ಸಿದ್ದಾಪುರ, ಏ. 29: ಕರಡಿಗೋಡುವಿನ ಕುಕ್ಕನೂರು ದಿ. ಬಾಲಕೃಷ್ಣ ಹಾಗೂ ಚೇತನ್ ಸ್ಮರಣಾರ್ಥ ಮೈದಾನದಲ್ಲಿ ನಡೆಯುತ್ತಿರುವ ಕೊಡಗು ಚಾಂಪಿಯನ್ಸ್ ಲೀಗ್ ಪಂದ್ಯಾವಳಿಯಲ್ಲಿ ಎ ಗ್ರೂಪ್ನಿಂದ ರಾಂಬೋ ಕ್ರಿಕೆಟರ್ಸ್ ನೆಲ್ಯಹುದಿಕೇರಿ ತಂಡ ಪ್ಲೇ ಆಫ್ಗೆ ಲಗ್ಗೆ ಇಟ್ಟಿದೆ.
ಆಡಿದ 6 ಪಂದ್ಯಗಳಲ್ಲಿ 6 ಅನ್ನು ಕೂಡ ಗೆದ್ದು 12 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದು, ಎಸ್.ಆರ್.ಎಸ್. ಮೂರ್ನಾಡು ತಂಡ 6 ಪಂದ್ಯಗಳಲ್ಲಿ 4 ಗೆಲುವಿನೊಂದಿಗೆ 8 ಅಂಕ ಗಳಿಸಿ ಪ್ಲೇ ಆಫ್ಗೆ ಲಗ್ಗೆ ಇಟ್ಟಿದೆ.
ಪ್ರತಿ ಪೂಲ್ನಿಂದ ತಲಾ ಎರಡು ತಂಡಗಳು ಪ್ಲೇ ಆಫ್ಗೆ ಲಗ್ಗೆ ಇಡಲಿದ್ದು, ಐ.ಪಿ.ಎಲ್. ಮಾದರಿಯಲ್ಲಿ ಪ್ಲೇ ಆಫ್ ನಡೆಯಲಿದೆ.
ಎಸ್.ಆರ್.ಎಸ್. ಹಾಗೂ ರಾಂಬೋ ಕ್ರಿಕೆಟರ್ಸ್ ತಂಡಗಳ ನಡುವಿನ ಪಂದ್ಯಾಟದಲ್ಲಿ ಮೊದಲು ಬ್ಯಾಟ್ ಮಾಡಿದ ಎಸ್.ಆರ್.ಎಸ್ ನಿಗದಿತ 6 ಓವರ್ಗಳಲ್ಲಿ 31 ರನ್ ಗಳಿಸಿದರು. ಗುರಿ ಬೆನ್ನಟ್ಟಿದ ರಾಂಬೋ ತಂಡ 3.3 ಓವರ್ಗಳಲ್ಲಿ ಗುರಿಮುಟ್ಟಿತ್ತು. ತ್ಯಾಗ್ ಬಾಯ್ಸ್ ಮಡಿಕೇರಿ ಹಾಗೂ ರಾಯಲ್ ಕುಕ್ಕುನೂರು ನಡುವಿನ ಪಂದ್ಯಾಟದಲ್ಲಿ ತ್ಯಾಗ್ ಬಾಯ್ಸ್ ಬ್ಯಾಟಿಂಗ್ ಆರಂಭಿಸಿ ನಿಗದಿತ 6 ಓವರ್ನಲ್ಲಿ 42 ರನ್ಗಳನ್ನು ಪಡೆದರು. ಜಯಕ್ಕಾಗಿ ಮೈದಾನಕ್ಕಿಳಿದ ರಾಯಲ್ ಕುಕ್ಕುನೂರು ಕೇವಲ 30 ರನ್ಗಳನ್ನು ಗಳಿಸಲಷ್ಟೆ ಶಕ್ತವಾಯಿತ್ತು.
ರಾಂಬೋ ಹಾಗೂ ಟೀಮ್ ಕೂಲ್ ತಂಡಗಳ ಪಂದ್ಯಾಟದಲ್ಲಿ ನಾಯಕ ರಿಯಾಜ್ರವರ 26 ರನ್ಗಳ ಸಹಾಯದಿಂದ ರಾಂಬೋ 6 ಓವರ್ನಲ್ಲಿ 63 ಗಳಿಸಿದರು. ಗುರಿ ಬೆನ್ನಟ್ಟಿದ ಟೀಮ್ ಕೂಲ್ ತಂಡದ ಪರವಾಗಿ ಮುಸ್ತಫ 17 ರನ್ ಗಳಿಸಿದರು. ನಿಗದಿತ ಓವರ್ನ್ಲಿ 39 ರನ್ ಗಳಿಸಿ ಸೋಲನುಭವಿಸಿತ್ತು. ರಾಂಬೋ ಪರವಾಗಿ ಬೋಪಣ್ಣ 1 ಓವರ್ನಲ್ಲಿ ಮೆಡನ್ನೊಂದಿಗೆ 2 ವಿಕೆಟ್ ಪಡೆದರು.
ಎಸ್.ಆರ್.ಎಸ್ ಮೂರ್ನಾಡು ಹಾಗೂ ರಾಯಲ್ ಕುಕ್ಕುನೂರು ತಂಡಗಳ ನಡುವಿನ ಪಂದ್ಯಾಟದಲ್ಲಿ ಎಸ್.ಆರ್.ಎಸ್. ಬ್ಯಾಟಿಂಗ್ ನಡೆಸಿ, ಅಲೀಮ್ರವರ 38 ರನ್ಗಳ ಸಹಾಯದಿಂದ 61 ರನ್ಗಳ ಬೃಹತ್ ಮೊತ್ತ ಕೂಡಿಸಿದರು. ಪ್ರತಿಯಾಗಿ ಬ್ಯಾಟ್ಮಾಡಿದ ರಾಯಲ್ ಕುಕ್ಕನೂರು ನಿಗದಿತ ಓವರ್ನಲ್ಲಿ 30 ರನ್ ಗಳಿಸಿ ಸೋಲನುಭವಿಸಿತ್ತು.
ತಾಜ್ ತ್ಯಾಗತ್ತೂರು ಹಾಗೂ ತ್ಯಾಗ್ ಬಾಯ್ ಮಡಿಕೇರಿ ತಂಡಗಳ ನಡುವಿನ ಪಂದ್ಯಾಟದಲ್ಲಿ ತಾಜ್ ತಂಡ ಬ್ಯಾಟಿಂಗ್ ನಡೆಸಿ ನಿಗದಿತ 6 ಓವರ್ನಲ್ಲಿ 52 ರನ್ ಗಳಿಸಿದರು. ಪ್ರತಿಯಾಗಿ ಕಣಕ್ಕಿಳಿದ ತ್ಯಾಗ್ ಬಾಯ್ಸ್ ಪರ ಶಿವು 20 ರನ್ ಗಳಿಸಿದರೂ ಕೂಡ 39 ರನ್ ಗಳಿಸಲಷ್ಟೆ ಸಾಧ್ಯವಾಯಿತ್ತು.
ರಾಂಬೋ ಹಾಗೂ ಫಯರ್ ಟೈಗರ್ಸ್ ನಡುವಿನ ಪಂದ್ಯಾಟದಲ್ಲಿ ರಾಂಬೋ ತಂಡದ ಅಲೋಕ್ರವರ ಅಮೋಘ ಬ್ಯಾಟಿಂಗ್ನಿಂದಾಗಿ ನಿಗದಿತ 6 ಓವರ್ನಲ್ಲಿ 52 ರನ್ ಗಳಿಸಿದರು. ಫಯರ್ ಟೈಗರ್ಸ್ ಕೇವಲ 30 ರನ್ ಗಳಿಸಿ ಸೋಲನುಭವಿಸಿತ್ತು.
ಟೀಮ್ ಕೂಲ್ ಹಾಗೂ ತ್ಯಾಗ್ ಬಾಯ್ಸ್ ತಂಡಗಳ ನಡುವಿನ ಪಂದ್ಯಾಟ ರೋಮಾಂಚನಕಾರಿಯಿಂದ ಕೂಡಿತ್ತು. ನಿಗದಿತ 6 ಓವರ್ಗಳಲ್ಲಿ ಟೀಮ್ ಕೂಲ್ನ ಮುಸ್ತಫ 14 ಹಾಗೂ ವಿನಿಲ್ 15 ರನ್ಗಳ ಸಹಾಯದಿಂದ 49 ರನ್ ಗಳಿಸಿದರು. ತ್ಯಾಗ್ ಬಾಯ್ಸ್ ಉತ್ತಮವಾಗಿ ಬ್ಯಾಟ್ ಬೀಸಿದರೂ 47 ರನ್ಗಳಿಗೆ ಕಟ್ಟಿಹಾಕಿ ಟೀಮ್ ಕೂಲ್ ವಿಜಯ ಸಾದಿಸಿತ್ತು.
ರಾಯಲ್ ಕುಕ್ಕುನೂರು ಹಾಗೂ ತಾಜ್ ತ್ಯಾಗತ್ತೂರು ನಡುವಿನ ಪಂದ್ಯಾಟದಲ್ಲಿ ರಾಯಲ್ ಕುಕ್ಕುನೂರು ತಂಡದ ಇಬ್ರಾಹಿಂರವರ ಅಮೋಘ 35 ರ್ಗಳ ಸಹಾಯದಿಂದ 6 ಓವರ್ಗಳಲ್ಲಿ 57 ರನ್ ಗಳಿಸಿತ್ತು. ತಾಜ್ ತ್ಯಾಗತ್ತೂರು ತಂಡ 35 ರನ್ ಗಳಿಸಿ ಸೋಲನುಭವಿಸಿತ್ತು.
ಎಸ್.ಆರ್.ಎಸ್. ಹಾಗೂ ಫಯರ್ ಟೈಗರ್ಸ್ ತಂಡಗಳ ನಡುವಿನ ಪಂದ್ಯಾಟದಲ್ಲಿ ಮೊದಲು ಬ್ಯಾಟ್ ಮಾಡಿದ ಎಸ್.ಆರ್.ಎಸ್. ಪ್ರಶಾಂತ್ 18 ರನ್ಗಳ ಸಹಾಯದಿಂದ 48 ರನ್ ಗಳಿಸಿದರು. ಫಯರ್ ಟೈಗರ್ ಬ್ಯಾಟಿಂಗ್ ನಡೆಸಿ ನಿಗದಿತ 6 ಓವರ್ಗಳಲ್ಲಿ 41 ರನ್ ಗಳಿಸಿ ಸೋಲನುಭವಿಸಿತ್ತು. ಬಿ ಪೂಲ್ನ ಪಂದ್ಯಾವಳಿಗಳು ತಾ. 30 ರಿಂದ (ಇಂದಿನಿಂದ) ನಡೆಯಲಿದೆ.