ಗೋಣಿಕೊಪ್ಪ ವರದಿ, ಮೇ 8 : ರೈತರ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ತಾ. 10 ರಂದು ರೈತ ಸಂಘ, ಹಸಿರು ಸೇನೆ ವತಿಯಿಂದ ಅರಣ್ಯ ಅಧಿಕಾರಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಸಲಾಗುವದು ಎಂದು ರೈತ ಸಂಘ, ಹಸಿರು ಸೇನೆ ಜಿಲ್ಲಾಧ್ಯಕ್ಷ ಮನುಸೋಮಯ್ಯ ತಿಳಿಸಿದರು.

ನಾಗರಹೊಳೆ ಅತಿಥಿ ಗೃಹದಲ್ಲಿ ನಡೆಯಲಿರುವ ವನ್ಯ ಮೃಗಗಳ ದಾಳಿಯಿಂದ ಪ್ರಾಣ ಕಳೆದುಕೊಂಡ ರೈತರ ಕುಟುಂಬಗಳಿಗೆ ಕನಿಷ್ಟ 25 ಲಕ್ಷ ಪರಿಹಾರ. ಕಾಡು ಪ್ರಾಣಿಗಳಿಂದಾಗುವ ಬೆಳೆ ನಾಶದ ಪರಿಹಾರ ಮೊತ್ತವನ್ನು 10 ಪಟ್ಟು ಹೆಚ್ಚುವದು ಸೇರಿದಂತೆ ಸಂವಾದದಲ್ಲಿ ಆನೆ ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯುವಂತೆ ಒತ್ತಾಯಿಸಲಾಗುವದು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ರೈತ ಸಂಘದ ನಿರಂತರ ಹೋರಾಟದ ಫಲವಾಗಿ ತಿತಿಮತಿ ವಲಯದ ಚಕ್ಕೇರ ಜಯಪುರ ಎಸ್ಟೇಟ್‍ನಿಂದ ಕುಂಞರಾಮನ ಕಟ್ಟೆವರೆಗೆ 3 ಕಿ.ಮೀ ರೈಲ್ವೇ ಬ್ಯಾರಿಕೇಡ್ ಅಳವಡಿಸುವ ಕಾಮಗಾರಿಗೆ ಅನುಮೋದನೆ ದೊರೆತಿದೆ. ಕಾಮಗಾರಿ ನಿಧಾನ ಗತಿಯಲ್ಲಿ ಸಾಗುತ್ತಿರುವ ಬಗ್ಗೆ ಅಧಿಕಾರಿಗಳ ಗಮನ ಸೆಳೆಯಲಾಗುವದು ಎಂದು ಹೇಳಿದರು.

ಪಾಲಂಗಾಲದಲ್ಲಿ ಆನೆ ಮೃತಪಟ್ಟ ಸಂದರ್ಭ ಹಾಗೂ ಹರಿಹರ ಗ್ರಾಮದಲ್ಲಿ ಹುಲಿ ಉರುಳಿಗೆ ಸಿಲುಕಿ ಪ್ರಾಣ ಕಳೆದುಕೊಂಡ ಸಂದರ್ಭ ರೈತರ ಮೇಲೆ ಪ್ರಕರಣ ದಾಖಲಿಸಿರುವದನ್ನು ಹಿಂಪಡೆಯುವಂತೆ ಹಾಗೂ ಹುಲಿ ದಾಳಿಗೆ ಜಾನುವಾರುಗಳನ್ನು ಕಳೆದುಕೊಂಡ ಕೃಷಿಕರಿಗೆ ಪರಿಹಾರದ ಮೊತ್ತವನ್ನು ರೂ.10000 ದಿಂದ 40,000 ಕ್ಕೆ ಏರಿಕೆ ಮಾಡುವಂತೆ ಒತ್ತಾಯಿಸಲಾಗುವದು.

ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ಮಾತನಾಡಿ ವನ್ಯ ಜೀವಿಗಳಿಂದ ಪ್ರಾಣ ಕಳೆದುಕೊಂಡ ಕುಟುಂಬಕ್ಕೆ ನೀಡುವ ಪರಿಹಾರದಲ್ಲಿ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ. ಅರಣ್ಯ ಅಧಿಕಾರಿಗಳು ಹಾಗೂ ಸಾಮಾನ್ಯ ಮನುಷ್ಯ ಪ್ರಾಣ ಕಳೆದುಕೊಂಡರೆ ನೀಡುತ್ತಿರುವ ಪರಿಹಾರ ಮೊತ್ತದಲ್ಲಿ ವ್ಯತ್ಯಾಸವಿದೆ. ಇದನ್ನು ಅಧಿಕಾರಿಗಳ ಗಮನಕ್ಕೆ ತರಲಾಗುವದು ಎಂದು ಹೇಳಿದರು. ನಾಗರಹೊಳೆ ಅತಿಥಿ ಗೃಹದಲ್ಲಿ ನಡೆಯುವ ಸಭೆಗೆ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿ ರೈತ ಸಂಘದ ಹೋರಾಟಕ್ಕೆ ಬಲ ನೀಡುವಂತೆ ಮನವಿ ಮಾಡಿಕೊಂಡರು.

ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಅಜ್ಜಾಮಾಡ ಚಂಗಪ್ಪ, ಸಂಚಾಲಕರಾದ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ ಹಾಗೂ ಮಂಡೇಪಂಡ ಪ್ರವೀಣ್ ಇದ್ದರು.