ಸೋಮವಾರಪೇಟೆ,ಮೇ 8 : ವಿದ್ಯಾಭ್ಯಾಸದೊಂದಿಗೆ ಕ್ರೀಡೆಯತ್ತಲೂ ಹೆಚ್ಚು ಆಸಕ್ತಿ ಬೆಳೆಸಿಕೊಂಡರೆ ಉತ್ತಮ ಭವಿಷ್ಯ ಕಟ್ಟಿಕೊಳ್ಳಬಹುದು. ನಿರಂತರ ಪರಿಶ್ರಮದಿಂದ ಸಾಧನೆಯ ಮೆಟ್ಟಿಲೇರಬಹುದು ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅಭಿಪ್ರಾಯಿಸಿದರು.

ಇಲ್ಲಿನ ಡಾಲ್ಫೀನ್ಸ್ ಸ್ಪೋಟ್ರ್ಸ್ ಕ್ಲಬ್ ಆಶ್ರಯದಲ್ಲಿ ಪಟ್ಟಣದ ಜಿಎಂಪಿ ಶಾಲಾ ಮೈದಾನದಲ್ಲಿ ಕಳೆದ 1 ತಿಂಗಳಿನಿಂದ ನಡೆಯುತ್ತಿರುವ ಬೇಸಿಗೆ ಹಾಕಿ ತರಬೇತಿ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಬೆಳೆಯುತ್ತಿರುವ ಕ್ರೀಡಾಪಟುಗಳಿಗೆ ತರಬೇತಿ ಹಾಗೂ ಪ್ರೋತ್ಸಾಹ ಅಗತ್ಯವಾಗಿದೆ. ಕೊಡಗು ಜಿಲ್ಲೆ ಹಾಕಿಯ ತವರೂರು. ಇಲ್ಲಿನ ಸಾಕಷ್ಟು ಹಾಕಿ ಪಟುಗಳು ರಾಷ್ಟ್ರೀಯ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಈಗಲೂ ಜಿಲ್ಲೆಯ ಹಲವು ಕ್ರೀಡಾಪಟುಗಳು ರಾಷ್ಟ್ರೀಯ ಮಟ್ಟದಲ್ಲಿ ಕೊಡಗಿನ ಕೀರ್ತಿ ಪತಾಕೆ ಹಾರಿಸುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಮಹೇಶ್ ಮಾತನಾಡಿ, ಸೋಮವಾರಪೇಟೆಯಲ್ಲಿ ಕ್ರೀಡಾ ಸೌಲಭ್ಯಗಳ ಕೊರತೆಯಿದೆ. ಇದರಿಂದಾಗಿ ಬೆಳೆಯುವ ಕ್ರೀಡಾಪಟುಗಳಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಶಾಸಕರು ಗಮನಹರಿಸಬೇಕೆಂದು ಮನವಿ ಮಾಡಿದರು. ಮತ್ತೋರ್ವ ಅತಿಥಿ, ವಕೀಲರಾದ ಶ್ರೀನಿಧಿ ಮಾತನಾಡಿ, ಸರ್ಕಾರಗಳು ನೀಡುವ ಕ್ರೀಡಾ ಸೌಲಭ್ಯಗಳು ಗ್ರಾಮ ಗ್ರಾಮಗಳಿಗೂ ತಲಪುವಂತಾಗಬೇಕೆಂದು ಆಶಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾಲ್ಫೀನ್ಸ್ ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷ ಅಶೋಕ್ ವಹಿಸಿದ್ದರು. ಈ ಸಂದರ್ಭ ಹಾಕಿ ತರಬೇತಿ ಪಡೆದ ಕ್ರೀಡಾಪಟುಗಳಿಂದ ಪ್ರದರ್ಶನ ಪಂದ್ಯ ನಡೆಯಿತು. ತರಬೇತಿ ಪಡೆದ ಕ್ರೀಡಾಪಟುಗಳಿಗೆ ಅರ್ಹತಾ ಪತ್ರ ವಿತರಿಸಲಾಯಿತು. ಮಂಜುನಾಥ್ ಹಾಗೂ ಅಭಿಷೇಕ್ ತರಬೇತಿ ನೀಡಿದರು. ಕ್ಲಬ್‍ನ ಪದಾಧಿಕಾರಿಗಳಾದ ಪ್ರಜ್ವಲ್, ಕಿಬ್ಬೆಟ್ಟ ಮಧು, ಮಸಗೋಡು ಸತೀಶ್, ಮಂಜುನಾಥ್, ಪ.ಪಂ. ಸದಸ್ಯ ಮಹೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.