ವೀರಾಜಪೇಟೆ: ವೀರಾಜಪೇಟೆಯ ಸುಣ್ಣದ ಬೀದಿಯ ತುಳಸಿ ಮಾರಿಯಮ್ಮ ಉತ್ಸವವನ್ನು ನಗರ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಸಂತೋಷ್ ಕಶ್ಯಪ್ ಉದ್ಘಾಟಿಸಿದರು.

ವೇದಿಕೆಯಲ್ಲಿ ತುಳಸಿ ಮಾರಿಯಮ್ಮ ಸೇವಾ ಸಮಿತಿಯ ಅಧ್ಯಕ್ಷ ಹೆಚ್.ಕೆ. ಆರ್ಮುಗಂ, ಮಾಜಿ ಅಧ್ಯಕ್ಷ ಪಳನಿ ಪ್ರಕಾಶ್, ಉಪಾಧ್ಯಕ್ಷ ಹೆಚ್.ಆರ್. ನಿಶಾಂತ್, ಜಿ.ಪಂ. ಸದಸ್ಯ ಅಚ್ಚಪಂಡ ಮಹೇಶ್, ಬಿ.ಜಿ. ಸಾಯಿನಾಥ್, ಡಿ.ಎಂ. ರಾಜ್‍ಕುಮಾರ್ ಉಪಸ್ಥಿತರಿದ್ದರು. ಉತ್ಸವಕ್ಕೆ ಚಾಲನೆ ನೀಡಿದ ನಂತರ ರಾತ್ರಿ 9 ಗಂಟೆಗೆ ಮಹೇಶ್ ಗಣಪತಿ ಸಿಡಿಮದ್ದು ಪ್ರದರ್ಶನಕ್ಕೆ ಚಾಲನೆ ನೀಡಿದರು. ಸೇವಾ ಸಮಿತಿಯ ಪದಾಧಿಕಾರಿಗಳಾದ ಹೆಚ್.ಜಿ. ಗಣೇಶ್, ಹೆಚ್.ಕೆ. ಸುಬ್ರಮಣಿ, ಹೆಚ್.ಪಿ. ನವೀನ್, ಹೆಚ್.ಪಿ. ಲಕ್ಷಣ್, ಕಾರ್ತಿಕ್, ಮುತ್ತುಸ್ವಾಮಿ, ವಿನೋದ್, ಸುಭಾಶ್ ಹಾಜರಿದ್ದರು. ರಾತ್ರಿ 12ಗಂಟೆಯವರೆಗೆ ದೇವಾಲಯದಲ್ಲಿ ಮುನೀಶ್ವರನಿಗೆ ಮಹಾಪೂಜೆ ಏರ್ಪಡಿಸಲಾಗಿತ್ತು.

ಶನಿವಾರಸಂತೆ: ಪಟ್ಟಣದ ತ್ಯಾಗರಾಜ ಕಾಲೋನಿ ಯಲ್ಲಿರುವ ಶ್ರೀ ವಿಜಯ ವಿನಾಯಕ ದೇವಾಲಯದ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು. ಉತ್ಸವದ ಅಂಗವಾಗಿ ಮಹಿಳೆಯರು ಮುಖ್ಯ ಬೀದಿಯಲ್ಲಿ ವಾದ್ಯಗೋಷ್ಠಿ ಸಹಿತ ಕಲಶವನ್ನು ಮೆರವಣಿಗೆಯಲ್ಲಿ ತಂದು ದೇವರಿಗೆ ಅಭಿಷೇಕ ಮಾಡಲಾಯಿತು.

ಪುತ್ತೂರಿನ ಕೆಮ್ಮಿಂಜೆಯ ಬ್ರಹ್ಮಶ್ರೀ ವೇದಮೂರ್ತಿ ತಂತ್ರಿ ಸುಬ್ರಮಣ್ಯ ಬಳ್ಳಕ್ಕುರಾಯ ಹಾಗೂ ದೇವಾಲಯದ ಅರ್ಚಕ ಮಂಜುನಾಥ ಶರ್ಮ ಅವರ ನೇತೃತ್ವದಲ್ಲಿ ಬೆಳಿಗ್ಗೆ ಮಹಾಗಣಪತಿ ಹೋಮ, ಕಲಶ ಪೂಜೆ, ಕಲಶಾಭಿಷೇಕ ನಡೆಯಿತು. ನಂತರ ವಿನಾಯಕ ಸ್ವಾಮಿಗೆ 108 ಸೀಯಾಳ ಅಭಿಷೇಕ ಮಾಡಲಾಯಿತು. ಮಧ್ಯಾಹ್ನ ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗವಾಯಿತು. ಸಂಜೆ ರಂಗಪೂಜೆ ನಡೆದು ಮಹಾ ಮಂಗಳಾರತಿ ಮಾಡಲಾಯಿತು. ನೂರಾರು ಭಕ್ತರು ಪೂಜಾ ಕೈಂಕರ್ಯದಲ್ಲಿ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು. ಅನ್ನಸಂರ್ಪಣೆಯನ್ನು ಏರ್ಪಡಿಸಲಾಗಿತ್ತು. ಆದರ್ಶ ವಿಜಯ ವಿನಾಯಕ ಸೇವಾ ಸಮಿತಿ ಅಧ್ಯಕ್ಷ ಎಸ್.ಆರ್. ಮಧು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಪೂಜಾ ಕಾರ್ಯಕ್ರಮ ಸಂದರ್ಭ ಹಾಜರಿದ್ದರು.

ಸೋಮವಾರಪೇಟೆ: ಹಿರಿಕರ ಗ್ರಾಮದ ಶ್ರೀ ಮಲ್ಲೇಶ್ವರ ದೇವಾಲಯದಲ್ಲಿ ವಾರ್ಷಿಕ ಕದಲಿ ಪೂಜೆ ಎರಡು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಿತು.

ಮಂಗಳವಾರ ಬೆಳಿಗ್ಗೆ ಗ್ರಾಮದ ಕೊಲ್ಲಿ ಗದ್ದೆಯ ಕೆರೆಯಲ್ಲಿ ಗಂಗಾ ಪೂಜೆಯ ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಿತು. ಮಕ್ಕಳು ಮತ್ತು ಮಹಿಳೆಯರು ಕಳಸವನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಿದರು.

ಉತ್ಸವ ಮೂರ್ತಿಯನ್ನು ಅಡ್ಡಪಲ್ಲಕ್ಕಿಯಲ್ಲಿ ಮೆರವಣಿಗೆ ನಡೆಸಲಾಯಿತು. ಮನೆಯ ಮುಂಭಾಗ ಮೆರವಣಿಗೆ ಆಗಮಿಸುತ್ತಿದ್ದಂತೆ, ಮನೆ ಮಂದಿ ಪೂಜೆ ಸಲ್ಲಿಸಿ ಈಡುಗಾಯಿ ಒಡೆದರು. ದೇವಾಲಯದಲ್ಲಿ ವಿಶೇಷ ಪೂಜೆಯ ನಂತರ ಗ್ರಾಮಸ್ಥರು ಗ್ರಾಮದ ಸಮೃದ್ಧಿಗಾಗಿ ಸಾಮೂಹಿಕ ಪೂಜೆ ಸಲ್ಲಿಸಿದರು. ನಂತರ ಭಕ್ತಾದಿಗಳಿಗೆ ಅನ್ನದಾನ ನಡೆಯಿತು.

ಶ್ರೀ ಮಲ್ಲೇಶ್ವರ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಹೆಚ್.ಎನ್.ಶಿವರಾಜ್, ಕಾರ್ಯದರ್ಶಿ ಪುಟ್ಟರಾಜು, ಉಪಾಧ್ಯಕ್ಷ ಎಚ್.ಎಂ.ಮೋಹನ್, ಖಜಾಂಚಿ ಅಂಜು, ಪದಾಧಿಕಾರಿ ಸುಭಾಷ್ ಹಾಗೂ ಗ್ರಾಮಸ್ಥರು ಪೂಜೆಯ ಉಸ್ತುವಾರಿ ವಹಿಸಿದ್ದರು.

ಶ್ರೀಮಂಗಲ: ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಪೊರಾಡು ಗ್ರಾಮದ ಶ್ರೀ ಕಳತ್ ಭಗವತಿ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.

ರಾತ್ರಿ ಕೊಂಡ ಹಾಯುವದು, ಬೊಳ್ಳಾಟ, ದೇವರ ತೆರೆ, ಉತ್ಸವ ಮೂರ್ತಿ ನೃತ್ಯ ನಡೆಯಿತು. ವಿವಿಧ ಹರಕೆ ಸಮರ್ಪಿಸಿದ ಭಕ್ತಾದಿಗಳು ಉತ್ಸವದಲ್ಲಿ ಪಾಲ್ಗೊಂಡರು.ವೀರಾಜಪೇಟೆ: ನಗರದ ಸುಣ್ಣದ ಬೀದಿಯಲ್ಲಿರುವ ಶ್ರೀ ತುಳಸಿ ಮಾರಿಯಮ್ಮ ದೇವಿಯ ವಾರ್ಷಿಕ ಮಹೋತ್ಸವ ಸಂಪನ್ನಗೊಂಡಿತು.

ಏ. 23 ರಿಂದ ಅರಂಭಗೊಂಡು ವಿವಿಧ ದೇವತಾ ಕಾರ್ಯಗಳು ನಡೆದವು ಏ. 29 ರಂದು ರಾತ್ರಿ 8 ರಿಂದ 12 ವರೆಗೆ ಮುನೇಶ್ವರ ದೇವರಿಗೆ ಪೂಜೆ ಸಲ್ಲಿಸಿ ಪ್ರಸಾದ ವಿನಿಯೋಗ ಮಾಡಲಾಯಿತು. ಏ. 30 ರಂದು ಬೆಳಿಗ್ಗೆ ಕಾವೇರಿ ನದಿಯಿಂದ ಪುಣ್ಯತೀರ್ಥವನ್ನು ಆರಾಧಿಸಿ ಶ್ರೀ ದೇವಿಯ ಉತ್ಸವ ಮೂರ್ತಿಯನ್ನು ವಿದ್ಯುತ್ ಅಲಂಕೃತ ಮಂಟಪದಲ್ಲಿ ಕುಳ್ಳರಿಸಿ ಮೆರವಣಿಗೆಯ ಮೂಲಕ ನಗರದ ತೆಲುಗರ ಬೀದಿಯಿಂದ ಮುಖ್ಯ ರಸ್ತೆಯಲ್ಲಿ ಸಂಚರಿಸಿ ದೇವಾಲಯಕ್ಕೆ ತಲಪಲಾಯಿತು. ತಂಬಿಟ್ಟು ಆರತಿ ಮತ್ತು ಶ್ರೀ ದೇವಿಗೆ ಬಗೆಬಗೆಯ ಹೂವುಗಳಿಂದ ಶೃಂಗಾರ ಮಾಡಲಾಗಿ ಮಾಹಾಪೂಜೆ, ಮಾಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನೆರವೇರಿತು.

ನಾಪೆÇೀಕ್ಲು: ಸಮೀಪದ ನೆಲಜಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಭಕ್ತಜನ ಸಂಘದ ವತಿಯಿಂದ ಭಕ್ತ ಸಮಾರಾಧನೆ ಉತ್ಸವ ಮತ್ತು ವಾರ್ಷಿಕ ಮಹಾಸಭೆ ನಡೆಯಿತು. ಉತ್ಸವದ ಅಂಗವಾಗಿ ತುಲಾಭಾರ ಸೇವೆ, ದೇವರ ನೃತ್ಯ ಬಲಿ, ಅನ್ನ ಸಂತರ್ಪಣೆ ನಡೆಯಿತು. ಭಕ್ತಜನ ಸಂಘದ ಪದಾಧಿಕಾರಿಗಳು, ಆಡಳಿತ ಮಂಡಳಿ ಸದಸ್ಯರು ಮತ್ತು ತಕ್ಕಮುಖ್ಯಸ್ಥರು ಪಾಲ್ಗೊಂಡಿದ್ದರು.

ಶನಿವಾರಸಂತೆ: ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ದೊಡ್ಡಕೊಡ್ಲಿ ಗ್ರಾಮದ ಇತಿಹಾಸ ಪ್ರಸಿದ್ಧ ಚೋಳರ ಕಾಲದ ಪರಶುರಾಮೇಶ್ವರ ದೇವಾಲಯದಲ್ಲಿ ವಾರ್ಷಿಕ ಆರಾಧನಾ ಮಹೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ಉದ್ಭವ ಲಿಂಗಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು.

ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಹಾಗೂ ಕಲ್ಲುಮಠದ ಮಹಾಂತಸ್ವಾಮೀಜಿ ಅವರ ಸಾನಿಧ್ಯ ವಹಿಸಿದ್ದರು.

ನಿತ್ಯ ಪೂಜಾ ವಿಧಿಗಳನ್ನು ನೆರವೇರಿಸಿ ಕೊಂಡು ಬರುತ್ತಿರುವ ವಿಶ್ವನಾಥ್ ಪಟೇಲ್ ಮತ್ತು ಕುಟುಂಬದವರು ಪ್ರತಿ ವರ್ಷದಂತೆ ಈ ವರ್ಷವು ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.