*ಸಿದ್ದಾಪುರ, ಮೇ 10: ಕೊಡಗಿನ ಇತರ ಪಟ್ಟಣಗಳಂತೆ ನೆಲ್ಯಹುದಿಕೇರಿ ಕೂಡ ಪ್ರಮುಖ ವಾಣಿಜ್ಯ ಪಟ್ಟಣವಾಗಿ ಲಂಗುಲಾಗಾಮಿಲ್ಲದೇ ಬೆಳೆಯುತ್ತಿದೆ. ರಸ್ತೆ ಬದಿಯ ಹಳ್ಳಿಯಂತೆ ಇದ್ದ ನೆಲ್ಯಹುದಿಕೇರಿ ಕೃಷಿ ಗದ್ದೆಗಳು, ಕಾಫಿ ತೋಟಗಳಾದಿಯಾಗಿ ಖಾಲಿ ಬಿದ್ದಿದ್ದ ಪ್ರತಿ ಸ್ಥಳದಲ್ಲಿ ಎರಡು ಮೂರು ಅಂತಸ್ತಿನ ಕಟ್ಟಡಗಳು ಎದ್ದು ನಿಂತು ವ್ಯಾಪಾರ ಪಹಿವಾಟಿನ ಕೇಂದ್ರವಾಗಿ ಬೆಳೆಯುತ್ತಿದೆ. ಕಳೆದ ಐದು ವರ್ಷಗಳ ಈಚೆಗಂತೂ ಇಲ್ಲಿನ ಜನಸಂಖ್ಯೆ ಕೂಡ ಇಮ್ಮಡಿಗೊಳ್ಳುತ್ತಾ ಸಾಗುತ್ತಿದೆ. ಪಟ್ಟಣ ವ್ಯಾಪ್ತಿ ಇಷ್ಟೆಲ್ಲಾ ಮುಂದುವರೆಯುತ್ತಿದ್ದರೂ ಗ್ರಾಮಾಡಳಿತ ಮಾತ್ರ ಪಟ್ಟಣಕ್ಕೆ ಒದಗಬೇಕಾದ ಅಗತ್ಯ ಮೂಲ ಸೌಕರ್ಯ ಒದಗಿಸಲಾಗದೇ ಸರಿಯಾದ ಸ್ಪಷ್ಟ ಕಲ್ಪನೆಯೂ ಇಲ್ಲದೆ ಪರದಾಡುತ್ತಿದೆ.

ಪಟ್ಟಣದೊಂದಿಗೆ ಕಸ ವಿಲೇವಾರಿ ಸಮಸ್ಯೆಯೂ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ನೆಲ್ಯಹುದಿಕೇರಿ ಪಟ್ಟಣ್ಣ ಪ್ರವೇಶಿಸಲು ಒಂದು ಕಿಲೋಮೀಟರು ದೂರ ಇರುವಾಗಲೇ ನೆಲ್ಯಹುದಿಕೇರಿ ಎಷ್ಟು ಗಬ್ಬೆದ್ದು ನಾರುತ್ತಿದೆ ಎಂಬದು ಗೋಚರವಾಗುತ್ತದೆ. ಅತ್ತಿಮಂಗಲದಿಂದ ಕಾವೇರಿ ನದಿ ಸೇತುವೆವರೆಗೂ ಸುಮಾರು ಎರಡು ಕಿಲೋಮೀಟರ್‍ನಷ್ಟು ಕಸದ ರಾಶಿ ರಸ್ತೆಯ ಇಕ್ಕೆಲಗಳಲ್ಲಿ ಬಿದ್ದು ನಾರುತ್ತಿದೆ.

ಎಲ್ಲೆಂದರಲ್ಲಿ ರಸ್ತೆ ಬದಿಯಲ್ಲಿ ಕಸವನ್ನು ಎಸೆಯುವದನ್ನು ತಡೆಗಟ್ಟಲು ಗ್ರಾಮಾಡಳಿತ ಸರ್ಕೂಟ್ ಕ್ಯಾಮರಾ ಅಳವಡಿಸಿತ್ತು. ಕ್ಯಾಮರಾವನ್ನು ಎಲ್ಲೋ ಅಳವಡಿಸಿದ್ದು, ತ್ಯಾಜ್ಯವನ್ನು ಇನ್ನೆಲ್ಲೋ ಸುರಿಯುತ್ತಿದ್ದಾರೆ. ಸರ್ಕೂಟ್ ಕ್ಯಾಮರಾವನ್ನು ಕೂಡ ವೈಜ್ಞಾನಿಕವಾಗಿ ಇಲ್ಲಿನ ಆಡಳಿತ ಅಳವಡಿಸಿಲ್ಲ ಎಂದು ಗ್ರಾಮಸ್ಥರು ಟೀಕಿಸುತ್ತಿದ್ದಾರೆ.

ಈ ಹಿಂದೆ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಜಾಗ ಗುರುತಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಮತ್ತು ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ನೆಲ್ಯಹುದಿಕೇರಿಗೆ ಬೇಟಿ ನೀಡಿ ಸ್ಥಳ ಗುರುತಿಸಿದ್ದರೂ ಜಾಗದ ಆಸುಪಾಸಿನಲ್ಲಿ ವಸತಿ ಪ್ರದೇಶ ಮತ್ತು ನೀರಿನ ಹರಿವು ಇರುವದರಿಂದ ಗ್ರಾಮಸ್ಥರು ಪ್ರತಿಭಟಿಸಿ ಕಸ ಸುರಿಯಲು ಬೇರೆ ಸ್ಥಳ ಗುರುತಿಸಲು ಸೂಚಿಸಿದ್ದರು. ಕೆಲ ಸದಸ್ಯರು ಕೆಲವು ವಸತಿ ಪ್ರದೇಶಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಹೆಚ್ಚು ಬಡ ಕಾರ್ಮಿಕರೇ ವಾಸ ಮಾಡಿಕೊಂಡಿರುವ ಬರಡಿಯಂತಹ ಪ್ರದೇಶದಲ್ಲಿ ತ್ಯಾಜ್ಯಕ್ಕೆ ಜಾಗ ಗುರುತಿಸುವ ಸ್ವಾರ್ಥವನ್ನು ಪ್ರದರ್ಶಿಸಿದರು. ನೆಲ್ಯಹುದಿಕೇರಿಯ ಗ್ರಾಮ ಪಂಚಾಯತ್ ಸದಸ್ಯರ ಇಚ್ಚಾಶಕ್ತಿಯ ಕೊರತೆಯೇ ಕಸದಿಂದ ನೆಲ್ಯಹುದಿಕೇರಿ ಗಬ್ಬೆದ್ದು ನಾರಲು ಮೂಲ ಕಾರಣ.

ತ್ಯಾಜ್ಯ ಮುಕ್ತಗೊಳಿಸುವ ಬಗ್ಗೆ ಪ್ರತಿಭಟನೆಗಳು ನಡೆದಾಗ ತಹಶೀಲ್ದಾರರು ಸೇರಿದಂತೆ ಗ್ರಾಮಾಭಿವೃದ್ಧಿ ಅಧಿಕಾರಿಗಳು ಮತ್ತು ಸದಸ್ಯರು ಏನೇನೋ ಸಬೂಬು ಹೇಳಿ ಪ್ರತಿಭಟನೆಯನ್ನು ತಣ್ಣಗಾಗಿಸಿದರೇ ಹೊರತು ಗ್ರಾಮದ ಸ್ವಚ್ಛತೆಗೆ ಯಾವದೇ ಕಾರ್ಯಸೂಚಿ ರೂಪಿಸಿಲ್ಲ. ಒಂದು ಕಾಲದಲ್ಲಿ ಭತ್ತದ ಕಣಜ ಎಂದೇ ಖ್ಯಾತವಾಗಿದ್ದ ನೆಲ್ಯಹುದಿಕೇರಿ ಪ್ರಸ್ತುತ ಗಬ್ಬೆದ್ದು ನಾರುತ್ತಿದ್ದು ಗ್ರಾಮ ಇಷ್ಟೊಂದು ಹೊಲಸಾಗಲು ಇಲ್ಲಿನ ಪ್ರತಿಯೊಬ್ಬರ ಕಾಣಿಕೆಯೂ ಇದೆ. -ಅಂಚೆಮನೆ ಸುಧಿ