ಮಡಿಕೇರಿ, ಮೇ 2: ಭಾರತೀಯ ನೌಕಾದಳದ ಮೊದಲ ಐಎನ್‍ಎಸ್ ಶಿವಾಜಿ ವಿಭಾಗದ 75ನೇ ವರ್ಷಾಚರಣೆ ಪ್ರಯುಕ್ತ ‘ಭಾರತ ದರ್ಶನ’ ಎಂಬ ಕಾರ್ಯಕ್ರಮದಡಿಯಲ್ಲಿ ಭಾರತೀಯ ನೌಕಾದಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಯುವ ಸಮೂಹ ಸೇರುವಂತಾಗಲು ಪ್ರೇರೇಪಿಸುವದು ಪ್ರಮುಖ ಉದ್ದೇಶವಾಗಿದೆ ಎಂದು ಐಎನ್‍ಎಸ್ ಶಿವಾಜಿ ತಂಡದ ಕಮಾಂಡರ್ ವಿ.ಸೀತಾರಾಮನ್ ಹೇಳಿದರು.ನಗರದ ಜನರಲ್ ಕೆ.ಎಸ್.ತಿಮ್ಮಯ್ಯ ಅವರು ಜನಿಸಿದ ನಗರದ ಮೈಸೂರು ರಸ್ತೆಯಲ್ಲಿರುವ ‘ಸನ್ನಿ ಸೈಡ್’ಗೆ ಐಎನ್‍ಎಸ್ ಶಿವಾಜಿ ತಂಡದ 14 ಮಂದಿ ಸೇನಾಧಿಕಾರಿಗಳು ಭೇಟಿ ನೀಡಿ ಜನರಲ್ ತಿಮ್ಮಯ್ಯ ಮ್ಯೂಸಿಯಂನ್ನು ವೀಕ್ಷಿಸಿದ ಸಂದರ್ಭ ಅವರು ಮಾತನಾಡಿದರು. ನಮ್ಮ ‘ಭಾರತ ದರ್ಶನ’ಎಂಬ ಒಟ್ಟು 45 ದಿನಗಳ ಕಾರ್ಯಕ್ರಮಕ್ಕೆ ಇದೇ ಫೆಬ್ರವರಿಯಲ್ಲಿ ಮುಂಬೈ ಹಾಗೂ ಪುಣೆ ನಡುವಣ ಪ್ರದೇಶದಲ್ಲಿರುವ ಲೋನವಾಲದಿಂದ ಚಾಲನೆ ನೀಡಲಾಗಿದೆ. ಅಲ್ಲಿಂದ ದೆಹಲಿ-ವಿಶಾಖಪಟ್ಟಣಂ-ಕೊಚ್ಚಿನ್‍ಗೆ ತೆರಳಿ ಅಲ್ಲಿಂದ ಮರಳಿ ಇದೇ ಮೇ 9ಕ್ಕೆ ಲೋನವಾಲಕ್ಕೆ ಹಿಂತಿರುಗುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಇದೇ ಸಂದರ್ಭ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಫೋರಂನ ಅಧ್ಯಕ್ಷ ನಿವೃತ್ತ ಕರ್ನಲ್ ಕೆ.ಸಿ.ಸುಬ್ಬಯ್ಯ ಅವರು ಸುದ್ದಿಗಾರರೊಂದಿಗೆ ಮಾತನಾಡಿ,
(ಮೊದಲ ಪುಟದಿಂದ) ಭಾರತೀಯ ನೌಕದಳದ ತಾಂತ್ರಿಕ ವಿಭಾಗದ ಐಎನ್‍ಎಸ್ ಶಿವಾಜಿ ವಿಭಾಗವು ನೌಕಾದಳಕ್ಕೆ ಸೇರ್ಪಡೆಯಾದ ಯುವಕರಿಗೆ 4 ವರ್ಷಗಳ ಕಾಲ ತಾಂತ್ರಿಕವಾಗಿ ತರಬೇತಿ ನೀಡಿ ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನಾಗಿ ಸಿದ್ದಪಡಿಸುತ್ತಾರೆ ಎಂದು ಮಾಹಿತಿ ನೀಡಿದರು.
ಈ ಶಿವಾಜಿ ತಂಡ ಇಂದು ಕೊಡಗು ಜಿಲ್ಲೆಗೆ ಭೇಟಿ ನೀಡಿರುವದು ಸಂತೋಷವಾಗಿದೆ. ಈ ತಂಡ ಜಿಲ್ಲೆಯ ಸೈನಿಕ ಶಾಲೆ, ಪೊನ್ನಂಪೇಟೆ ಯ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಕಾಲೇಜು ಸೇರಿದಂತೆ ಇತರ ತಾಂತ್ರಿಕ ಕಾಲೇಜುಗಳಿಗೆ ಭೇಟಿ ನೀಡಿ ಜಿಲ್ಲೆಯ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ನೌಕಾದಳಕ್ಕೆ ಸೇರುವಂತೆ ಪ್ರೇರೇಪಣೆ ನೀಡಲಿದ್ದಾರೆ. ಆದ್ದರಿಂದ ಇವರ ಮಾರ್ಗದರ್ಶನ, ಸಲಹೆ ಮತ್ತು ಸೂಚನೆಗಳನ್ನು ಕೊಡಗಿನ ಯುವ ಸಮೂಹ ಪಡೆದುಕೊಂಡು ನೌಕಾದಳಕ್ಕೆ ಸೇರುವಂತೆ ಕಿವಿ ಮಾತು ಹೇಳಿದರು.
ನಿವೃತ್ತ ಮೇಜರ್ ಬಿದ್ದಂಡ ನಂಜಪ್ಪ ಅವರು ಮಾತನಾಡಿ, ನಾವು ಕೂಡ ಕೊಡಗಿನ ಯುವಕರನ್ನು ಉತ್ತೇಜಿಸಿ ಭಾರತೀಯ ಸೇನೆಗೆ ಸೇರುವಂತೆ ಮನವೊಲಿಸುತ್ತಿರುತ್ತೇವೆ ಎಂದರು. ಜನರಲ್ ತಿಮ್ಮಯ್ಯ ಅವರು ಜನಿಸಿದ ಮಡಿಕೇರಿ ನಗರದ ಈ ‘ಸನ್ನಿಸೈಡ್’ ಮನೆಯನ್ನು ಜನರಲ್ ತಿಮ್ಮಯ್ಯ ಮ್ಯೂಸಿಯಂನ್ನಾಗಿ ಮಾರ್ಪಡಿಸಲು ಪ್ರಯತ್ನಿಸಿದ್ದರಿಂದ ಈ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ದೇಶದ ಯುವ ಸಮೂಹದವರನ್ನು ಸೇನೆಗೆ ಸೇರಿಸುವ ಉದ್ದೇಶವನ್ನು ಹೊಂದಿದ್ದು, ಇದೀಗ ಕೊಡಗು ಜಿಲ್ಲೆಗೆ ಭಾರತ ದರ್ಶನ ತಂಡ ಆಗಮಿಸಿ ಮುಂದೆ ಮುಂಬೈಯ ಲೋನವಾಲಕ್ಕೆ ಮರಳಲಿದೆ ಎಂದರು.
ಭಾರತ ದರ್ಶನ ಐಎನ್‍ಎಸ್ ತಂಡದ ನೇತೃತ್ವವನ್ನು ಕಮಾಂಡರ್ ವಿ.ಸೀತಾರಾಂ ವಹಿಸಿದ್ದರೆ, ಕಮಾಂಡರ್‍ಗಳಾದ ಗೌರವ್ ಸೇಥ್,ಅಭಿಮನ್ಯು ದಲಾಲ್,ಶ್ಯಾಂ ಕುಮಾರ್ ಕೆ., ಲೆಫ್ಟಿನೆಂಟ್ ಕಮಾಂಡರ್‍ಗಳಾದ ಸತೀಶ್ ಕುಮಾರ್ ಮತ್ತು ಜಿ.ಜಗನ್ನಾಥ್, ಲೆಫ್ಟಿನೆಂಟ್ ಸುದೀಪ್ ಭಟ್ಟಾರಾಯಿ ಮತ್ತು ಎಂ.ಕೆ.ಗೌತಮ್ ಎಂಸಿಇಆರ್‍ಎ, ಅಖಿಲ್ ಬೇಬಿ ಎಲ್‍ಎಂಎ, ಹೆಚ್. ದಹೀಯ ಎಲ್‍ಎಂಇ, ಮಂದೀಪ್ ಸಿಂಗ್ ಎಲ್‍ಎಂಇ, ಆರ್. ಆರ್.ಚೌಹಾಣ್, ಇ.ಸಿ.ಪಾಲಾಸ್ಕರ್ ಮತ್ತು ಎಲ್ವಿಸ್ ಮ್ಯಾಥ್ಯೂ ವಹಿಸಿದ್ದಾರೆ.