ಮಡಿಕೇರಿ, ಮೇ 6: ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರಾದ ಕೊಡಗು ಜಿಲ್ಲಾಧಿಕಾರಿಯವರ ಆದೇಶದ ಮೇರೆಗೆ ಕೊಡಗು ಜಿಲ್ಲೆಯಲ್ಲಿ ಬಸ್ ಸಂಚಾರಕ್ಕೆ ಯೋಗ್ಯವಾದ ರಸ್ತೆ ಹೊಂದಿರುವ ಎಲ್ಲಾ ಹಳ್ಳಿಗಳಿಗೆ ಸಮರ್ಪಕ ಸಾರಿಗೆ ಸೌಲಭ್ಯ ಒದಗಿಸಲು ಹಾಗೂ ಪ್ರಸ್ತುತ ಇರುವ ಸೌಲಭ್ಯವನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಿದ್ದು, ಜಿಲ್ಲೆಯ ಎಲ್ಲಾ ಹಳ್ಳಿಗಳಿಗೆ ಕ.ರಾ.ರ.ಸಾ. ಸಂಸ್ಥೆಯ ಬಸ್ ಸೌಕರ್ಯವನ್ನು ಕಲ್ಪಿಸಲು ಉದ್ದೇಶಿಸಲಾಗಿದೆ.
ವಿಶೇಷವಾಗಿ ಶಾಲಾ - ಕಾಲೇಜು ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಮತ್ತು ಸಾರ್ವಜನಿಕ ಪ್ರಯಾಣಿಕರು, ಸರಕು ಸಾಗಾಣಿಕೆ ವಾಹನಗಳು ಹಾಗೂ ಟ್ರ್ಯಾಕ್ಟರ್ ಮುಂತಾದ ವಾಹನಗಳಲ್ಲಿ, ಅನಧಿಕೃತವಾಗಿ ಪ್ರಯಾಣಿಸುವದನ್ನು ತಪ್ಪಿಸಲು ಅಗತ್ಯವಿರುವ ಬಸ್ಗಳ ಸಮೀಕ್ಷೆ ನಡೆಸಿ ಪ್ರಸ್ತಾವನೆಯನ್ನು ಕ.ರಾ.ರ.ಸಾ. ಸಂಸ್ಥೆಯ ಅಧಿಕಾರಿಗಳಿಗೆ ಕಳುಹಿಸಲು ಉದ್ದೇಶಿಸಲಾಗಿದೆ.
ಸಾರ್ವಜನಿಕ ಪ್ರಯಾಣಿಕರು, ಸಂಘ-ಸಂಸ್ಥೆಗಳು ಹಾಗೂ ಸಂಬಂಧ ಪಟ್ಟ ಸ್ಥಳೀಯ ಇಲಾಖಾಧಿಕಾರಿಗಳು ಜಿಲ್ಲೆಯಲ್ಲಿ ಸಾರಿಗೆ ವ್ಯವಸ್ಥೆ ಉತ್ತಮಪಡಿಸಲು ಯಾವ ಗ್ರಾಮದಿಂದ ಯಾವ ಪಟ್ಟಣಕ್ಕೆ, ಯಾವ ಮಾರ್ಗದಲ್ಲಿ, ಯಾವ ಸಮಯಕ್ಕೆ ಬಸ್ ಸೌಕರ್ಯದ ಅವಶ್ಯಕತೆ ಇದೆ ಎಂಬದನ್ನು ಲಿಖಿತ ಮನವಿ ಮೂಲಕ ಅಥವಾ ಅಂಚೆ ಕಾರ್ಡ್ನಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ, ಮಡಿಕೇರಿ ಅಥವಾ ಕಚೇರಿಯ ಇ-ಮೇಲ್ ವಿಳಾಸ ಡಿಣomಜಞ@ಥಿಚಿhoo.ಛಿom ಕ್ಕೆ ತಾ. 10 ರೊಳಗಾಗಿ ಕಳುಹಿಸಿ ಕೊಡಬಹುದು. ಹೆಚ್ಚಿನ ವಿವರಗಳಿಗಾಗಿ ಕಚೇರಿ ದೂರವಾಣಿ ಸಂಖ್ಯೆ 08272-2298785 ಸಂಪರ್ಕಿಸಬಹುದಾಗಿದೆ.