ಸಿದ್ದಾಪುರ, ಮೇ 9: ಮಹಿಳೆಯರು ಸ್ವಾವಲಂಬಿ ಬದುಕು ಸಾಗಿಸಲು ಪ್ರತಿಯೊಬ್ಬರು ಕಾನೂನು ಅರಿವನ್ನು ಪಡೆದು ಉತ್ತಮ ಸಮಾಜ ನಿರ್ಮಾಣ ಮಾಡಲು ಕೈಜೋಡಿಸಬೇಕೆಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ನೂರುನ್ನೀಸಾ ಕರೆ ನೀಡಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಕಾನೂನು ಸಾಕ್ಷರತಾ ರಥದ ಮೂಲಕ ವಿಶೇಷ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ಪೋಷಕರು ಮಕ್ಕಳಿಗೆ ಶೈಕ್ಷಣಿಕ ವಿದ್ಯಾಭ್ಯಾಸ ನೀಡುವದರೊಂದಿಗೆ ಮಾನವೀಯ ಮೌಲ್ಯಗಳ ಬಗ್ಗೆ ನೈತಿಕ ಶಿಕ್ಷಣವೂ ನೀಡಬೇಕಾಗಿದೆ ಎಂದು ಹೇಳಿದರು.
ನೆಲ್ಲಿಹುದಿಕೇರಿ, ಸಿದ್ದಾಪುರ, ಅವರೆಗುಂದ ಹಾಡಿಯಲ್ಲಿ ನಡೆದ ಕಾನೂನು ಅರಿವು ಕಾರ್ಯಕ್ರಮದಲ್ಲಿ ವಕೀಲರಾದ ಎಸ್.ಎಂ. ಲತಾಕುಮಾರಿ, ಡಿ.ಕೆ. ರಾಜೇಶ್, ತಾಹಿರಾ, ಜಾನಕಿ, ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಾವತಿ, ಉಪಾಧ್ಯಕ್ಷೆ ಸಫಿಯಾ ಮೊಹಮ್ಮದ್, ಅಭಿವೃದ್ಧಿ ಅಧಿಕಾರಿ ನಂಜುಂಡಸ್ವಾಮಿ, ಸಿದ್ದಾಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್ ಸಿದ್ದಾಪುರ ಠಾಣಾಧಿಕಾರಿ ಮಹೇಶ್, ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕ ಬಿ.ಎಸ್. ಜಯಪ್ಪ, ಒಡಿಪಿ ಮಹಿಳಾ ಸಂಘಟನೆಯ ಜಾಯ್ಸ್ ಮೆನೇಜಸ್, ವಿಜಯನಾರಾಯಣ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.