ಗೋಣಿಕೊಪ್ಪಲು, ಮೇ 2 : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಗೆ ತನ್ನದೇ ಆದ ಮೌಲ್ಯ, ಘನತೆ ಇರುವದರಿಂದ ರಾಜ್ಯದ 27 ಜಿಲ್ಲೆಗಳಲ್ಲಿ ರೈತ ಸಂಘ ಬಲಿಷ್ಠವಾಗಿ ನೆಲೆಯೂರಿದೆ. ಅದರಂತೆ ಕೊಡಗು ಜಿಲ್ಲೆಯಲ್ಲಿಯೂ ಕಳೆದ 5 ವರ್ಷಗಳಿಂದ ರೈತ ಸಂಘ ಉತ್ತಮವಾಗಿ ಬೆಳೆದಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅಭಿಪ್ರಾಯಪಟ್ಟರು.

ದ.ಕೊಡಗಿನ ಟಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಡವ ಸಮಾಜದ ಸಭಾಂಗಣದಲ್ಲಿ ಆಯೋಜನೆಗೊಂಡಿದ್ದ ಶ್ರೀಮಂಗಲ ಹೋಬಳಿ ಮಟ್ಟದ ರೈತರ ಸಮಾವೇಶ ಹಾಗೂ ಹೊಸ ಸದಸ್ಯರ ಸೇರ್ಪಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ನಾಗೇಂದ್ರರವರು ಹಸಿರು ಶಾಲನ್ನು ಉತ್ತಮ ಕಾರ್ಯಕ್ಕೆ ಬಳಸಿಕೊಳ್ಳಿ, ಯಾವದೇ ಕಾರಣಕ್ಕೂ ಸ್ವಾರ್ಥಕೋಸ್ಕರ ಬಳಸದಿರಿ ಎಂದರು. ಅಧಿಕಾರಕ್ಕಾಗಿ ಕೆಲವರು ಸಂಘಟನೆ ಬಿಟ್ಟು ಹೊರ ಹೋಗಿ ಮತ್ತೊಂದು ಸಂಘಟನೆ ಕಟ್ಟಿಕೊಂಡವರು ಮೂಲೆ ಗುಂಪಾಗಿದ್ದಾರೆ. ಎಂದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅಪ್ಪಚಂಗಡ ಮೋಟಯ್ಯ ಜಿಲ್ಲೆಯಲ್ಲಿ ರೈತ ಸಂಘ ಬಲಯುತವಾಗಿ ಬೆಳೆದು ನಿಂತಿದೆ. ರೈತರ ಸಮಸ್ಯೆಗಳಿಗೆ ನಾವು ಆರಿಸಿ ಕಳುಹಿಸಿರುವ ಜನಪ್ರತಿನಿಧಿಗಳೇ ಕಾರಣರಾಗಿರುವದು ರೈತರ ದುರಂತ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಸಂಘಟನೆಯೊಂದಿಗೆ ಕೈ ಜೋಡಿಸಿ ಜಿಲ್ಲೆಯ ರೈತರ ಸಮಸ್ಯೆಗಳಿಗೆ ಹಂತಹಂತವಾಗಿ ಹೋರಾಟಗಳನ್ನು ಹಮ್ಮಿಕೊಳ್ಳೋಣ ಎಂದರು.

ಟಿ.ಶೆಟ್ಟಿಗೇರಿ ಕೊಡವ ಸಮಾಜದ ಅಧ್ಯಕ್ಷರಾದ ಕೊಟ್ರಮಾಡ ಅರುಣ್ ಅಪ್ಪಣ್ಣ ಮಾತನಾಡಿ ಡಾ. ಸ್ವಾಮಿನಾಥನ್ ವರದಿ ಜಾರಿಗೊಂಡಲ್ಲಿ ರೈತರ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಆ ನಿಟ್ಟಿನಲ್ಲಿ ಹೋಬಳಿ, ತಾಲೂಕು ಮಟ್ಟದಲ್ಲಿ ನಿರಂತರ ಹೋರಾಟಗಳು ನಡೆಯಬೇಕು. ಸರ್ಕಾರಕ್ಕೆ ಒತ್ತಾಯ ತರಬೇಕು. ಜಿಲ್ಲೆಯಲ್ಲಿ ಕೇವಲ ಶೇ.20ರಷ್ಟು ರೈತರಿಗಷ್ಟೇ ಸಿಂಗಲ್ ಆರ್‍ಟಿ.ಟಿ.ಲಭ್ಯವಿದೆ. ಇದರಿಂದ ಶೇ.80 ಭಾಗದ ರೈತರಿಗೆ ಸರ್ಕಾರದ ಸವಲತ್ತುಗಳು ತಲುಪುತ್ತಿಲ್ಲ ಎಂದರು.

ತಡಿಯಂಗಡ ಸೋಮಣ್ಣ, ನೂರೇರ ಉತ್ತಯ್ಯ, ಚಟ್ಟಂಗಡ ಕಂಬ ಕಾರ್ಯಪ್ಪ, ಚೊಟ್ಟೆಯಂಡಮಾಡ ಬೋಸ್ ದೇವಯ್ಯ, ಬೊಟ್ಟಂಗಡ ತಿಲಕ್, ಬೊಜ್ಜಂಗಡ ಪ್ರತಾಪ್, ಸಂಪತ್, ಈಶ್ವರ, ಮಲ್ಲೆಂಗಡ ತುಳಸಿ, ಪಟ್ಟಡ ಜಾನಕಿ, ಚಟ್ಟಂಗಡ ಅರಸು, ಜಾಫ್ರೀ, ಉಳುವಂಗಡ ಉದಯ, ಚೊಟ್ಟೆಯಂಡ ಮಾಡ ತಿಮ್ಮಯ್ಯ, ಮನು ಮಚ್ಚಮಾಡ ಸುಬ್ರಮಣಿ, ಅಜ್ಜಮಾಡ ನವೀನ್, ಚಟ್ಟಂಗಡ ಕಾಳಪ್ಪ, ಸೇರಿದಂತೆ ಹಲವು ರೈತರು ರೈತ ಸಂಘಕ್ಕೆ ಸೇರ್ಪಡೆಗೊಂಡರು. ವೇದಿಕೆಯಲ್ಲಿ ರೈತ ಮುಖಂಡರುಗಳಾದ ಮಚ್ಚಮಾಡ ಸೋಮಯ್ಯ, ಚೊಟ್ಟೆಯಂಡಮಾಡ ವಿಶ್ವನಾಥ್, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಶಂಕರಪ್ಪ, ಮೈಸೂರು ಜಿಲ್ಲಾಧ್ಯಕ್ಷ,ಹೊಸಕೋಟೆ ಬಸವರಾಜ್, ತಿತಿಮತಿ ಸಂಚಾಲಕ ಚೆಪ್ಪುಡೀರ ಕಾರ್ಯಪ್ಪ ಸೇರಿದಂತೆ ಇನ್ನಿತರ ಮುಖಂಡರು ರೈತ ಸಂಘದ ಬೆಳವಣಿಗೆಯ ನಂತರ ಜಿಲ್ಲೆಯಲ್ಲಿ ರೈತರಿಗೆ ಆದ ಪ್ರಯೋಜನದ ಬಗ್ಗೆ ಮಾತನಾಡಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪ್ರ.ಕಾರ್ಯದರ್ಶಿ ಚೆಟ್ರುಮಾಡ ಸುಜಯ್‍ಬೋಪಯ್ಯ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ, ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ಹುದಿಕೇರಿ ಹೋಬಳಿ ಸಂಚಾಲಕ ಸೂರಜ್, ಪೊನ್ನಂಪೇಟೆ ಹೋಬಳಿ ಸಂಚಾಲಕ ಆಲೆಮಾಡ ಮಂಜುನಾಥ್, ಅಮ್ಮತ್ತಿ ಹೋಬಳಿ ಸಂಚಾಲಕ, ಮಂಡೇಪಂಡ ಪ್ರವೀಣ್, ಶ್ರೀಮಂಗಲ ಸಂಚಾಲಕ ಭಾಚಮಾಡ ಭವಿಕುಮಾರ್, ಚೋನಿರ ಸತ್ಯ ಸೇರಿದಂತೆ ಇನ್ನಿತರ ಮುಖಂಡರು ಹಾಜರಿದ್ದರು.