ವೀರಾಜಪೇಟೆ, ಏ. 29: ಸವಿತಾ ಸಮಾಜದ ಬಾಂಧವರು ಕಳೆದ ಮೂರುವರ್ಷಗಳಿಂದ ಕ್ರೀಡಾಕೂಟಕ್ಕೆ ಆದ್ಯತೆ ನೀಡಿರುವದರಿಂದ ಸಮುದಾಯದಲ್ಲಿ ಸೌಹಾರ್ದಯುತ ಜೀವನ ನಡೆಸಲು ಸಾಧ್ಯವಾಗಲಿದೆ ಕ್ರೀಡಾಕೂಟದೊಂದಿಗೆ ಸಮುದಾಯ ಬಾಂಧವರು ಮಕ್ಕಳ ಶಿಕ್ಷಣಕ್ಕೂ ಒತ್ತು ನೀಡಿದರೆ ಸಮುದಾಯದ ಬೆಳವಣಿಗೆಯೊಂದಿಗೆ ಪ್ರಗತಿಯೂ ಸಾಧ್ಯ ಎಂದು ವೀರಾಜಪೇಟೆ ಪಟ್ಟಣ ಸಹಕಾರ ಬ್ಯಾಂಕ್‍ನ ನಿರ್ದೇಶಕ ಮಲ್ಲಂಡ ಮಧು ದೇವಯ್ಯ ಹೇಳಿದರು.

ವೀರಾಜಪೇಟೆ ತಾಲೂಕು ಸವಿತಾ ಸಮಾಜದ ಕ್ರೀಡಾ ಮತ್ತು ಸಾಂಸ್ಕøತಿಕ ಸಮಿತಿ ವತಿಯಿಂದ ಸ್ಥಳೀಯ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಮೂರನೇ ವರ್ಷದ ಕ್ರಿಕೆಟ್ ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿ ಸವಿತಾ ಸಮಾಜ ಗ್ರಾಮೀಣ ಪ್ರದೇಶದ ಆಟಗಾರರನ್ನು ಸಂಘಟಿಸಿ ಪ್ರತಿಭೆಗಳಿಗೆ ಅವಕಾಶ ನೀಡಿರುವದು ಶ್ಲಾಘನಿಯ ಎಂದರು.

ಸವಿತಾ ಸಮಾಜದ ತಾಲೂಕು ಅಧ್ಯಕ್ಷ ಕೆ.ಟಿ.ವೆಂಕಟೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ ಕ್ರೀಡಾ ಪಟುಗಳು ಶಿಸ್ತನ್ನು ಪಾಲಿಸುವಂತಾಗಬೇಕು ಎಂದು ಹಾರೈಸಿದರು. ಶಿಕ್ಷಕ ಬಿ.ಆರ್.ಸತೀಶ್ ಬಿಡಿಸಿದ್ದ ಸವಿತಾ ಮಹರ್ಷಿ ಭಾವಚಿತ್ರವನ್ನು ಮಧುದೇವಯ್ಯ ಅನಾವರಣ ಗೊಳಿಸಿದರು. ವೇದಿಕೆಯಲ್ಲಿ ಸವಿತಾ ಸಮಾಜದ ನಗರ ಅಧ್ಯಕ್ಷ ಬಿ.ದೇವರಾಜು, ಮಹಿಳಾ ಘಟಕದ ಅಧ್ಯಕ್ಷೆ ಆರ್.ಬಿ.ವಸಂತಿ, ಹಿರಿಯರಾದ ಬಿ.ಜಿ.ನಾರಾಯಣ, ಎ.ಯು.ಗಣೇಶ್, ಹೆಚ್.ಪಿ.ಶುಭಾವತಿ, ದೇವಿಪ್ರಸಾದ್, ಮಾಜಿ ಸೈನಿಕ ಶಿವಾಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗೌರವ ಅಧ್ಯಕ್ಷ ಬಿ.ಆರ್.ಸತೀಶ್ ಸ್ವಾಗತಿಸಿ ನಿರೂಪಿಸಿದರು. ಪಂದ್ಯಾಟದಲ್ಲಿ 13 ತಂಡಗಳು ಭಾಗವಹಿಸಿದ್ದವು.