ಮಡಿಕೇರಿ, ಮೇ 8: ಮಾನವೀಯತೆಯಿಂದ ಶಾಂತಿಯ ಕಡೆಗೆ ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಅಂತರ್ರಾಷ್ಟ್ರೀಯ ರೆಡ್ಕ್ರಾಸ್ ಮಾನವೀಯ ಮೌಲ್ಯ ಮತ್ತು ತತ್ವಗಳನ್ನು ಪರಿಣಾಮಕಾರಿಯಾಗಿ ವಿಶ್ವದಾದ್ಯಂತ ಪಸರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಕೊಡಗು ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ವಿಶಾಲ್ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಕೊಡಗು ರೆಡ್ ಕ್ರಾಸ್ ಸಂಸ್ಥೆ ಮತ್ತು ವೈದ್ಯಕೀಯ ಕಾಲೇಜಿನ ಯೂತ್ ರೆಡ್ ಕ್ರಾಸ್ ಸಂಸ್ಥೆಗಳ ವತಿಯಿಂದ ಜರುಗಿದ ವಿಶ್ವ ರೆಡ್ ಕ್ರಾಸ್ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಡಾ. ವಿಶಾಲ್ ಕುಮಾರ್, ರೆಡ್ ಕ್ರಾಸ್ ಸಂಸ್ಥೆ ಜಗತ್ತಿನಾದ್ಯಂತ ಶಾಂತಿ ಮತ್ತು ಸಮುದಾಯ ಸೇವೆಗೆ ಖ್ಯಾತವಾಗಿದ್ದು ಸ್ವಯಂಪ್ರೇರಿತ ಸೇವೆಗೆ ಮೀಸಲಾಗಿ ರುವ ವಿಶ್ವದ ಪ್ರಮುಖ ಸಂಘಟನೆ ಯಾಗಿದೆ ಎಂದು ಶ್ಲಾಘಿಸಿದರು. ರೆಡ್ ಕ್ರಾಸ್ ಸಂಸ್ಥೆಗೆ ಕಾರ್ಯಕರ್ತರಾಗಿ ನೋಂದಾಯಿಸಿಕೊಳ್ಳುವದು ಸೇವಾ ಮನೋಭಾವ ಹೊಂದಿರುವ ಪ್ರತಿಯೋರ್ವ ಕರ್ತವ್ಯವಾಗಿರ ಬೇಕೆಂದೂ ಡಾ.ವಿಶಾಲ್ ಕುಮಾರ್ ಕರೆ ನೀಡಿದರು.
ರೆಡ್ಕ್ರಾಸ್ ಸಂಸ್ಥೆಯ ಕೊಡಗು ಶಾಖೆಯ ಸಭಾಪತಿ ಬಿ.ಕೆ. ರವೀಂದ್ರ ರೈ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ರೆಡ್ಕ್ರಾಸ್ ವತಿಯಿಂದ ಸಾಕಷ್ಟು ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ವಿಕೋಪ ಪರಿಸ್ಥಿತಿಯಲ್ಲಿಯೂ ಈಗಾಗಲೇ ಅನೇಕ ಗ್ರಾಮಸ್ಥರಿಗೆ ನೆರವು ನೀಡಲಾಗಿದೆ. ಕೊಡಗಿನ ಹಲವಾರು ಕಾಲೇಜುಗಳಲ್ಲಿ ಯೂತ್ ರೆಡ್ಕ್ರಾಸ್ ಘಟಕಗಳನ್ನು ಪ್ರಾರಂಭಿಸುವ ಮೂಲಕ ರಕ್ತದಾನ ಶಿಬಿರ, ಆರೋಗ್ಯ ಶಿಬಿರ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಯೋಜಿಸಲಾಗುತ್ತಿದೆ. ರೆಡ್ಕ್ರಾಸ್ ವಿಶ್ವದಾದ್ಯಂತ ಲಕ್ಷಾಂತರ ಸಾಮಾಜಿಕ ಚಟುವಟಿಕೆ ಉದ್ದೇಶದ ಕಾರ್ಯ ಕರ್ತರ ಸಮೂಹವನ್ನೇ ಹೊಂದಿದ್ದು, ಕೊಡಗಿನಲ್ಲಿಯೂ ರೆಡ್ಕ್ರಾಸ್ ಸಂಘಟನೆಯನ್ನು ಪ್ರಬಲಗೊಳಿಸ ಲಾಗುತ್ತದೆ ಎಂದು ತಿಳಿಸಿದರು.
ಕಾಲೇಜಿನ ಕಮ್ಯುನಿಟಿ ಮೆಡಿಸಿನ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಬಿ.ಎಂ. ಶಿವರಾಜ್ ಮುಖ್ಯ ಉಪನ್ಯಾಸ ನೀಡಿ, ಪ್ರಾರ್ಥನೆಗಿಂತ ಸೇವಾ ಮನೋಭಾವ ಸಂಕಷ್ಟದಲ್ಲಿದ್ದವರಿಗೆ ಹೆಚ್ಚಿನ ನೆರವಿಗೆ ಪರಿಣಾಮಕಾರಿಯಾಗುತ್ತದೆ. ವೈದ್ಯ ವೃತ್ತಿಯನ್ನು ಬಯಸುವವರು ವಿದ್ಯಾರ್ಥಿ ದಿಸೆಯಿಂದಲೇ ಸಾಮಾಜಿಕ ಸೇವೆಗೂ ಆದ್ಯತೆ ನೀಡಬೇಕಾಗಿದ್ದು, ಇದನ್ನು ರೆಡ್ಕ್ರಾಸ್ ಮೂಲಕವೂ ಪಡೆಯಬಹುದು ಎಂದು ಸಲಹೆ ನೀಡಿದರು.
ಆರೋಗ್ಯ ಮತ್ತು ಆರೈಕೆ ಬಗ್ಗೆ ಯೂತ್ ರೆಡ್ಕ್ರಾಸ್ ಮಟ್ಟದಲ್ಲಿಯೇ ವಿದ್ಯಾರ್ಥಿಗಳು ಹೆಚ್ಚಿನ ಅಂಶಗಳನ್ನು ತಿಳಿದುಕೊಳ್ಳುವಂತೆ ಡಾ. ಶಿವರಾಜ್ ಕರೆ ನೀಡಿದರು. ಯೂತ್ ರೆಡ್ಕ್ರಾಸ್ ಮೂಲಕ ಪರಸ್ಪರ ಸ್ನೇಹತ್ವ ಭಾವನೆಯೂ ಬೆಳೆಯುತ್ತದೆ ಎಂದು ಹೇಳಿದ ಡಾ. ಶಿವರಾಜ್, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯು ಕೊಡಗಿನ ಪ್ರಕೃತಿ ವಿಕೋಪ ಸಂದರ್ಭ ಸಂಕಷ್ಟಕ್ಕೊಳಗಾದವರಿಗೆ ವಿವಿಧ ರೀತಿಯಲ್ಲಿ ಸ್ಪಂದಿಸಿದೆ ಎಂದು ಪ್ರಾತಕ್ಷಿಕೆ ಮೂಲಕ ಮಾಹಿತಿ ನೀಡಿದರು.
ವೈದ್ಯಕೀಯ ಕಾಲೇಜಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಮೇರಿ ನಾಣಯ್ಯ ಮಾತನಾಡಿ, ಮಡಿಕೇರಿಯಲ್ಲಿ ಕೊಡಗಿನ ಪ್ರಥಮ ವೈದ್ಯಕೀಯ ಕಾಲೇಜು ಪ್ರಾರಂಭ ವಾಗುವಲ್ಲಿ ಸಾಕಷ್ಟು ಮಂದಿಯ ಶ್ರಮವಿದ್ದು, ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಗಲಿರುಳು ಕಾಲೇಜಿನ ಶ್ರೇಯೋ ಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ಶ್ಲಾಘಿಸಿದರು. ರೆಡ್ಕ್ರಾಸ್ ಕೊಡಗು ಶಾಖೆಯು ಇದೀಗ ಮೆಡಿಕಲ್ ಕಾಲೇಜಿನಲ್ಲಿ ಯೂತ್ ರೆಡ್ಕ್ರಾಸ್ ಮೂಲಕ ವಿದ್ಯಾರ್ಥಿಗಳಿಗೆ ಸಾಮಾಜಿಕ ಚಟುವಟಿಕೆಗಳ ಬಗ್ಗೆ ಹೆಚ್ಚಿನ ತಿಳುವಳಿಕೆ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದೂ ಮೇರಿ ನಾಣಯ್ಯ ಹರ್ಷ ವ್ಯಕ್ತಪಡಿಸಿದರು.
ರೆಡ್ಕ್ರಾಸ್ ಸಂಸ್ಥೆಯ ಗೌರವ ಕಾರ್ಯದರ್ಶಿ ಎಚ್.ಆರ್. ಮುರಳೀಧರ್ ರೆಡ್ಕ್ರಾಸ್ ಕಾರ್ಯ ಚಟುವಟಿಕೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಕಾಲೇಜಿನ ವಿದ್ಯಾರ್ಥಿನಿ ಐಶ್ವರ್ಯ ಮಾತನಾಡಿ, ರೆಡ್ ಕ್ರಾಸ್ ಸಂಸ್ಥೆ 1 ಬಿಲಿಯನ್ ಜನರಿಗೆ ಈವರೆಗೆ ಜಗತ್ತಿನಾದ್ಯಂತ ನೆರವು ನೀಡಿದ್ದು, ವಾತ್ಸಲ್ಯದೊಂದಿಗೆ ಆರೈಕೆಯ ಧ್ಯೇಯ ಹೊಂದಿದ ಜನಪರ ಕಾಳಜಿಯ ಸಂಘಟನೆ ಇದಾಗಿದೆ ಎಂದರು. ಯೂತ್ ರೆಡ್ ಕ್ರಾಸ್ ಮೂಲಕ ಯುವಪೀಳಿಗೆ ರಕ್ತದಾನ, ಆರೋಗ್ಯ ಶಿಬಿರಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ರೆಡ್ಕ್ರಾಸ್ ಸಂಸ್ಥೆಯ ನಿರ್ದೇಶಕಿ, ವೈದ್ಯಕೀಯ ಕಾಲೇಜಿನ ಸಹಾಯಕ ಪೆÇ್ರಫೆಸರ್ ಡಾ. ವೀಣಾ ಸ್ವಾಗತಿಸಿ, ರೆಡ್ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷ ಅನಿಲ್ ಎಚ್.ಟಿ. ನಿರೂಪಿಸಿ, ವೈದ್ಯಕೀಯ ವಿದ್ಯಾರ್ಥಿನಿಯರಾದ ಪ್ರೇರಣಾ, ಶರಣ್ಯ ಪ್ರಾರ್ಥಿಸಿದ ಕಾರ್ಯಕ್ರಮದ ವೇದಿಕೆಯಲ್ಲಿ ಯೂತ್ ರೆಡ್ಕ್ರಾಸ್ ಸಂಸ್ಥೆಯ ನಿರ್ದೇಶಕ ಎಂ. ಧನಂಜಯ್, ರೆಡ್ ಕ್ರಾಸ್ ಉಪಾಧ್ಯಕ್ಷ ಜೋಸೆಫ್ ಸ್ಯಾಮ್, ಜಂಟಿ ಕಾರ್ಯದರ್ಶಿ ದರ್ಶನ್, ರೆಡ್ಕ್ರಾಸ್ ಜಿಲ್ಲಾ ನಿರ್ದೇಶಕರಾದ ಕೆ.ಡಿ. ದಯಾನಂದ್, ಪಿ.ಆರ್. ರಾಜೇಶ್, ಯೂತ್ ರೆಡ್ ಕ್ರಾಸ್ ನ ವಿದ್ಯಾರ್ಥಿನಿ ವಂದನಾ ಉಪಸ್ಥಿತರಿದ್ದರು.
ರೆಡ್ಕ್ರಾಸ್ ಸಂಸ್ಥೆಯ ವತಿಯಿಂದ ಪ್ರಕೃತಿ ವಿಕೋಪದಲ್ಲಿ ಸಂಕಷ್ಟಕ್ಕೊಳ ಗಾದ 12 ಮಂದಿಗೆ ವಿವಿಧ ಪರಿಕರಗಳ ನೆರವಿನ ಕಿಟ್ಗಳನ್ನು ವಿತರಿಸಲಾಯಿತು.