ಶ್ರೀಮಂಗಲ, ಮೇ 11: ಮಾಜಿ ಸೈನಿಕರ ಹಾಗೂ ರಕ್ಷಣಾ ಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವವರ ಮಕ್ಕಳು ವಿದ್ಯಾಭ್ಯಾಸದಲ್ಲಿ ಹಾಗೂ ಕ್ರೀಡೆ ಮತ್ತಿತರ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡುತ್ತಿರುವದರೊಂದಿಗೆ ರಕ್ಷಣಾ ಪಡೆಗೆ ಸೇರಲು ಆಸಕ್ತಿ ಹೊಂದುತ್ತಿರುವದು ಸಂತಸದ ವಿಷಯವಾಗಿದ್ದು ಇದಕ್ಕೆ ಪೋಷಕರು ಒತ್ತು ನೀಡುವದು ಅತ್ಯವಶ್ಯ ಎಂದು ಕೊಡಗು ಮಾಜಿ ಸೈನಿಕರ ಸಂಘದ ಅಧ್ಯಕ್ಷ ನಿವೃತ್ತ ಮೇಜರ್ ಜನರಲ್ ಬಾಚಮಂಡ ಎ. ಕಾರ್ಯಪ್ಪ ತಿಳಿಸಿದರು.
ನಂ. 33ನೇ ಮಾಜಿ ಸೈನಿಕರ ಸಂಘ ಟಿ.ಶೆಟ್ಟಿಗೇರಿ ಇದರ ಕಟ್ಟಡ ಉದ್ಘಾಟನೆ ಹಾಗೂ ಸಂತೋಷ ಕೂಟ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಬದುಕಿನಲ್ಲಿ ವಿದ್ಯಾಭ್ಯಾಸವೇ ಅತ್ಯವಶ್ಯವಾಗಿದ್ದು ತಮ್ಮ ಮಕ್ಕಳಿಗೆ ಉತ್ತವi ವಿದ್ಯಾಭ್ಯಾಸ ನೀಡಿ ತಮ್ಮ ಬದುಕನ್ನು ಕಟ್ಟಿಕೊಳ್ಳುವದರೊಂದಿಗೆ ಪೋಷಕರನ್ನು ಚೆನ್ನಾಗಿ ಸಾಕುವ ಜವಾಬ್ದಾರಿ ವಹಿಸಿಕೊಡಬೇಕಾಗಿದೆ. ಪೋಷಕರು ತಮ್ಮ ಬಾಲ್ಯದಲ್ಲಿ ಕಷ್ಟ ಪಟ್ಟು ಮಕ್ಕಳನ್ನು ಬೆಳೆಸಿ ಒಂದು ಹಂತಕ್ಕೆ ತಂದ ನಂತರವು ಪುನಹಃ ಕಷ್ಟ ಪಡಬೇಕಾಗಿಲ್ಲ. ಮಕ್ಕಳು ವಯಸ್ಸಾದ ಪೋಷಕರನ್ನು ಸಾಕುವಂತಾಗಬೇಕು ಎಂದರು.
ಮುಖ್ಯ ಅತಿಥಿ ಡಾ. ವಿಜಯ ಕುಮಾರ್ ಸಂಘದ ಕಾರ್ಯ ಚಟುವಟಿಕೆಗಳಿಗೆ ಎಲ್ಲಾ ರೀತಿಯ ಸಹಕಾರ ನೀಡುವ ಭರವಸೆ ನೀಡಿ ಸಂಘದ ಕಲ್ಯಾಣ ನಿಧಿಗೆ ಒಂದು ಲಕ್ಷ ರೂ.ಗಳ ದೇಣಿಗೆ ನೀಡಿದರು.
ಕರ್ನಾಟಕ ಕರ್ವೇಲ್‍ನ ಮಾಜಿ ಅಧ್ಯಕ್ಷ ಎ.ಟಿ. ರಂಗನಾಥ್ ಐವತ್ತು ಸಾವಿರ ರೂ.ಗಳ ದೇಣಿಗೆ ನೀಡುವದರೊಂದಿಗೆ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಅರ್ಥಿಕ ಸಹಕಾರ ನೀಡುವ ಭರವಸೆ ನೀಡಿದರು.
ಮೇಜರ್ ಚಂಗಪ್ಪ ಮಾತನಾಡಿ ಮಾಜಿ ಸೈನಿಕರ ಯಾವದೇ ಕುಂದು ಕೊರತೆಗಳಿದ್ದರು ಕೊಡಗು ಮಾಜಿ ಸೈನಿಕರ ಸಂಘದ ವತಿಯಿಂದ ಪರಿಹರಿಸಲು ಕ್ರಮ ಕೈಗೊಳ್ಳಲಾಗುವದು ಎಂದರು.
ಟಿ.ಶೆಟ್ಟಿಗೇರಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕಟ್ಟೇರ ವಿಶ್ವನಾಥ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಟಿ.ಶೆಟ್ಟಿಗೇರಿ ಗ್ರಾ.ಪಂ. ಅಧ್ಯಕ್ಷ ಮಚ್ಚಮಾಡ ಎನ್. ಸುಮಂತ್ ಭಾಗವಹಿಸಿದ್ದರು. ಚಂಗುಲಂಡ ಅಶ್ವಿನ್ ಸತೀಸ್ ಪ್ರಾರ್ಥಿಸಿ, ಉಪಾಧ್ಯಕ್ಷ ಮನ್ನೇರ ರಮೇಶ್ ಸ್ವಾಗತಿಸಿ, ಅಪ್ಪಚಂಗಡ ಮೋಟಯ್ಯ ನಿರೂಪಿಸಿ, ಕಾರ್ಯದರ್ಶಿ ಉಳುವಂಗಡ ಗಣಪತಿ ವಂದಿಸಿದರು.
ಈ ಸಂದರ್ಭ ಶೌರ್ಯ ಪ್ರಶಸ್ತಿ ಪಡೆದ ಹೆಚ್.ಎನ್. ಮಹೇಶ್, ಕಟ್ಟಡ ಹಣದಾನಿಗಳಾದ ಕೈಬಿಲೀರ ಪಾರ್ವತಿ ಬೋಪಯ್ಯ, ಸಂಘದ ಅಧ್ಯಕ್ಷ ಕಟ್ಟೇರ ವಿಶ್ವನಾಥ್, ಮಾಜಿ ಅಧ್ಯಕ್ಷ ಚಟ್ಟಂಡ ಕಾರ್ಯಪ್ಪ, ತೂಕ್ ಬೊಳಕ್ ಕಲೆ ಕ್ರೀಡೆ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮುಲ್ಲೇಂಗಡ ಶಂಕರಿ ಪೊನ್ನಪ್ಪ, ಜೆ.ಸಿ.ಐ. ಪೊನ್ನಂಪೇಟ್ ಗೋಲ್ಡನ್ ಸಂಸ್ಥೆಯ ಅಧ್ಯಕ್ಷೆ ಕೊಣಿಯಂಡ ಕಾವ್ಯ, ಮೇಜರ್ ಜನರಲ್ ಬಾಚಮಂಡ ಕಾರ್ಯಪ್ಪ, ಟಿ.ಶೆಟ್ಟಿಗೇರಿ ಗ್ರಾ.ಪಂ. ಅಧ್ಯಕ್ಷ ಮಚ್ಚಮಾಡ ಸುಮಂತ್, ಕರ್ನಾಟಕ ಕರ್ವೇಲ್ ಅಧ್ಯಕ್ಷ ಎ.ಟಿ. ರಂಗನಾಥ್, ಹಾಗೂ ಡಾ. ವಿಜಯ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.