ಗೋಣಿಕೊಪ್ಪಲು, ಮೇ 8: ಗೋಣಿಕೊಪ್ಪಲುವಿನ ಕಸ ಇತ್ಯಾದಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನ ನಡೆದಿದೆ. ಇದಕ್ಕೆ ‘ಶಕ್ತಿ’ ವರದಿಯ ಫಲಶೃತಿ ಪ್ರಮುಖ ಕಾರಣವಾಗಿದೆ. ಗೋಣಿಕೊಪ್ಪಲುವಿನ ಕಸ ವಿಲೇವಾರಿಗೆ ಸಂಬಂಧಿಸಿದಂತೆ ಆಯ್ದ ನಗರದ ಪ್ರಮುಖರೊಂದಿಗೆ ಸೌಹಾರ್ದಯುತ ಸಭೆಯು ಗೋಣಿಕೊಪ್ಪಲುವಿನ ವಾಹನ ಚಾಲಕ ಸಂಘದ ಸಭಾಂಗಣದಲ್ಲಿ ನಡೆಯಿತು. ದಿನದಿಂದ ದಿನಕ್ಕೆ ನಗರದಲ್ಲಿ ಕಸ ಸಮಸ್ಯೆ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ಟೀಕೆ ವ್ಯಕ್ತ ವಾಗುತ್ತಿರುವ ಹಿನ್ನೆಲೆಯಲ್ಲಿ ಸಭೆ ನಡೆಯಿತು. ಜಿಲ್ಲಾ ಪಂಚಾಯ್ತಿ ಸದಸ್ಯರು ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಕೆ.ಬೋಪಣ್ಣ ಮುಂಜಾನೆ ನಗರದ ಹಲವು ಮುಖಂಡರನ್ನು ಬರಮಾಡಿಕೊಂಡು ಕಸ ಸಮಸ್ಯೆ ಬಗ್ಗೆ ಸುದೀರ್ಘ ಚರ್ಚೆ ನಡೆಸಿ ಸಲಹೆ ಪಡೆದರು. ಸಭೆಯಲ್ಲಿ ಗ್ರಾಮದ ಅಭಿವೃದ್ಧಿಯ ವಿಚಾರದಲ್ಲಿ ಗ್ರಾಮ ಪಂಚಾಯಿತಿ
(ಮೊದಲ ಪುಟದಿಂದ) ಸದಸ್ಯರ ಹೊಂದಾಣಿಕೆ ಕೊರತೆ, ಪಂಚಾಯ್ತಿ ಅಧಿಕಾರಿಗಳ ನಿರ್ಲಕ್ಷ್ಯ ಕುರಿತು ಹಲವು ಮುಖಂಡರು ಅಭಿಪ್ರಾಯ ಮಂಡಿಸಿದರು.
ದಿನದಿಂದ ದಿನಕ್ಕೆ ಕಸ ವಿಲೇವಾರಿ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ಪಂಚಾಯ್ತಿಯ ಕೆಲವು ಸದಸ್ಯರಲ್ಲಿ ಕೇವಲ ಸ್ವ ಪ್ರತಿಷ್ಠೆಗಳು ಹೆಚ್ಚಾಗಿರುವದರಿಂದ ನಗರಕ್ಕೆ ಇಂತಹ ಬಂದಿದೆ. ಇಲ್ಲಿಯ ತನಕ ಆಡಳಿತ ನಡೆಸಿವೆ ಪಂಚಾಯಿತಿ ಇಷ್ಟೊಂದು ಬೇಜಾವಾಬ್ದಾರಿ ತನದಿಂದ ನಡೆದುಕೊಂಡ ಉದಾಹರಣೆಗಳಿಲ್ಲ.ಇದಕ್ಕೆ ಪರಿಹಾರ ಕಂಡು ಕೊಳ್ಳುವ ಸಕಾಲ ಇದೀಗ ಬಂದಿದೆ. ಹಲವು ಬಾರಿ ಸಾರ್ವಜನಿಕರೊಂದಿಗೆ, ಸಂಘ ಸಂಸ್ಥೆಯ ಮುಖಂಡರೊಂದಿಗೆ ಪಂಚಾಯ್ತಿ ಸದಸ್ಯರು ಸಭೆ ನಡೆಸೋಣವೆಂದು ಮನವಿ ಮಾಡಿದರು. ಸಾರ್ವಜನಿಕರ ಮಾತಿಗೆ ಮನ್ನಣೆ ದೊರೆತಿಲ್ಲ ಎಂದು ನಗರದ ಹಿರಿಯರು ಬೇಸರ ವ್ಯಕ್ತಪಡಿಸಿದರು. ಅಭಿವೃದ್ಧಿ ದೃಷ್ಟಿಯಿಂದ ಸಾರ್ವಜನಿಕರ ಸಹಭಾಗಿತ್ವ ಪಂಚಾಯ್ತಿಗೆ ಅವಶ್ಯಕವಿರುವದರಿಂದ ಇಂತಹ ಸಭೆ ನಡೆಸಿರುವ ಬಗ್ಗೆ ಶ್ಲಾಘನೆ ವ್ಯಕ್ತವಾಯಿತು.
ಆಯ್ದ ಸಂಘ ಸಂಸ್ಥೆಯ ಮುಖಂಡರು ಹಾಗೂ ಪ್ರಮುಖ ನಾಗರಿಕರು ಸೇರಿ ಪಂಚಾಯ್ತಿ ಸದಸ್ಯರೊಂದಿಗೆ ಸುಧೀರ್ಘ ಸಭೆ ನಡೆಸಲು ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು, ಅಭಿವೃದ್ಧಿ ದೃಷ್ಟಿಯಿಂದ ಯಾರಿಗೂ ಸ್ವ ಪ್ರತಿಷ್ಠೆಗಳು ಬೇಡ ಪಂಚಾಯ್ತಿಯ ಏಳಿಗೆಗೆ ಎಲ್ಲರು ಶ್ರಮಿಸೋಣ ಕಸ ಸಮಸ್ಯೆ ಸೇರಿದಂತೆ ಇನ್ನಿತರ ಸಮಸ್ಯೆಗಳಿಗೆ ಒಗ್ಗಟ್ಟಾಗಿ ತೀರ್ಮಾನಕ್ಕೆ ಬರೋಣವೆಂದು ಅಭಿಪ್ರಾಯ ಕೇಳಿ ಬಂತು. ಜಿಲ್ಲಾ ಪಂಚಾಯ್ತಿ ಸದಸ್ಯರ, ಅಧಿಕಾರಿಗಳ ಮುಂದಾಳತ್ವದಲ್ಲಿ ಆದಷ್ಟು ಬೇಗನೇ ಪಂಚಾಯ್ತಿಯ ಸರ್ವ ಸದಸ್ಯರು ಹಾಗೂ ನಗರದ ಸಂಘ ಸಂಸ್ಥೆಯ ಮುಖಂಡರ ಸಮ್ಮುಖದಲ್ಲಿ ಸಭೆ ನಡೆಸಿ ಕಸ ವಿಲೇವಾರಿ, ಸ್ವಚ್ಛತೆಯ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಸಭೆಯಲ್ಲಿ ಒಮ್ಮತದ ತೀರ್ಮಾನಕ್ಕೆ ಬರಲಾಯಿತು.
ಸಭೆಯಲ್ಲಿ ಚೇಂಬರ್ ಆಫ್ ಕಾಮರ್ಸ್‍ನ ಸ್ಥಾನೀಯ ಸಮಿತಿ ಅಧ್ಯಕ್ಷ ಕಡೇಮಾಡ ಸುನಿಲ್ ಮಾದಪ್ಪ,ಮಾರುಕಟ್ಟೆ ವರ್ತಕರ ಅಧ್ಯಕ್ಷ ಎಂ.ಆರ್.ರಫೀಕ್, ರೋಟರಿ ಸಂಸ್ಥೆಯ ಡಾ.ಚಂದ್ರಶೇಖರ್, ಉದ್ಯಮಿ ಪ್ರಮೋದ್ ಕಾಮತ್, ಮಾಚಿಮಡ ಅಯ್ಯಪ್ಪ, ಹೆಚ್.ವಿ.ಜಗದೀಶ್, ವಕೀಲ ನವೀನ್, ಹಿಂದು ಮಲಯಾಳಿ ಸಮಾಜದ ಅಧ್ಯಕ್ಷ ಶರತ್ ಕಾಂತ್, ಗ್ರಾಮ ಪಂಚಾಯ್ತಿ ಸದಸ್ಯರಾದ ಸುರೇಶ್ ರೈ ಮಾಜಿ ಗ್ರಾಮ ಪಂಚಾಯ್ತಿ ಸದಸ್ಯರಾದ ಅಬ್ದುಲ್ ಜಲೀಲ್ ಸೇರಿದಂತೆ ಇನ್ನಿತರ ಮುಖಂಡರು ಹಾಜರಿದ್ದರು. ‘ಶಕ್ತಿ’ ಇಲ್ಲಿನ ಸಮಸ್ಯೆಗಳ ಬಗ್ಗೆ ಸಚಿತ್ರ ವರದಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
-ಹೆಚ್.ಕೆ.ಜಗದೀಶ್