ಮಡಿಕೇರಿ, ಮೇ 5: ಇಲ್ಲಿನ ಶಾಲಾ ರಸ್ತೆಯಲ್ಲಿರುವ ಚೇಂಬರ್ ಆಫ್ ಕಾಮರ್ಸ್ನ ಕಟ್ಟಡದಲ್ಲಿರುವ ಮಳಿಗೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು ವಸ್ತುಗಳು ಸಂಪೂರ್ಣ ಸುಟ್ಟು ಹೋಗಿರುವ ಘಟನೆ ನಿನ್ನೆ ತಡರಾತ್ರಿ ಸಂಭವಿಸಿದೆ. ಅಂಗಡಿ ಮಾಲೀಕ ಸತ್ಯ ಶಂಕರ್ ಎಂದಿನಂತೆ ರಾತ್ರಿ ಬಾಗಿಲು ಹಾಕಿ ತೆರಳಿದ್ದಾರೆ.
ತಡರಾತ್ರಿ 12 ಗಂಟೆ ಸುಮಾರಿಗೆ ಅಂಗಡಿಯಲ್ಲಿ ಹೊಗೆ ಕಾಣಿಸಿಕೊಂಡಿದ್ದು, ದಾರಿಹೋಕರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಅಂತೆಯೇ ಅಗ್ನಿ ಶಾಮಕ ಸಿಬ್ಬಂದಿ ಕೂಡ ಧಾವಿಸಿ ಬೆಂಕಿ ನಂದಿಸಿದರಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ.
ಅಂಗಡಿಯಲ್ಲಿ ಬಹುತೇಕ ವಸ್ತುಗಳು ಸುಟ್ಟುಹೋಗಿದ್ದು, ಅಂದಾಜು ರೂ. ಒಂದು ಲಕ್ಷ ನಷ್ಟ ಸಂಭವಿಸಿರುವದಾಗಿ ಮಾಲೀಕ ಸತ್ಯಶಂಕರ್ ಸಂಬಂಧಪಟ್ಟವರಿಗೆ ದೂರು ಸಲ್ಲಿಸಿದ್ದಾರೆ.
ಸ್ಥಳಕ್ಕೆ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಭೇಟಿ ನೀಡಿ ಪರಿಶೀಲಿಸಿದರು. ನಗರ ಚೇಂಬರ್ ಮತ್ತು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಹಾಗೂ ಇತರ ಕೆಲವು ವಾಣಿಜ್ಯೋದ್ಯಮಿಗಳು, ಸಾರ್ವಜನಿಕರು ಈ ಅಂಗಡಿಯ ಪುನರಾರಂಭಕ್ಕೆ ಅಗತ್ಯವಾದ ಧನ ಸಹಾಯ ನೀಡುವದಾಗಿ ಭರವಸೆ ನೀಡಿದರು.