ಕಾಕೋಟುಪರಂಬು, ಮೇ 9: ಜಿಲ್ಲೆಯಲ್ಲಿ ಕಳೆದ ಹಲವಷ್ಟು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಕೊಡವ ಕೌಟುಂಬಿಕ ಹಾಕಿ ನಮ್ಮೆ ಹಿಂದಿನ ವರ್ಷಗಳಂತೆ ನಡೆದಿಲ್ಲ. ಆದರೂ ಹಾಕಿಯ ಜೀವಂತಿಕೆಯನ್ನು ಮುಂದುವರಿಸುವ ನಿಟ್ಟಿನಲ್ಲಿ ಹಾಕಿ ಕೂರ್ಗ್ ಸಂಸ್ಥೆ ಕಾಕೋಟುಪರಂಬುವಿನಲ್ಲಿ ಆಯೋಜಿಸಿದ್ದ ವಿಭಿನ್ನ ಮಾದರಿಯ ಕೌಟುಂಬಿಕ ಹಾಕಿ ಪಂದ್ಯಾವಳಿ ಇದೀಗ ನಿರ್ಣಯಕ ಹಂತ ತಲುಪಿದ್ದು, ತಾ. 10ರಂದು (ಇಂದು) ಫೈನಲ್ ಪಂದ್ಯಾಟ ಜರುಗಲಿದೆ.ಈ ತನಕದ ಕೌಟುಂಬಿಕ ಹಾಕಿ ಉತ್ಸವಗಳಲ್ಲಿ ಪ್ರಶಸ್ತಿ ಸೇರಿದಂತೆ ನಿರ್ಣಯಕ ಘಟ್ಟದತ್ತ ತಲಪಿದ್ದ ಬಲಿಷ್ಠ 10 ತಂಡಗಳ ನಡುವಿನ ಚಾಂಪಿಯನ್ಸ್ ಲೀಗ್ ಹಾಗೂ 150 ಕುಟುಂಬಗಳು ಭಾಗವಹಿಸಿದ್ದ ನಾಕೌಟು ಪಂದ್ಯಾವಳಿಯ ಎರಡು ಪ್ರತ್ಯೇಕ ಫೈನಲ್ ಪಂದ್ಯಗಳು ತ. 10ರ ವಿಶೇಷತೆಯಾಗಿದ್ದು, ಹಾಕಿ ಅಭಿಮಾನಿಗಳಿಗೆ ಒಂದೇ ದಿನ ಎರಡು ಫೈನಲ್ ಪಂದ್ಯ ವೀಕ್ಷಿಸುವ ‘ಡಬಲ್ ಧಮಾಕ’ ಅವಕಾಶ ದೊರೆತಿದೆ.ಚಾಂಪಿಯನ್ಸ್ ಲೀಗ್‍ನ ಫೈನಲ್ ಹಂತಕ್ಕೆ ಮಾಜಿ ಚಾಂಪಿಯನ್ ಕುಟುಂಬಗಳಾದ ಪರದಂಡ ಹಾಗೂ ಮಂಡೇಪಂಡ ಕುಟುಂಬಗಳು ಪ್ರವೇಶಿಸಿದ್ದರೆ, ನಾಕೌಟ್ ಪಂದ್ಯಾಳಿಯ ಅಂತಿಮ ಹಂತಕ್ಕೆ ಇದೇ ಪ್ರಥಮ ಬಾರಿಗೆ ಎಂಬಂತೆ ಪುದಿಯೊಕ್ಕಡ ಹಾಗೂ ಕಾಳೇಂಗಡ ತಂಡಗಳು ಅರ್ಹತೆ ಪಡೆದಿವೆ.

ವಿಜೇತರಿಗೆ.... (ಚಾಂಪಿಯನ್ಸ್ ಟ್ರೋಫಿ)

ಚಾಂಪಿಯನ್ಸ್ ಟ್ರೋಫಿಯ ವಿಜೇತ ತಂಡಕ್ಕೆ ಈ ಬಾರಿ ರೂ. 60 ಸಾವಿರ ನಗದು ಹಾಗೂ ರನ್ನರ್ಸ್ ತಂಡಕ್ಕೆ ರೂ. 40 ಸಾವಿರ ನಗದು ಬಹುಮಾನ ನೀಡಲಾಗುತ್ತಿದೆ. ಸೆಮಿಫೈನಲ್ ತಲಪಿದ್ದ ತಂಡಗಳು ತಲಾ ರೂ. 10 ಸಾವಿರ ಬಹುಮಾನ ಪಡೆಯಲಿವೆ.

ಚಾಂಪಿಯನ್ ಕಫ್

ಈ ಬಾರಿಯ ಚಾಂಪಿಯನ್‍ಶಿಪ್ ಪಂದ್ಯಾವಳಿಗಳು ವಿಜೇತ ತಂಡ

ರೂ. 50 ಸಾವಿರ ನಗದು, ರನ್ನರ್ಸ್ ತಂಡ ರೂ. 30 ಸಾವಿರ ಮತ್ತು ಸೆಮಿಫೈನಲ್ ತಲುಪಿದ್ದ ತಂಡಗಳಿಗೆ ತಲಾ ರೂ. 10 ಸಾವಿರ ಬಹುಮಾನ ನೀಡಲಾಗುವದು.

ಸಮಾರೋಪ ಸಮಾರಂಭ : ಸಮಾರೋಪ ಸಮಾರಂಭ ಹಾಕಿ ಕೂರ್ಗ್ ಸಂಸ್ಥೆಯ ಅಧ್ಯಕ್ಷ ಪೈಕೆರ ಕಾಳಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಅತಿಥಿಗಳಾಗಿ ಮಾಜಿ ಒಲಿಂಪಿಯನ್

(ಮೊದಲ ಪುಟದಿಂದ) ಎಂ.ಎಂ. ಸೋಮಯ್ಯ, ದಾನಿ ಮಾದಾಪುರದ ಸಿ.ಪಿ. ಅಪ್ಪಣ್ಣ ಪಾಲ್ಗೊಳ್ಳಲಿದ್ದಾರೆ. ಪಂದ್ಯಾವಳಿ ನಿರ್ದೇಶಕ ಮೊಳ್ಳೆರ ಸುಬ್ಬಯ್ಯ, ಕಾಕೋಟುಪರಂಬು ಸ್ಪೋಟ್ರ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ಮೇವಡ ಟಿ. ಚಿಣ್ಣಪ್ಪ, ಹಾಕಿ ಕೂರ್ಗ್‍ನ ಉಪಾಧ್ಯಕ್ಷ ಕಳ್ಳಿಚಂಡ ಪ್ರಸಾದ್,

ಟಾಟಾ ಕಾಫಿಯ ಪ್ರಧಾನ ವ್ಯವಸ್ಥಾಪಕ ಮರುವಂಡ ಗಣಪತಿ, ದಾನಿಗಳಾದ ಕುಪ್ಪಂಡ ಪೊನ್ನಪ್ಪ, ಬುಟ್ಟಿಯಂಡ ಬೋಪಣ್ಣ ಅವರುಗಳು ಉಪಸ್ಥಿತರಿರುವರು.