಿ ರೆಸಾರ್ಟ್‍ನಿಂದ ಜಿಲ್ಲಾ ಆಡಳಿತ ಭವನದಲ್ಲಿ ಇಂದು ಕರೆದಿದ್ದ ಸಭೆಯಲ್ಲಿ ಪಾಲ್ಗೊಳ್ಳಲು ಹೊರಬಂದ ಅವರನ್ನು ಮಾಧ್ಯಮ ಬಳಗ ಮಾತನಾಡಿಸಿದಾಗ; ರಾಜ್ಯ ಚುನಾವಣಾ ಆಯೋಗದ ವಿಶೇಷ ಅನುಮತಿ ಮೇರೆಗೆ ಕೊಡಗು ಜಿಲ್ಲಾ ಮಟ್ಟದ ಹಾಗೂ ತಾಲೂಕು ಹಂತದ ಅಧಿಕಾರಿಗಳ ಸಭೆ ಮೂಲಕ ಅತಿವೃಷ್ಟಿ- ಅನಾವೃಷ್ಟಿ ಸಂಬಂಧ ಚರ್ಚೆ ನಡೆಸುವ ಇಂಗಿತ ವ್ಯಕ್ತಪಡಿಸಿದರು.ಈ ಸಂಬಂಧ ಮುಖ್ಯಮಂತ್ರಿಗಳ ಸಲಹೆ ಮೇರೆಗೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳು ಪತ್ರಮುಖೇನ ಚುನಾವಣಾ ಆಯೋಗದ ಅನುಮತಿ ಕೋರಿದ್ದು, ಅನುಮತಿ ಲಭಿಸಿರುವ ಕಾರಣ, ಜಿಲ್ಲೆಯ ಪ್ರಮುಖ ಸಮಸ್ಯೆಗಳ ಇತ್ಯರ್ಥಕ್ಕೆ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವದು ಎಂದರು.ಸಭೆಯಲ್ಲಿ ಪ್ರಸ್ತಾಪ : ಈ ವೇಳೆ ಒಳಚರಂಡಿ ಕಾಮಗಾರಿಯಿಂದ ಮಡಿಕೇರಿಯ ರಸ್ತೆಗಳು ಸಂಪೂರ್ಣ ಹಾಳಾಗಿರುವದು ಮಳೆಗಾಲದಲ್ಲಿ ಬೆಟ್ಟ ಕುಸಿದು ಖಾಸಗಿ ಬಸ್ ನಿಲ್ದಾಣದ ಹಳೆ ಕಟ್ಟಡಕ್ಕೆ ಹಾನಿಯಿಂದ ಎದುರಾಗುತ್ತಿರುವ ಅಪಾಯದ ಪರಿಸ್ಥಿತಿ; ಹೆದ್ದಾರಿ ಕುಸಿತದಿಂದ ತಾತ್ಕಾಲಿಕ ರೂಪಿಸಿರುವ ಮರಳು ಚೀಲಗಳ ತಡೆಯಿಂದ ಮತ್ತೆ ಎದುರಾಗಲಿರುವ ಅಪಾಯದ ಬಗ್ಗೆ ಸಚಿವರ ಗಮನ ಸೆಳೆಯಲಾಯಿತು. ಈ ಎಲ್ಲದರ ಬಗ್ಗೆ ಇಂದಿನ ಅಧಿಕಾರಿಗಳ ಸಭೆಯಲ್ಲಿ ಪ್ರಸ್ತಾಪದೊಂದಿಗೆ ಮುಂದೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವದು ಎಂದು ಭರವಸೆ ನೀಡಿದರು.
ಪುನರ್ವಸತಿ ಮುಂದುವರಿಕೆ : ಕೊಡಗಿನಲ್ಲಿ ಪ್ರಾಕೃತಿಕ ವಿಕೋಪ ಸಂತ್ರಸ್ತರ ಮನೆಗಳ ಕೆಲಸ ಮಂದಗತಿಯಲ್ಲಿ ಸಾಗುತ್ತಿರುವ ಬಗ್ಗೆ ಪ್ರಸ್ತಾಪಿಸಿದಾಗ, ಮನೆಗಳನ್ನು ನಿರ್ಮಿಸುವ ಕೆಲಸ ಎಷ್ಟು ಕಷ್ಟವೆಂಬ ಅರಿವು ಎಲ್ಲರಿಗೂ ಇದ್ದು, ಈಗಾಗಲೇ ಹಂತ ಹಂತವಾಗಿ ಕಾಮಗಾರಿ ಮುಕ್ತಾಯ ಹಂತ ತಲಪಿರುವದಾಗಿ ನೆನಪಿಸಿದರು. ಆದಷ್ಟು ಬೇಗನೆ ಮನೆಗಳನ್ನು ನಿರ್ಮಿಸುವ ಇಂಗಿತ ವ್ಯಕ್ತಪಡಿಸಿದ ಸಚಿವರು; ರಸ್ತೆ, ಕುಡಿಯುವ ನೀರು, ಬೆಳಕು ಇತ್ಯಾದಿ ರೂಪಿಸಲು ಕಾಲಮಿತಿ ಅವಶ್ಯಕವೆಂದು ಮಾರ್ನುಡಿದರು.
(ಮೊದಲ ಪುಟದಿಂದ)
ಅಧಿಕಾರಿಗಳ ತಂಡ ರಚನೆ : ಈಗಾಗಲೇ ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಸಭೆ ನಡೆಸಿ ವಿವಿಧ ಯೋಜನೆಗಳ ಅನುಷ್ಠಾನ ಹಾಗೂ ಮುಂಗಾರು ಎದುರಿಸುವ ಸಂಬಂಧ ತಂಡಗಳನ್ನು ರಚಿಸಲಾಗಿದ್ದು, ಪ್ರಸಕ್ತ ಮಳೆಗಾಲದಲ್ಲಿ ಜಿಲ್ಲೆಯ ಜನತೆ ಯಾವದೇ ಆತಂಕಕ್ಕೆ ಒಳಗಾಗದಂತೆ ಹವಾಮಾನ ಇಲಾಖೆ ಮುನ್ಸೂಚನೆ ಕೂಡ ನೀಡಿರುವದಾಗಿ ಸಚಿವರು ಬೊಟ್ಟು ಮಾಡಿದರು.
ತಾ.25ರ ಬಳಿಕ ಪರಿಶೀಲನೆ : ಚುನಾವಣಾ ನೀತಿ ಸಂಹಿತೆ ಜಾರಿಯಿರುವ ಕಾರಣ ಪ್ರಸಕ್ತ ಯಾವದೇ ಹೇಳಿಕೆ ನೀಡುವದು ಅಥವಾ ಕಾಮಗಾರಿಗಳ ಪರಿಶೀಲನೆ ಸಾಧ್ಯವಾಗದು ಎಂದು ಸೂಚ್ಯವಾಗಿ ಹೇಳಿದ ಸಚಿವರು, ತಾ. 25ರ ಬಳಿಕ ಕೊಡಗಿನಲ್ಲಿ ಪ್ರವಾಸದೊಂದಿಗೆ ವಸತಿ ಯೋಜನೆ ಇತ್ಯಾದಿ ಪರಿಶೀಲಿಸುವ ಇಂಗಿತ ವ್ಯಕ್ತಪಡಿಸಿದರು.
ಅಲ್ಲದೆ ಸಂತ್ರಸ್ತ ಕೃಷಿಕರಿಗೆ ನಷ್ಟ ಪರಿಹಾರ, ಮನೆ ಕಳೆದುಕೊಂಡಿರುವವರಿಗೆ ಬಾಡಿಗೆ ಹಣ ಇತ್ಯಾದಿ ಕಲ್ಪಿಸಿದ್ದು, ಕೃಷಿ ಹಾನಿ ನೆರವು ಕೂಡ ರೈತರ ಖಾತೆಗಳಿಗೆ ಹಂಚಿಕೆ ಮಾಡಲಾಗುತ್ತಿದೆ ಎಂದು ಸಚಿವ ಸಾ.ರಾ. ಮಹೇಶ್ ನೆನಪಿಸಿದರು.
ಜನ ನಗುತ್ತಿದ್ದಾರೆ : ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ರಚನೆಗೊಂಡ ಬಳಿಕ ನಿರಂತರವಾಗಿ ಬಿಜೆಪಿಯವರು ಅಪಪ್ರಚಾರದೊಂದಿಗೆ ಈ ಸರಕಾರ ಪತನಗೊಳ್ಳುವ ಮಾತನಾಡುತ್ತಿದ್ದು, ಪದೇ ಪದೇ ಇಂತಹ ಹೇಳಿಕೆಗಳಿಂದ ರಾಜ್ಯದಲ್ಲಿ ಜನತೆ ನಗುವಂತಾಗಿದೆ ಎಂದು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಕುಮಾರಸ್ವಾಮಿ ಅವರೇ ಮುಂದೆಯೂ ಐದು ವರ್ಷ ಕಾಲ ಮುಖ್ಯಮಂತ್ರಿಯಾಗಿ ಮುಂದುವರೆಯುವ ವಿಶ್ವಾಸ ವ್ಯಕ್ತಪಡಿಸಿದರು.