ಮಡಿಕೇರಿ, ಮೇ 9 : ಅನಿರೀಕ್ಷಿತವಾಗಿ ಬರುವ ವಿಪತ್ತನ್ನು ಸಮಯ ಪ್ರಜ್ಞೆಯಿಂದ ಎದುರಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್ ಸಲಹೆಯಿತ್ತರು.
ಪೊಲೀಸ್ ಘಟಕ ವತಿಯಿಂದ ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಏರ್ಪಡಿಸಲಾಗಿದ್ದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೊಡಗು ಜಿಲ್ಲೆಯಲ್ಲಿ ಕಳೆದ ವರ್ಷ ಸಂಭವಿಸಿದ ದುರಂತವನ್ನು ಅರಿತುಕೊಂಡು ಈ ವರ್ಷ ಸಾಕಷ್ಟು ಸಿದ್ಧ್ದತೆ ಮಾಡಿಕೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ವತಿಯಿಂದ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸಂತ್ರಸ್ತರನ್ನು ಸ್ಥಳಾಂತರ ಮಾಡುವಲ್ಲಿ ಕೈಗೊಳ್ಳಬೇಕಾದ ಕ್ರಮಗಳು ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಬಗ್ಗೆ ಒಂದು ವಾರಗಳ ಕಾಲ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಪ್ರಕೃತಿ ವಿಕೋಪ ಎದುರಿಸುವ ನಿಟ್ಟಿನಲ್ಲಿ 15 ಮಂದಿ ಪೊಲೀಸ್ ಸಿಬ್ಬಂದಿಗಳ ಮೂರು ತಂಡವನ್ನು ರಚಿಸಲಾಗಿದೆ. ಹಾಗೆಯೇ ಡಿಎಆರ್ನ ಒಂದು ತಂಡ ಸೇರಿದಂತೆ ಒಟ್ಟು 60 ಜನ ಸಿಬ್ಬಂದಿಗಳ ನಾಲ್ಕು ತಂಡಗಳನ್ನು ರಚಿಸಲಾಗಿದೆ ಎಂದು ಸುಮನ್ ಹೇಳಿದರು.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ವರ್ಷದಲ್ಲಿ ಸಂಭವಿಸಬಹುದಾದ ಭೂಕುಸಿತ ಹಾಗೂ ಪ್ರವಾಹ ಸಂದರ್ಭದಲ್ಲಿ ವಿಪತ್ತು ನಿರ್ವಹಣೆ ಎದುರಿಸುವಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸುವಂತಾಗಬೇಕು ಎಂದು ಅವರು ಹೇಳಿದರು.
ಚಂಡಮಾರುತ, ಭೂಕಂಪಗಳನ್ನು ಮುಂಚಿತವಾಗಿಯೇ ವೈಜ್ಞಾನಿಕವಾಗಿ ತಿಳಿದುಕೊಳ್ಳಬಹುದು. ಆದರೆ ನೈಸರ್ಗಿಕ ವಿಕೋಪಗಳಾದ ಪ್ರವಾಹ ಮತ್ತು ಭೂ ಕುಸಿತ ತಿಳಿಯುವದು ಕಷ್ಟಸಾಧ್ಯ ಎಂದರು. ಉಪ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್ ಮಾತನಾಡಿ ವಿಪತ್ತು ಸಂದರ್ಭದಲ್ಲಿ ಸಾರ್ವಜನಿಕರನ್ನು ರಕ್ಷಣೆ ಮಾಡುವದು ಎಲ್ಲರ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯ ಜವಾಬ್ದಾರಿ ಹೆಚ್ಚಿನದ್ದಾಗಿದೆ ಎಂದು ಹೇಳಿದರು.
ಬೆಂಗಳೂರಿನ ಟೀಂ ಸೃಷ್ಠಿ ಅಡ್ವೆಂಚರ್ಸ್ ಸಂಸ್ಥೆಯ ತಜ್ಞರಾದ ಸಂತೋಷ್, ಅಕ್ಷಿತಾ ಮತ್ತು ಅನಘಾ ಹಾಗೂ ಪೂನಾದ ಆರ್.ಟಿ.ಜಿಯೋ ಮತ್ತು ಪರಿಸರ ಸಮನ್ವಯ ಸಂಸ್ಥೆಯ ಭೂವಿಜ್ಞಾನಿ ರೆನಿ ಥಾಮಸ್ ಅವರ ತಜ್ಞರ ತಂಡವು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ತರಬೇತಿ ನೀಡುತ್ತಿದೆ. ಮಡಿಕೇರಿ ನಗರ ವೃತ್ತ ನಿರೀಕ್ಷಕ ನಾಗೇಗೌಡ, ಡಿಎಸ್ಬಿ ನಿರೀಕ್ಷಕ ತಿಮ್ಮಪ್ಪ ನಾಯ್ಕ್, ಡಿಸಿಆರ್ಬಿ ನಿರೀಕ್ಷಕ ಇರ್ಷಾದ್ ಅಹಮದ್, ಡಿಸಿಐಬಿ ನಿರೀಕ್ಷಕ ನಾಗೇಶ್ ಹಾಗೂ ಡಿಎಆರ್ನ ಆರ್ಪಿಐ ರಾಚಯ್ಯ ಇತರರರು ಇದ್ದರು.