ಶ್ರೀಮಂಗಲ, ಮೇ 9: ದಕ್ಷಿಣ ಕೊಡಗಿನ ಕಾನೂರು ಗ್ರಾಮದ ಮಲ್ಲಂಗೇರೆ ಸಮೀಪ ಹುಲಿ ದಾಳಿಗೆ ಹಾಲು ಕರೆಯುವ ಮಿಶ್ರತಳಿಯ ಹಸುವೊಂದು ಬಲಿಯಾಗಿದೆ. ಕಾನೂರು ಗ್ರಾಮದ ರೈತ ಮಲ್ಲೇಂಗಡ ನಂಜಪ್ಪ (ಈಶ್ವರ) ಅವರಿಗೆ ಸೇರಿದ ಹಸುವನ್ನು ಮೇಯಲು ಗದ್ದೆಯಲ್ಲಿ ಕಟ್ಟಿದ್ದ ಸಂದರ್ಭ ಹುಲಿ ದಾಳಿ ನಡೆಸಿದೆ. ಹುಲಿ ದಾಳಿ ನಡೆಸಿದ ಗ್ರಾಮಕ್ಕೆ ಅರಣ್ಯ ಇಲಾಖೆಯ ಮೇಲಾಧಿಕಾರಿಗಳು ಆಗಮಿಸಿ ಸೂಕ್ತ ಪರಿಹಾರ ನೀಡಲು ಮುಂದಾಗದ ಹಿನ್ನೆಲೆಯಲ್ಲಿ ಹಸುವಿನ ಕಳೇಬರಹವನ್ನು 25 ಕಿ.ಮೀ. ಅಂತರದ ಪೆÇನ್ನಂಪೇಟೆಯ ವಲಯ ಅರಣ್ಯಾಧಿಕಾರಿಯ ಕಚೇರಿಗೆ ತಂದು ಗ್ರಾಮಸ್ಥರು, ರೈತ ಸಂಘದವರು ಪ್ರತಿಭಟನೆ ನಡೆಸಿದರು.

ಹುಲಿ ದಾಳಿ ನಡೆಸಿದ ಸುದ್ದಿ ತಿಳಿಯುತ್ತಿದ್ದಂತೆ ಪೆÇ್ರ. ನಂಜುಂಡಸ್ವಾಮಿ ಬಣದ ಜಿಲ್ಲಾ ರೈತ ಸಂಘದ ಅಧ್ಯಕ್ಷ ಚಿಮ್ಮಂಗಡ ಗಣೇಶ್ ನೇತೃತ್ವದಲ್ಲಿ ನೂರಾರು ಸದಸ್ಯರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಹಸುವಿಗೆ ಅರಣ್ಯ ಇಲಾಖೆ ನೀಡುವ ಪರಿಹಾರ ರೂ. 10 ಸಾವಿರ ಸಾಕಾಗುವದಿಲ್ಲ. ಇದರ ಬದಲಿಗೆ ಪಶುವೈದ್ಯಾಧಿಕಾರಿಗಳು ತಮ್ಮ ಮಹಜರುವಿನಲ್ಲಿ ಮಾಡುವ ಮೌಲ್ಯಮಾಪನದ ದರವನ್ನು ಪರಿಹಾರವಾಗಿ ಸಂತ್ರಸ್ತರಿಗೆ ನೀಡಬೇಕು ಎಂದು ಒತ್ತಾಯಿಸಿದರು.

ರೈತರು ಹಸುವನ್ನು ಅವಲಂಬಿಸಿ ಜೀವನ ಸಾಗಿಸುತ್ತಾರೆ. ಅದರ ಹಾಲು, ಸೆಗಣಿಗಳ ಬಳಕೆಯ ಮೂಲಕ ಆರ್ಥಿಕ ಆದಾಯ ಪಡೆಯುತ್ತಾರೆ. ಆದರೆ ಅಂತಹ ಹಸುವನ್ನು ಹುಲಿ ದಾಳಿ ನಡೆಸಿ ಕೊಂದು ಹಾಕಿದರೆ ಕೇವಲ ರೂ. 10 ಸಾವಿರ ಪರಿಹಾರ ನೀಡಿದರೆ ಹೇಗೆ ಎಂದು ಚಿಮ್ಮಂಗಡ ಗಣೇಶ್ ಅಸಮಾಧಾನ ವ್ಯಕ್ತಪಡಿಸಿದರು. ಆದ್ದರಿಂದ ಹುಲಿ ಅಥವಾ ಕಾಡಾನೆ ಹಾವಳಿಯಿಂದ ಜನ ಜಾನುವಾರುಗಳು ಸಾವುನೋವು ಅನುಭವಿಸುತ್ತಿದ್ದು, ಪರಿಹಾರ ಮೊತ್ತವನ್ನು ಬೆಳೆ ನಷ್ಟ ಹಾಗೂ ಜನ, ಜಾನುವಾರುಗಳ ಪ್ರಾಣ ಹಾನಿಗೆ ನೀಡುವ ಪರಿಹಾರವನ್ನು ಪರಿಷ್ಕರಿಸಬೇಕು, ಸರ್ಕಾರ ಪರಿಹಾರ ಹಣಕ್ಕಾಗಿ ಸಂತ್ರಸ್ತರು ಪ್ರತಿಭಟನೆ ಮಾಡಲು ಅವಕಾಶ ನೀಡದೆ ತಕ್ಷಣ ಪರಿಹಾರ ನೀಡುವ ಮೂಲಕ ಜನಸಾಮಾನ್ಯರ ನೋವಿಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಕಿಸಾನ್ ಸಂಘದ ಅಧ್ಯಕ್ಷ ಚೊಟ್ಟೇಕ್‍ಮಾಡ ರಾಜೀವ್ ಬೋಪಯ್ಯ ಮಾತನಾಡಿ ಈ ಹಿಂದೆ ದಕ್ಷಿಣ ಕೊಡಗಿನ ಹಲವು ಜಾಗದಲ್ಲಿ ಹುಲಿ ದಾಳಿಗೆ ಹಸು ಬಲಿಯಾದ ಪ್ರಕರಣದಲ್ಲಿ ರೂ. 35 ಸಾವಿರದವರೆಗೆ ಪರಿಹಾರ ನೀಡಲಾಗಿದೆ. ಹುಲಿ ಸಂರಕ್ಷಣಾ

(ಮೊದಲ ಪುಟದಿಂದ) ನಿಧಿಯಿಂದ ಹೆಚ್ಚುವರಿ ಪರಿಹಾರ ನೀಡಿದ್ದು, ಅದೇ ರೀತಿ ಇಂತಹ ಪ್ರಕರಣಗಳನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಹೆಚ್ಚಿನ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಈ ಸಂದರ್ಭ ಕಲ್ಲಳ ವಲಯ, ನಾಗರಹೊಳೆ ಅರಣ್ಯ ಉಪವಲಯದ ಎ.ಸಿ.ಎಫ್ ಪೌಲ್ ಅಂಟೋನಿಯವರು ಮಾತನಾಡಿ ಈ ಹಿಂದೆ ಸರ್ಕಾರದ ಪರಿಹಾರ ಮೊತ್ತ 10 ಸಾವಿರ ಮತ್ತು ಹುಲಿ ಸಂರಕ್ಷಣಾ ನಿಧಿಯಿಂದ ಹೆಚ್ಚುವರಿಯಾಗಿ ಪರಿಹಾರ ನೀಡಲಾಗಿತ್ತು. ಆದರೆ ಇದಕ್ಕೆ ಲೆಕ್ಕ ಪರಿಶೋಧನೆಯಲ್ಲಿ ಆಕ್ಷೇಪ ಉಂಟಾದ ಹಿನ್ನಲೆಯಲ್ಲಿ ಹುಲಿ ಸಂರಕ್ಷಣಾ ನಿಧಿಯಿಂದ ಪರಿಹಾರ ನೀಡಲು ಸಾಧ್ಯವಾಗುವದಿಲ್ಲ ಎಂದು ಹೇಳಿದರು. ಸರ್ಕಾರಕ್ಕೆ ಹೆಚ್ಚುವರಿ ಪರಿಹಾರ ನೀಡುವಂತೆ ಪ್ರಸ್ತಾವನೆಯನ್ನು ಕಳುಹಿಸಿದ್ದು, ಅದು ಅಂಗೀಕಾರವಾದರೆ ರೂ. 20 ಸಾವಿರ ಪರಿಹಾರ ದೊರೆಯಲಿದೆ ಎಂದು ಹೇಳಿದರು. ಅಲ್ಲದೆ ಹುಲಿ ದಾಳಿ ಮಾಡಿದ ಸ್ಥಳವು ಪೆÇನ್ನಂಪೇಟೆ ಸಾಮಾಜಿಕ ಅರಣ್ಯ ವ್ಯಾಪ್ತಿಗೆ ಬರುತ್ತದೆ ಆದ್ದರಿಂದ ಈ ಬಗ್ಗೆ ಹೆಚ್ಚುವರಿ ಪರಿಹಾರವನ್ನು ಅವರು ಶಿಫಾರಸ್ಸು ಮಾಡಬೇಕೆಂದು ಹೇಳಿದರು.

ಈ ಸಂದರ್ಭ ಕೊಡಗು ವನ್ಯ ಜೀವಿ ಸಂಘದ ಅಧ್ಯಕ್ಷ ಕರ್ನಲ್ ಸಿ.ಪಿ. ಮುತ್ತಣ್ಣ ಅವರು ಕೊಡಗು ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಕುಮಾರ್ ಅವರೊಂದಿಗೆ ಮಾತನಾಡಿ ಪರಿಹಾರ ಮೊತ್ತವನ್ನು ಹೆಚ್ಚಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಸಂತೋಷ್ ಕುಮಾರ್‍ರವರು ನಿಯಮದಂತೆ ಹತ್ತು ಸಾವಿರ ಪರಿಹಾರ ನೀಡಲು ಸಾಧ್ಯವಿದೆ. ಸಂತ್ರಸ್ತ ರೈತರು ಹೆಚ್ಚುವರಿ ಪರಿಹಾರಕ್ಕೆ ಅರ್ಜಿಯನ್ನು ಅರಣ್ಯ ಇಲಾಖೆಗೆ ನೀಡಿದ್ದಲ್ಲಿ ಅದನ್ನು ಮೇಲಾಧಿಕಾರಿಗಳಿಗೆ ಶಿಫಾರಸ್ಸು ಮಾಡುವದಾಗಿ ಭರವಸೆ ನೀಡಿದರು.

ಇದೇ ಸಂದರ್ಭ ಮಾತನಾಡಿದ ಕರ್ನಲ್ ಮುತ್ತಣ್ಣ ಅವರು ವನ್ಯಪ್ರಾಣಿಗಳ ಹಾವಳಿಯಿಂದ ಜಾನುವಾರು, ಜನರು ಪ್ರಾಣ ಕಳೆದುಕೊಂಡು ಬೆಳೆ ನಷ್ಟದ ಸಂಕಷ್ಟ ಅನುಭವಿಸುತ್ತಿದ್ದಾರೆ. ಪರಿಹಾರದ ಮೊತ್ತವನ್ನು ಮೌಲ್ಯಕ್ಕೆ ಅನುಸಾರ ಹೆಚ್ಚಿಸುವದು ಹಾಗೂ ವನ್ಯಪ್ರಾಣಿಗಳ ಹಾವಳಿಗೆ ಶಾಶ್ವತ ಪರಿಹಾರಗಳನ್ನು ಶಾಸಕಾಂಗದಲ್ಲಿ ಕಾಯಿದೆಯ ಮೂಲಕ ಪಾಸು ಮಾಡಿ ಜಾರಿ ಮಾಡಬೇಕಾಗಿದೆ, ಇದನ್ನು ಸ್ಥಳೀಯ ಜನರು ಹಾಗೂ ಸಂಘ ಸಂಸ್ಥೆಗಳು ಮಾಡಲು ಸಾಧ್ಯವಿಲ್ಲ. ಆದ್ದರಿಂದ ಕೊಡಗಿನ ಶಾಸಕರುಗಳು ಹಾಗೂ ಇತರ ಜನಪ್ರತಿನಿಧಿಗಳು ಈ ಬಗ್ಗೆ ಗಂಭೀರವಾಗಿ ಚಿಂತಿಸಿ ವನ್ಯಪ್ರಾಣಿಗಳ ಹಾವಳಿಗೆ ಶಾಶ್ವತ ಪರಿಹಾರ, ಬೆಳೆ ನಷ್ಟ ಮತ್ತು ಜೀವ ಹಾನಿಗಳಿಗೆ ಗರಿಷ್ಟ ಮೊತ್ತದ ಪರಿಹಾರವನ್ನು ನೀಡಲು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಪೆÇ್ರ. ನಂಜುಂಡಸ್ವಾಮಿ ಬಣದ ಜಿಲ್ಲಾ ರೈತ ಸಂಘದ ಪ್ರಮುಖರಾದ ಚಂಗುಲಂಡ ರಾಜಪ್ಪ, ಮಚ್ಚಮಾಡ ರಂಜಿ, ಐಯ್ಯಮಾಡ ಹ್ಯಾರಿ, ದೇಕಮಾಡ ವಿನು, ಚೊಟ್ಟೆಯಂಡಮಾಡ ಪ್ರವೀಣ್, ಬಾದುಮಂಡ ಮಹೇಶ್, ಮಚ್ಚಮಾಡ ಮಧು, ಕುಂಞಂಗಡ ಸಿದ್ದು, ಮಾಣೀರ ದೇವಯ್ಯ, ಚಟ್ಟಂಗಡ ರೋಹಿತ್, ಗುಡಿಯಂಗಡ ಮುತ್ತು, ಮಾಚಿಮಾಡ ಎಂ. ರವೀಂದ್ರ, ಕಾನೂರು ಗ್ರಾಮದ ಕೇಚಮಾಡ ವಿಶ್ವ, ಕಾಡೇಂಗಡ ರಮೇಶ್, ಚಿರಿಯಪಂಡ ಈಶ ಬೆಳ್ಯಪ್ಪ, ಚೊಟ್ಟೆಕ್‍ಮಾಡ ಬಿದ್ದಪ್ಪ, ಮಚ್ಚಮಾಡ ಬೋಪಣ್ಣ, ಮರಾಠಿ ವಸಂತ ಭಾಗವಹಿಸಿದ್ದರು. ಕಾನೂರು ಪಶುವೈದ್ಯಾಧಿಕಾರಿ ಡಾ. ಚಂದ್ರಶೇಖರ್ ಹÀಸುವಿನ ಮರಣೋತ್ತರ ಪರೀಕ್ಷೆಗೆ ಆಗಮಿಸಿದಾಗ ಅದಕ್ಕೆ ಪ್ರತಿಭಟನಾಕಾರರು ಅವಕಾಶ ನೀಡಲಿಲ್ಲ.

ಪೆÇನ್ನಂಪೇಟೆಗೆ ಹಸುವಿನ ಕಳೆಬರಹವನ್ನು ತಂದು ವಲಯ ಅರಣ್ಯಾಧಿಕಾರಿಗಳ ಕಚೇರಿಯ ಎದುರು ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದಾಗ ಹುಲಿ ದಾಳಿ ನಡೆಸಿದ ಸ್ಥಳ ಪೆÇನ್ನಂಪೇಟೆ ವ್ಯಾಪ್ತಿಗೆ ಬರುವದಿಲ್ಲ. ಇದು ಕಲ್ಲಳ ಅರಣ್ಯ ವ್ಯಾಪ್ತಿಗೆ ಬರಲಿದೆ ಎಂದು ಹೇಳಿದರು. ಇದರಿಂದ ಆಕ್ರೋಶರಾದ ಪ್ರತಿಭಟನಾಕಾರರು ಅರಣ್ಯ ಇಲಾಖೆಯ ನಡೆಯ ಬಗ್ಗೆ ತೀವ್ರ ಕಿಡಿಕಾರಿದರು.

ಮತ್ತೊಂದು ಬಣದಿಂದಲೂ ಪ್ರತಿಭಟನೆ

ಹುಲಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದಲೂ ಪ್ರತಿಭಟನೆ ನಡೆಸಲಾಯಿತು. ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ, ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ ಅವರುಗಳು ನಾಗರಹೊಳೆ ಅರಣ್ಯ ಉಪ ಸಂರಕ್ಷಣಾಧಿಕಾರಿ ಪೌಲ್ ಆ್ಯಂಟನಿ ಅವರೊಂದಿಗೆ ಚರ್ಚಿಸಿ ಪರಿಹಾರಕ್ಕೆ ಆಗ್ರಹಿಸಿದರು. ಚೆಟ್ರುಮಾಡ ಸುಜಯ್, ಆಲೆಮಾಡ ಮಂಜುನಾಥ್ ಮತ್ತಿತರ ರೈತ ಪ್ರಮುಖರು ಪಾಲ್ಗೊಂಡಿದ್ದರು.