ಮಡಿಕೇರಿ, ಮೇ 3: ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ವತಿಯಿಂದ ತಾ. 26 ರಂದು ಮಡಿಕೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 128ನೇ ಜನ್ಮ ದಿನಾಚರಣೆ ನಡೆಯಲಿದೆ ಎಂದು ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್ ಮಾಹಿತಿ ನೀಡಿದರು.

ತಾ. 26 ರಂದು ಕಾವೇರಿ ಕಲಾಕ್ಷೇತ್ರದಲ್ಲಿ ಅಂಬೇಡ್ಕರ್ ದಿನಾಚರಣೆ ಮತ್ತು ಕೊಡಗು ದಲಿತ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಭಾ ಕಾರ್ಯಕ್ರಮಕ್ಕೂ ಮೊದಲು ಕಾರ್ಯಪ್ಪ ವೃತ್ತದ ಬಳಿಯ ಅಂಬೇಡ್ಕರ್ ಭವನದಿಂದ ಕಾವೇರಿ ಕಲಾಕ್ಷೇತ್ರದವರೆಗೆ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ. ಪ್ರತೀ ವರ್ಷದಂತೆ ಈ ಬಾರಿಯೂ ಕಾರ್ಯಕ್ರಮದಲ್ಲಿ ಶ್ರೀ ಶಕ್ತಿ ವೃದ್ಧಾಶ್ರಮದ ಹಿರಿಯರಿಗೆ ವಸ್ತ್ರ ವಿತರಣೆ ಮಾಡಲಾಗುವದು ಎಂದರು.

ಸಮಿತಿಯ ಸ್ಥಾಪಕ ಜಯಪ್ಪ ಹಾನಗಲ್ ಅವರಿಗೆ ಈ ಬಾರಿಯ ಕೊಡಗು ದಲಿತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವದು. ಕೃಷಿ ಇಲಾಖೆಯ ಅಧಿಕಾರಿ ಎಂ.ವಿ. ವರದರಾಜ ಅವರಿಗೆ ಉತ್ತಮ ಸೇವಾ ಪ್ರಶಸ್ತಿಯನ್ನು ನೀಡಲಾಗುವದೆಂದು ದಿವಾಕರ್ ತಿಳಿಸಿದರು. ಅಂಬೇಡ್ಕರ್ ಜಯಂತಿ ಪ್ರಯುಕ್ತ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ತಾ. 24 ಮತ್ತು 25 ರಂದು ಕ್ರಿಕೆಟ್, ಕಬಡ್ಡಿ ಹಾಗೂ ವಾಲಿಬಾಲ್ ಪಂದ್ಯಾವಳಿ ನಡೆಯಲಿದೆ.

ಕ್ರಿಕೆಟ್‍ನಲ್ಲಿ ಮೊದಲ ಬಹುಮಾನ ರೂ. 10 ಸಾವಿರ ನಗದು ಹಾಗೂ ಟ್ರೋಫಿ, ದ್ವಿತೀಯ ಬಹುಮಾನ ರೂ. 7 ಸಾವಿರ ನಗದು ಹಾಗೂ ಟ್ರೋಫಿ. ಕಬಡ್ಡಿ ರೂ. 5 ಸಾವಿರ ಪ್ರಥಮ, ರೂ. 3 ಸಾವಿರದ ಐನೂರು ದ್ವಿತೀಯ, ವಾಲಿಬಾಲ್ ಪ್ರಥಮ ರೂ. 5 ಸಾವಿರ ಹಾಗೂ ದ್ವಿತೀಯ ರೂ. 3 ಸಾವಿರದ ಐನೂರು ನೀಡಲಾಗುವದು. ಕ್ರೀಡಾಕೂಟದಲ್ಲಿ ಭಾಗವಹಿಸುವ ತಂಡಗಳು ತಾ. 20 ರೊಳಗೆ ಹೆಸರನ್ನು ನೋಂದಾಯಿಸಿಕೊಳ್ಳಬೇಕು ನೋಂದಾವಣಿಗೆ ಮೊ.ಸಂ. 9481523648, 9611766713 ನ್ನು ಸಂಪರ್ಕಿಸಬಹುದಾಗಿದೆ. ಗೋಷ್ಠಿಯಲ್ಲಿ ವಿಭಾಗೀಯ ಸಂಚಾಲಕ ಎನ್. ವೀರಭದ್ರಯ್ಯ ಹಾಗೂ ತಾಲೂಕು ಸಂಚಾಲಕ ಎ.ಪಿ. ದೀಪಕ್ ಉಪಸ್ಥಿತರಿದ್ದರು.