*ಗೋಣಿಕೊಪ್ಪಲು, ಮೇ 7: ಇಲ್ಲಿನ ಕೂರ್ಗ್ ಪಬ್ಲಿಕ್ ಶಾಲೆಯಲ್ಲಿ ತಮಿಳುನಾಡು ವಿದ್ಯಾರ್ಥಿಗಳ ಸ್ಕೌಟ್ಸ್-ಗೈಡ್ಸ್, ಕಬ್ ಹಾಗೂ ಬುಲ್-ಬುಲ್ ಶಿಬಿರ ನಡೆಯುತ್ತಿದೆ. ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸುತ್ತಿದ್ದಾರೆ. ಸ್ಕೌಟ್ ಗೈಡ್ಸ್ ತರಬೇತಿ ಜತೆಗೆ ಇತರ ಆಟಪಾಠಗಳು ನಡೆಯುತ್ತಿವೆ.

ತಮಿಳುನಾಡು ತಿರುವಣ್ಣೂರು ಜಿಲ್ಲೆಯ ಕವರ್‍ಪೇಟೆ ಆರ್‍ಎಂಟಿ ಮೆಟ್ರಿಕ್ ಶಾಲೆಯ 100 ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. ಒಂದು ವಾರ ನಡೆಯುವ ಶಿಬಿರದಲ್ಲಿ ಸರ್ವಧರ್ಮ ಪ್ರಾರ್ಥನೆ, ಸ್ಕೌಟ್‍ನಾಟ್ಸ್, ಲಾಸೆನ್ಸ್, ರಕ್ತದೊತ್ತಡ ಪರಿಹಾರ ವ್ಯಾಯಾಮ, ಪ್ರಥಮ ಚಿಕಿತ್ಸೆ ಮೊದಲಾದ ಚಟುವಟಿಕೆಗಳು ಹಾಗೂ ತರಬೇತಿ ನಡೆಯುತ್ತಿದೆ. ವಿದ್ಯಾರ್ಥಿಗಳೊಂದಿಗೆ ಆಗಮಿಸಿರುವ ಅಧ್ಯಾಪಕರಾದ ನರ್ಮದಾ, ಕವಿತಾ, ರಾಜ, ಸುಧಾಮಣಿ, ಜಯಲಕ್ಷ್ಮಿ, ಶಾಂತಿ ಹಾಗೂ ಕಾಪ್ಸ್ ಶಾಲೆಯ ಚಿತ್ರಕಲಾ ಶಿಕ್ಷಕ ಪುರೋಹಿತ್, ಬಿ.ಎಂ. ಗಣೇಶ್ ಮೊದಲಾದವರು ವಿವಿಧ ವಿಷಯಗಳ ಬಗ್ಗೆ ತರಬೇತಿ ನೀಡುತ್ತಿದ್ದಾರೆ.

ತಮಿಳುನಾಡಿನಲ್ಲಿ ಉಷ್ಣಾಂಶ ಹೆಚ್ಚಿದೆ. ಕೊಡಗಿನಲ್ಲಿ ತಣ್ಣನೆಯ ವಾತಾವರಣವಿದೆ. ಇಲ್ಲಿನ ಪರಿಸರ ತುಂಬಾ ಇಷ್ಟವಾಗಿದೆ ಎಂದು ಶಿಬಿರಾರ್ಥಿ ಕುಶಾಲ್ ಹರ್ಷ ವ್ಯಕ್ತಪಡಿಸಿದರು. ಈಗಾಗಲೇ 4 ದಿನ ಕಳೆದಿದ್ದು, ತಾ. 7 ರಂದು ಶಿಬಿರ ಮುಕ್ತಾಯವಾಗಲಿದೆ.