ಮಡಿಕೇರಿ, ಮೇ 2: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಕ್ರಿಕೆಟ್ ವರ್ಷಂಪ್ರತಿ ನಡೆಸಿಕೊಂಡು ಬರಲಾಗುತ್ತಿರುವ ಗೌಡ ಜನಾಂಗದ ಕ್ರಿಕೆಟ್ ಹಬ್ಬವನ್ನು ಈ ಬಾರಿ ಸರಳವಾಗಿ ಆಚರಿಸುತ್ತಿದ್ದು, ತಾ. 3 ರಿಂದ (ಇಂದಿನಿಂದ) ತಾ. 5ರ ವರೆಗೆ ನಡೆಯಲಿದೆ. ಈ ನಿಟ್ಟಿನಲ್ಲಿ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳ ಲಾಗಿದ್ದು, 3 ದಿನಗಳ ಕಾಲ ಕ್ರಿಕೆಟ್ ಹಬ್ಬ ನಡೆಯಲಿದೆ.ವರ್ಷಂಪ್ರತಿ ನೂರಾರು ಕುಟುಂಬಗಳ ಭಾಗವಹಿಸುವಿಕೆ ಯೊಂದಿಗೆ 15 ದಿನಗಳ ಕಾಲ ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರಿಕೆಟ್ ಹಬ್ಬ ನಡೆಯುತ್ತಿತ್ತು. ಆದರೆ ಈ ಬಾರಿ ಪ್ರಕೃತಿ ವಿಕೋಪದಿಂದಾಗಿ ಸಾಕಷ್ಟು ಕಷ್ಟ-ನಷ್ಟಗಳು ಸಂಭವಿಸಿದ ಹಿನ್ನೆಲೆಯಲ್ಲಿ ಸಂಘಟಕರು ಪದ್ಧತಿಯ ಉತ್ಸವ ಕೊನೆಗಾಣಬಾರದೆಂಬ ಉದ್ದೇಶ ದೊಂದಿಗೆ ಸರಳವಾಗಿ ನಿಯಮಿತ ತಂಡಗಳ ನಡುವೆ ಪಂದ್ಯಾವಳಿ ಆಯೋಜನೆ ಮಾಡಿದ್ದು, ಫೀ.ಮಾ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಮೂರು ದಿನಗಳ ಕಾಲ ಆಯೋಜನೆ ಮಾಡಿದ್ದಾರೆ. ತಾ. 3 ರಿಂದ 5ರ ವರೆಗೆ ನಡೆಯಲಿದೆ.ಪಂದ್ಯಾವಳಿಯಲ್ಲಿ ಒಟ್ಟು 29 ತಂಡಗಳು ಸೆಣಸಾಡಲಿದ್ದು, ಈ ಬಾರಿ ಪಂದ್ಯಾವಳಿಯನ್ನು ಕೊಡಗು ಗೌಡ ಯುವ ವೇದಿಕೆ ಪ್ರಾಯೋಜಕತ್ವದಲ್ಲಿಯೇ ನಡೆಯಲಿದೆ.

ಉದ್ಘಾಟನೆ: ತಾ. 3 ರಂದು (ಇಂದು) ಬೆಳಿಗ್ಗೆ 9 ಗಂಟೆಗೆ ಆರಂಭವಾಗುವ ಉದ್ಘಾಟನಾ ಕಾರ್ಯಕ್ರಮವನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಉದ್ಘಾಟಿಸುವರು. ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ ಕ್ರೀಡಾಕೂಟವನ್ನು ಉದ್ಘಾಟಿಸುವರು. ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಶಿಕ್ಷಕಿ-ಸಮಾಜ ಸೇವಕಿ ಪುದಿಯನೆರವನ ರೇವತಿ ರಮೇಶ್, ಯುವ ವೇದಿಕೆ ಕ್ರೀಡಾ ಸಮಿತಿ ಅಧ್ಯಕ್ಷ ಬಾಳಾಡಿ ಮನೋಜ್, ಸಾಂಸ್ಕøತಿಕ ಸಮಿತಿ ಅಧ್ಯಕ್ಷ ಕುಕ್ಕೇರ ಲಕ್ಷ್ಮಣ್, ಆಹಾರ ಸಮಿತಿ ಅಧ್ಯಕ್ಷ ಪರಿಚನ ಸತೀಶ್ ಉಪಸ್ಥಿತರಿರುವರು.

ಸಮಾರೋಪ: ತಾ. 5 ರಂದು ಸಂಜೆ 4 ಗಂಟೆಗೆ

(ಮೊದಲ ಪುಟದಿಂದ) ಸಮಾರೋಪ ಸಮಾರಂಭ ನಡೆಯಲಿದ್ದು, ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಶಾಸಕ ಕೆ.ಜಿ. ಬೋಪಯ್ಯ, ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪಿ.ಸಿ. ಜಯರಾಂ, ಕೊಡಗು ಗೌಡ ವಿದ್ಯಾ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ, ನಿವೃತ್ತ ಮುಖ್ಯ ಶಿಕ್ಷಕ ಮೂಟೇರ ನಂಜುಂಡ, ವಿದ್ಯಾ ಸಂಘದ ಉಪಾಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ, ಮೈಸೂರಿನ ಏಜುಕೇಟೈನರ್ ಯಾಲದಾಳು ಕುಮುದ ಜಯ ಪ್ರಶಾಂತ್, ಯುವ ವೇದಿಕೆ ಕ್ರೀಡಾ ಸಮಿತಿ ಅಧ್ಯಕ್ಷ ಬಾಳಾಡಿ ಮನೋಜ್, ಶಿಸ್ತು ಸಮಿತಿ ಅಧ್ಯಕ್ಷ ಪೊಕ್ಕುಳಂಡ್ರ ಮನೋಜ್, ನ್ಯಾಯಿಕ ಸಮಿತಿ ಅಧ್ಯಕ್ಷ ಕೊಟ್ಟಕೇರಿಯನ ದಯಾನಂದ ಉಪಸ್ಥಿತರಿರುವರು.

ಸಿದ್ಧತಾ ಕಾರ್ಯ: ಕ್ರಿಕೆಟ್ ಹಬ್ಬದ ಅಂಗವಾಗಿ ಫೀ.ಮಾ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಲಾಗಿದೆ. ಯುವ ವೇದಿಕೆ ಪದಾಧಿಕಾರಿಗಳು, ಸದಸ್ಯರುಗಳು ಮೈದಾನವನ್ನು ಸಜ್ಜುಗೊಳಿಸಿದ್ದು, 2 ಮೈದಾನದಲ್ಲಿ ಏಕಕಾಲದಲ್ಲಿ ಪಂದ್ಯಾವಳಿ ನಡೆಯಲಿದೆ. ಇದಕ್ಕಾಗಿ ಮೈದಾನವನ್ನು ಸಜ್ಜುಗೊಳಿಸಲಾಗಿದೆ.