ವೀರಾಜಪೇಟೆ. ಮೇ 7: ಕೊಡಗಿನಾದ್ಯಂತ ಜಾತಿ, ಧರ್ಮ ಬೇಧವಿಲ್ಲದೆ ಸಾಮರಸ್ಯ ಕಾಪಾಡಲು ದೇವಣಗೇರಿಯ ಪ್ಲಾಂಟರ್ಸ್ ಕ್ಲಬ್ ಆಯೋಜಿಸಿರುವ ಕಾಲ್ಚೆಂಡು ಪಂದ್ಯಾಟ ಸಮಾಜದ ಶಾಂತಿ ಹಾಗೂ ನೆಮ್ಮದಿಗೆ ಒಳಿತಾಗಲಿದೆ ಎಂದು ವೀರಾಜಪೇಟೆಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಕಿ ಟ್ರಸ್ಟ್‍ನ ಅಧ್ಯಕ್ಷ ಡಾ. ಎಂ.ಸಿ. ಕಾರ್ಯಪ್ಪ ಹೇಳಿದರು.
ದೇವಣಗೇರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಇಂದು ಕೊಡಗಿನ ಮೂಲ ಜನಾಂಗದವರ ನಡುವೆ ಹಮ್ಮಿಕೊಂಡಿದ್ದ ಕಾಲ್ಚೆಂಡು ಪಂದ್ಯಾಟವನ್ನು ಉದ್ಘಾಟಿಸಿದ ಅವರು, ಕ್ರೀಡೆ ಕೇವಲ ಮನರಂಜನೆಗೆ ಮಾತ್ರವಲ್ಲ; ಸಮುದಾಯಗಳನ್ನು ಒಗ್ಗೂಡಿಸುವ ಕಾರ್ಯ ಮಾಡುತ್ತದೆ ಎಂದರು.
ಪ್ಲಾಂಟರ್ಸ್ ಕ್ಲಬ್‍ನ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರು ಆದ ಮೂಕೋಂಡ ಶಶಿ ಸುಬ್ರಮಣಿ ಮಾತನಾಡಿ ಕೊಡಗಿನಲ್ಲಿ ಜಮ್ಮಾ ಮನೆ ಹೆಸರು ಹೊಂದಿರುವ ಎಲ್ಲ ಮೂಲ ಜನಾಂಗದವರನ್ನು ಒಗ್ಗೂಡಿಸುವ ಸಲುವಾಗಿ ಪ್ರತಿ ಸಮುದಾಯಗಳ ನಡುವೆ ಕ್ರೀಡಾ ಕೂಟ ಆಯೋಜಿಸಲಾಗಿದೆ. ಪ್ಲಾಂಟರ್ಸ್ ಕ್ಲಬ್ ಸಮಾಜ ಸೇವೆಯ ಮೂಲಕ ಸಮಾಜದ ವಿವಿಧ ಕ್ಷೇತ್ರಗಳಿಗೆ ತನ್ನ ಕೊಡುಗೆ ನೀಡಿದೆ ಎಂದು ಹೇಳಿದರು.
ಸಭೆಯನ್ನುದ್ದೇಶಿಸಿ ಪಾಲೇಕಂಡ ಅಯ್ಯಪ್ಪ, ಹಿರಿಯರಾದ ಪುಗ್ಗೇರ ಕಾಶಿ ಅಯ್ಯಪ್ಪ ಮಾತನಾಡಿದರು.
ವೇದಿಕೆಯಲ್ಲಿ ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ವಾಟೇರಿರ ಪ್ರೇಮ್ ನಾಣಯ್ಯ ಉಪಸ್ಥಿತರಿದ್ದರು. ಪುಗ್ಗೇರ ಪ್ರವೀಣ್ ಸ್ವಾಗತಿಸಿ ನಿರೂಪಿಸಿದರು.
ಐದು ಆಟಗಾರರ ಕಾಲ್ಚೆಂಡು ಪಂದ್ಯಾಟದಲ್ಲಿ ಕೊಡಗಿನಾದ್ಯಂತ ಒಟ್ಟು 32 ತಂಡಗಳು ಭಾಗವಹಿಸಿದ್ದು ಫೈನಲ್ಸ್ ಪಂದ್ಯಾಟದ ಸಮಾರೋಪ ತಾ. 12 ರಂದು ನಡೆಯಲಿದೆ.
ಕಾಲ್ಚೆಂಡು ಪಂದ್ಯಾಟದೊಂದಿಗೆ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಫರ್ಧೆಯನ್ನು ಪಾಲೇಕಂಡ ಅಯ್ಯಪ್ಪ ಗುಂಡು ಹೊಡೆಯುವದರ ಮೂಲಕ ಉದ್ಘಾಟಿಸಿದರು.