ಮಡಿಕೇರಿ, ಏ. 28: ನೆರೆಯ ಶ್ರೀಲಂಕಾ ರಾಷ್ಟ್ರದಲ್ಲಿ ನಡೆದಿರುವ ಸರಣಿ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಕೇಂದ್ರ ಗುಪ್ತಚರ ಇಲಾಖೆ ನೀಡಿರುವ ಸೂಚನೆಯಂತೆ ಕರ್ನಾಟಕ ರಾಜ್ಯದಲ್ಲೂ ಜನಸಂದಣಿಯಿಂದ ಕೂಡಿರುವ ಪ್ರದೇಶಗಳು ಹಾಗೂ ಸೂಕ್ಷ್ಮ ಕೇಂದ್ರಗಳಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಳ್ಳಲಾಗುತ್ತಿದೆ. ರಾಜ್ಯದಲ್ಲಿ ಈಗಾಗಲೇ ಹಿರಿಯ ಅಧಿಕಾರಿಗಳು ಈ ಕುರಿತು ಇಲಾಖಾ ಮಟ್ಟದ ಸಭೆ ಹಾಗೂ ಪ್ರಾರ್ಥನಾ ಮಂದಿರ, ಚರ್ಚ್‍ಗಳ ಮುಖಂಡರುಗಳೊಂದಿಗೆ ಚರ್ಚೆ ನಡೆಸಿ ಸೂಕ್ತ ಸಲಹೆಗಳನ್ನು ನೀಡಿದ್ದಾರೆ.
ಪ್ರಮುಖ ಪ್ರವಾಸಿ ತಾಣಗಳು, ಅಣೆಕಟ್ಟೆ, ಸರಕಾರಿ ಕಚೇರಿಗಳು ಸೇರಿದಂತೆ ಬಸ್ ನಿಲ್ದಾಣಗಳಂತಹ ಜನನಿಬಿಡ ಪ್ರದೇಶಗಳಲ್ಲಿ ಪೊಲೀಸ್ ಹದ್ದುಗಣ್ಣು ಇಡಲಾಗಿದೆ. ಶ್ವಾನದಳ ಸೇರಿದಂತೆ ವಿದ್ವಂಸಕ ಕೃತ್ಯ ತಪಾಸಣಾ ತಂಡ ಕೊಡಗು ಜಿಲ್ಲೆಯಲ್ಲಿಯೂ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವದನ್ನು ಎಸ್ಪಿ ಡಾ. ಸುಮನ್ ಅವರು ಖಚಿತಪಡಿಸಿದ್ದಾರೆ.
ಹಾರಂಗಿ ಜಲಾಶಯ, ಕುಶಾಲನಗರ ಬಸ್ ನಿಲ್ದಾಣ, ನ್ಯಾಯಾಲಯ ಆವರಣ, ಸೋಮವಾರಪೇಟೆಯ ಬಸ್ ನಿಲ್ದಾಣ, ನ್ಯಾಯಾಲಯ, ಸರಕಾರಿ ಕಚೇರಿಗಳ ಆವರಣದಲ್ಲಿ ಈ ತಂಡ ಪರಿಶೀಲನೆ ನಡೆಸಿದೆ. ಹಾರಂಗಿ ಜಲಾಶಯದಲ್ಲಿನ ಭದ್ರತಾ ಸಿಬ್ಬಂದಿಯ ಸಂಖ್ಯೆಯನ್ನೂ ಹೆಚ್ಚಿಸಲಾಗಿದೆ. ಇದರೊಂದಿಗೆ ಚರ್ಚ್‍ಗಳು, ಮಸೀದಿಗಳು, ದೇವಾಲಯಗಳ ವ್ಯಾಪ್ತಿಯಲ್ಲೂ ವಿದ್ವಂಸಕ ಕೃತ್ಯ ತಪಾಸಣಾ ತಂಡ ಕಾರ್ಯಾಚರಿಸಿದೆ.
ಮಡಿಕೇರಿಯ ಬಸ್ ನಿಲ್ದಾಣ, ಆಕಾಶವಾಣಿ ಕೇಂದ್ರ, ನ್ಯಾಯಾಲಯ, ಜಿಲ್ಲಾಡಳಿತ ಸಂಕೀರ್ಣದಲ್ಲೂ ಮುನ್ನೆಚ್ಚರಿಕಾ ತಪಾಸಣಾ ಪೊಲೀಸ್ ಕಣ್ಗಾವಲು ಮುಂದುವರಿಯಲಿದೆ ಎಂದು ಪತ್ರಿಕೆಗೆ ತಿಳಿದು ಬಂದಿದೆ.