ಮಡಿಕೇರಿ, ಮೇ 7: ಇಲ್ಲಿನ ಶ್ರೀ ಕೋಟೆ ಮಾರಿಯಮ್ಮ ದೇವಾಲಯದ ಪ್ರತಿಷ್ಠಾಪನಾ ವಾರ್ಷಿಕೋತ್ಸವವು ನಿನ್ನೆ ಸಂಜೆಯಿಂದ ದೈವಿಕ ಕೈಂಕರ್ಯಗಳೊಂದಿಗೆ ಆರಂಭಗೊಂಡಿತು. ಪಯ್ಯವೂರಿನ ಈಶ್ವರನ್ ನಂಬೂದರಿ ನೇತೃತ್ವದಲ್ಲಿ ದೇವತಾ ಕಾರ್ಯದೊಂದಿಗೆ ಇಂದು ಬೆಳಿಗ್ಗೆ ಗಣಪತಿ ಹೋಮ, ಕಲಶಪೂಜೆ, ಸರ್ವಾಲಂಕಾರ ಪೂಜೆ ನೆರವೇರಿತು. ಸನ್ನಿಧಿಯ ನಾಗಪ್ರತಿಷ್ಠಾಪನಾ ಉತ್ಸವದೊಂದಿಗೆ ಪೆರ್ಲಂಪಾಡಿ ರಮಾನಂದ ಭಟ್ ನಾಗಪಾತ್ರಿ ಅವರಿಂದ ನಾಗದರ್ಶನ ಏರ್ಪಡಿಸಲಾಯಿತು.
ವಿಶೇಷ ಪೂಜಾ ಕೈಂಕರ್ಯಗಳೊಂದಿಗೆ ಮಹಾಪೂಜೆ ಬಳಿಕ ಪ್ರಸಾದ ಅನ್ನ ಸಂತರ್ಪಣೆ ನೆರವೇರಿತು. ಅಧಿಕ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾದರು. ಸಂಜೆ ಈ ಪ್ರಯುಕ್ತ ಪಾಷಾಣಮೂರ್ತಿ ದೈವ ಕೋಲದೊಂದಿಗೆ ಹರಕೆ, ಕಾಣಿಕೆ ಸಲ್ಲಿಸಲಾಯಿತು.
ಶ್ರೀ ಕೋಟೆ ಮಾರಿಯಮ್ಮ ದೇವಾಲಯ ಆಡಳಿತ ಮಂಡಳಿ ಪ್ರಮುಖರೊಂದಿಗೆ, ವಿವಿಧ ಸಂಘ - ಸಂಸ್ಥೆಗಳ ಪ್ರಮುಖರು ಈ ಸಂದರ್ಭ ಉಪಸ್ಥಿತರಿದ್ದು, ದೇವತಾ ಕಾರ್ಯಗಳ ಯಶಸ್ಸಿಗೆ ತೊಡಗಿಸಿಕೊಂಡಿದ್ದರು.