‘ಶಕ್ತಿ’ ವರದಿ ಫಲಶೃತಿ ಗೋಣಿಕೊಪ್ಪಲು, ಮೇ 11: ಗೋಣಿಕೊಪ್ಪ ಪಂಚಾಯ್ತಿ ಬಸ್ ನಿಲ್ದಾಣದಲ್ಲಿ ತಲೆ ಎತ್ತಿ ನಿಂತಿದ್ದ ಗೂಡಂಗಡಿ, ತಳ್ಳು ಗಾಡಿಗಳು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದವು. ತಮ್ಮ ವ್ಯಾಪಾರ ಮುಗಿದ ಮೇಲೆ ತ್ಯಾಜ್ಯ ವಸ್ತುಗಳನ್ನು ನಿಲ್ದಾಣದ ಆಸುಪಾಸಿನಲ್ಲಿ ಬಿಸಾಕುವದರ ಮೂಲಕ ನೈರ್ಮಲ್ಯ ಹಾಳಾಗುತ್ತಿತ್ತು..ಆನೇಕ ಬಾರಿ ಪಂಚಾಯ್ತಿ ನಿರ್ದೇಶನ ನೀಡಿದ್ದರೂ ಈ ಬಗ್ಗೆ ಎಚ್ಚರಗೊಳ್ಳದ ಅಂಗಡಿ ಮಾಲೀಕರು ತಮಗಿಷ್ಟ ಬಂದಂತೆ ಕಾರ್ಯನಿರ್ವಹಿಸುತ್ತಿದ್ದರು. ‘ಶಕ್ತಿ’ ಈ ಬಗ್ಗೆ ಸಮಗ್ರ ವರದಿ ಪ್ರಕಟಿಸುತ್ತಿದಂತೆಯೇ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಚಂದ್ರಮೌಳಿ ಗ್ರಾಮ ಪಂಚಾಯ್ತಿ ಸದಸ್ಯರ ಸಹಕಾರ ಪಡೆದು ಹಿರಿಯ ಅಧಿಕಾರಿಗಳ ಸೂಚನೆಯಂತೆ ಬಸ್ ನಿಲ್ದಾಣದಲ್ಲಿ ಶುಚಿತ್ವ ಕಾಪಾಡುವ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಿದ್ದಾರೆ. ಎಲ್ಲೆಂದರಲ್ಲಿ ನಿಲ್ಲಿಸಿದ್ದ ಗೂಡಂಗಡಿಗಳನ್ನು ತೆರವುಗೊಳಿಸಿ ಬದಲಿ ಸ್ಥಳದಲ್ಲಿ ವ್ಯಾಪಾರ ಮಾಡಲು ಅನುಕೂಲ ಕಲ್ಪಿಸಿದ್ದಾರೆ. ಇದರಿಂದ ಅನೇಕ ಸಮಯಗಳಿಂದ ಕಿಷ್ಕಿಂದೆಯಂತಿದ್ದ ಬಸ್ ನಿಲ್ದಾಣ ಈಗ ವಿಸ್ತೀರ್ಣಗೊಂಡಿದ್ದು ಹರಡಿದ್ದ ಕಸ ಕಡ್ಡಿಗಳು,ತ್ಯಾಜ್ಯಗಳು, ಪ್ಲಾಸ್ಟಿಕ್‍ಗಳು ಮಾಯವಾಗಿವೆ. ಯಾವದೇ ವ್ಯಾಪಾರಸ್ಥರು ಹೊರಗಿನಿಂದ ಬಂದು ನಿಲ್ದಾಣದ ಸುತ್ತಮುತ್ತಲಿನ ಪ್ರದೇಶದಲ್ಲಿ ವ್ಯಾಪಾರ ಮಾಡುವದನ್ನು ನಿಷೇಧಿಸಲಾಗಿದೆ. ಒಂದು ವೇಳೆ ನಿಯಮಬಾಹಿರವಾಗಿ ವ್ಯಾಪಾರ ನಡೆಸಲು ಮುಂದಾದರೆ ಅಂತಹವರ ಮೇಲೆ ಕಠಿಣ ಕ್ರಮಕೈಗೊಳ್ಳಲು ಪೊಲೀಸರಿಗೆ ಲಿಖಿತ ದೂರನ್ನು ನೀಡಲಾಗಿದೆ ಎಂದು ಪಿಡಿಒ ಚಂದ್ರಮೌಳಿ ‘ಶಕ್ತಿ’ಗೆ ತಿಳಿಸಿದರು.
-ಹೆಚ್.ಕೆ. ಜಗದೀಶ್