ಶ್ರೀಮಂಗಲ, ಮೇ 7: ಮಾಯಮುಡಿ ಗ್ರಾ.ಪಂ. ವ್ಯಾಪ್ತಿಯ ಬಾಳಾಜಿ ಗ್ರಾಮದ ಕೀರೆಹೊಳೆಯ ಸೇತುವೆ ಸಮೀಪ ನದಿಯ ಮಧ್ಯ ಭಾಗಕ್ಕೆ ತ್ಯಾಜ್ಯಗಳನ್ನು ಸುರಿಯುವ ಮೂಲಕ ಜಲಮೂಲಗಳನ್ನು ಕಲುಷಿತಗೊಳಿಸುತ್ತಿರುವದು ಕಂಡುಬಂದಿದೆ.

ನದಿಗೆ ಕೆಲವು ರೆಸಾರ್ಟ್‍ಗಳು ಮತ್ತು ಹೋಂಸ್ಟೇಗಳ ತ್ಯಾಜ್ಯಗಳನ್ನು ಹಾಕಿರುವದು ಕಂಡುಬಂದಿದೆ. ತ್ಯಾಜ್ಯಗಳಲ್ಲಿ ಊಟದ ತಟ್ಟೆ, ಆಹಾರ, ನ್ಯಾಪ್‍ಕಿನ್‍ಗಳು, ಕುಡಿಯುವ ಲೋಟಗಳು, ಪ್ಲಾಸ್ಟಿಕ್ ವಸ್ತುಗಳು ಅಲ್ಲದೆ ಶಾಕಾಹಾರದ ತ್ಯಾಜ್ಯಗಳು ಗೋಚರಿಸಿದೆ.

ರೆಸಾರ್ಟ್, ಹೋಂಸ್ಟೇ ಹಾಗೂ ಇತರ ಸಮಾರಂಭಗಳನ್ನು ಮಾಡುವವರು ಇಲ್ಲಿಗೆ ನಿರಂತರವಾಗಿ ತ್ಯಾಜ್ಯಗಳನ್ನು ಸುರಿಯುತ್ತಿದ್ದು, ಇವುಗಳನ್ನು ತಮ್ಮಲ್ಲಿಯೇ ಸಂಸ್ಕರಿಸಲು ಯಾವದೇ ವ್ಯವಸ್ಥೆ ಮಾಡಿಕೊಳ್ಳದ ಬಗ್ಗೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನದಿಗೆ ಸುರಿದಿರುವ ತ್ಯಾಜ್ಯಗಳಲ್ಲಿ ಕೆಲವು ರೆಸಾರ್ಟ್‍ಗಳ ಹೆಸರು ನ್ಯಾಪ್‍ಕಿನ್‍ಗಳಲ್ಲಿ ಮುದ್ರಿತವಾಗಿವೆ. ಅಲ್ಲದೆ ಸಮಾರಂಭದ ಆಮಂತ್ರಣ ಪತ್ರಿಕೆಗಳು ಹಲವು ತ್ಯಾಜ್ಯದಲ್ಲಿ ಇರುವದು ಕಂಡು ಬಂದಿದ್ದು, ಇಲ್ಲಿ ಯಾರು ತ್ಯಾಜ್ಯವನ್ನು ಸುರಿದಿದ್ದಾರೆ ಎಂದು ಪತ್ತೆ ಹಚ್ಚಲು ಸಹಕಾರಿಯಾಗಿದೆ. ಈ ಬಗ್ಗೆ ಮಾಯಮುಡಿ ಗ್ರಾ.ಪಂ. ಪಿಡಿಓ ಎಸ್.ವಿ. ಮನಮೋಹನ್ ಪ್ರತಿಕ್ರಿಯೆ ನೀಡಿದ್ದು, ಇಲ್ಲಿ ತ್ಯಾಜ್ಯ ಸುರಿದಿರುವ ಬಗ್ಗೆ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪರಿಶೀಲಿಸಿ ಸಂಬಂಧಿಸಿ ದವರಿಗೆ ನೋಟೀಸ್ ನೀಡಿ ಕಾನೂನು ಕ್ರಮ ಕೈಗೊಳ್ಳುವದಾಗಿ ತಿಳಿಸಿದ್ದಾರೆ.