ಕಾಕೋಟುಪರಂಬು (ವೀರಾಜಪೇಟೆ), ಮೇ 7: ಹಾಕಿ ಕೂರ್ಗ್ ವತಿಯಿಂದ ಕಾಕೋಟುಪರಂಬು ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕೌಟುಂಬಿಕ ನಾಕೌಟ್ ಪಂದ್ಯಾಟದಲ್ಲಿ ಚಂದುರ, ಕಾಳೇಂಗಡ, ಇಟ್ಟೀರ ಪುದಿಯೊಕ್ಕಡ ತಂಡಗಳು ಸೆಮಿಫೈನಲ್ಸ್ ಹಂತ ತಲಪಿದೆ. ಕಾಳೇಂಗಡ ಪವನ್ ಹ್ಯಾಟ್ರಿಕ್ ಸಾಧನೆ ಮಾಡಿದರು. ಅಂತರಾಷ್ಟ್ರೀಯ ಆಟಗಾರ್ತಿ ಕಂಬೀರಂಡ ಪೊನ್ನಮ್ಮ, ಪುದಿಯೊಕ್ಕಡ ಪರ ಅಂತರಾಷ್ಟ್ರೀಯ ಆಟಗಾರ ಪ್ರಧಾನ್ ಸೋಮಣ್ಣ ತಮ್ಮ ಕುಟುಂಬವನ್ನು ಪ್ರತಿನಿಧಿಸಿದರು.

ಚಂದುರ ಪೆನಾಲ್ಟಿ ಶೂಟೌಟ್‍ನಲ್ಲಿ ಕೋಟೆರ ತಂಡವನ್ನು 3-2 ಗೋಲುಗಳಿಂದ ಪರಾಭವಗೊಳಿಸಿತು. ನಿಗದಿತ ಅವದಿಯಲ್ಲಿ ಯಾವದೇ ಗೋಲಾಗಲಿಲ್ಲ. ಪೆನಾಲ್ಟಿ ಶೂಟೌಟ್‍ನಲ್ಲಿ ಚಂದುರ ಪರ ದೇವಯ್ಯ, ಮುತ್ತಣ್ಣ, ಶಶಿ, ಕೋಟೆರ ಪರ ಭರತ್ ಹಾಗೂ ದಿಲೀಪ್ ಗೋಲು ದಾಖಲಿಸಿದರು.

ಕಾಳೇಂಗಡ ತಂಡ ತೀತಮಾಡ ತಂಡವನ್ನು 5-2 ಗೋಲುಗಳಿಂದ ಮಣಿಸಿತು. ಕಾಳೇಂಗಡ ಪರ ಮೋನಿಷಾ (19.11ನಿ), ಪವನ್ (23,30,47ನಿ)ದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದರು. ತೀತಮಾಡ ಪೊನ್ನಣ್ಣ (47ನಿ) ದಲ್ಲಿ ಗೋಲು ದಾಖಲಿಸಿ ಗೋಲಿನ ಅಂತರವನ್ನು ಕಡಿಮೆ ಗೊಳಿಸಿದರು.

ಇಟ್ಟಿರ ತಂಡ ಕಂಬೀರಂಡ ತಂಡವನ್ನು 2-1 ಗೋಲುಗಳಿಂದ ಸೋಲಿಸಿತು. ಇಟ್ಟಿರ ಪರ ಕುಟ್ಟಪ್ಪ(8ನಿ), ಜಗನ್(12ನಿ), ಕಂಬೀರಂಡ ಪರ ಯೋಗೇಶ್(6ನಿ)ದಲ್ಲಿ ಗೋಲು ದಾಖಲಿಸಿದರು. ಕಂಬೀರಂಡ ಪರ ಅಂತರಾಷ್ಟ್ರೀಯ ಆಟಗಾರ್ತಿ ಪೊನ್ನಮ್ಮ ತಮ್ಮ ತಂಡವನ್ನು ಪ್ರತಿನಿಧಿಸಿದರು.

ಪುದಿಯೊಕ್ಕಡ ತಂಡ 1-0 ಗೋಲಿನಿಂದ ಅರೆಯಡ ತಂಡವನ್ನು ಪರಾಭವ ಗೊಳಿಸಿತು. ಪುದಿಯೊಕ್ಕಡ ಪರ ಅಂತರಾಷ್ಟ್ರೀಯ ಆಟಗಾರ ಪ್ರಧಾನ್ ಸೋಮಣ್ಣ 26ನೇ ನಿಮಿಷದಲ್ಲಿ ಗೋಲು ದಾಖಲಿಸಿ ಸೆಮಿಫೈನಲ್ ಪ್ರವೇಶದ ರೂವಾರಿಯಾದರು.