ಸುಂಟಿಕೊಪ್ಪ, ಏ.29: ಸಂತ ಅಂತೋಣಿ ದೇವಾಲಯದ ಗವಿಯಲ್ಲಿ ಇರಿಸಿದ್ದ ಮಾತೆ ಮರಿಯಮ್ಮನವರ ವಿಗ್ರಹಕ್ಕೆ ಧಕ್ಕೆಗೊಳಿಸಿದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಂತ ಅಂತೋಣಿಯವರ ದೇವಾಲಯದ ಬಲಬದಿಯ ಗವಿಯಲ್ಲಿ ಮಾತೆ ಮರಿಯಮ್ಮನವರ ವಿಗ್ರಹವನ್ನು ಇರಿಸಲಾಗಿದ್ದು, ಪಟ್ಟಣದ ಜನತಾ ಕಾಲೋನಿ ನಿವಾಸಿ ಮಣಿಕಂಠ ಆಲಿಯಾಸ್ ತಳ್ಳು (24) ಎಂಬಾತ ದೇವಾಲಯದ ಗವಿಯಲ್ಲಿರುವ ಮಾತೆ ಮರಿಯಮ್ಮನವರ ವಿಗ್ರಹಕ್ಕೆ ಪ್ರಾರ್ಥಿಸಲು ಆಗಮಿಸಿ ವಿಗ್ರಹವನ್ನು ಮುತ್ತಿಕ್ಕಲು ತೆರಳಿದ್ದ ಸಂದರ್ಭ ವಿಗ್ರಹವು ಮಗುಚಿಕೊಂಡಿದೆ ಎನ್ನಲಾಗಿದೆ. ಭೀತಿಗೊಂಡ ಯುವಕ ವಿಗ್ರಹದಲ್ಲಿದ್ದ ಬಾಲಯೇಸು ಮುಖ ಭಾಗವು ಮುರಿದು ಹೋಗಿದ್ದನ್ನು ಮರದ ಬುಡದಲ್ಲಿ ಎಸೆದು ಹೋಗಿದ್ದಾನೆ. ತಾ. 29 ರಂದು ಸಂತ ಅಂತೋಣಿ ದೇವಾಲಯದ ಧರ್ಮಗುರುಗಳಾದ ಫಾದರ್ ಎಡ್ವರ್ಡ್ ವಿಲಿಯಂ ಸಾಲ್ಡಾನಾ ಅವರು ಠಾಣಾಧಿಕಾರಿ ಜಯರಾಂ ಅವರಿಗೆ ತಿಳಿಸಿದ ಮೇರೆ ಸ್ಥಳಕ್ಕೆ ಡಿವೈಎಸ್ಪಿ ದಿನಕರ ಶೆಟ್ಟಿ, ಠಾಣಾಧಿಕಾರಿ ಜಯರಾಂ ಹಾಗೂ ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ ನಡೆಸಿದರು. ಕೂಡಲೇ ಕಾರ್ಯಪ್ರವೃತ್ತ ರಾಗಿ ವ್ಯಕ್ತಿಯನ್ನು ಪತ್ತೆಹಚ್ಚಿ ವಿಚಾರಣೆ ನಡೆಸಲಾಗಿ ಯಾವದೇ ದುರು ದ್ದೇಶದಿಂದ ಕೃತ್ಯ ನಡೆಸದೆ ಅಚನಾಕಾಗಿ ನಡೆದಿರುವ ಬಗ್ಗೆ ಮಾಹಿತಿ ನೀಡಿದ ಮೇರೆಗೆ ದೇವಾಲಯದ ಧರ್ಮಗುರುಗಳು ಹಾಗೂ ಪಾಲನಾ ಸಮಿತಿ ಸದಸ್ಯರು ಒಗ್ಗೂಡಿ ಪ್ರಕರಣವನ್ನು ಇತಿಶ್ರೀಗೊಳಿಸಿದರು.