ಮಡಿಕೇರಿ, ಏ. 29: ತಾಲೂಕಿನ ಬೆಟ್ಟಗೇರಿ ಗ್ರಾಮ ಪಂಚಾಯಿತಿ ಪಕ್ಕದಲ್ಲಿರುವ ನ್ಯಾಯಬೆಲೆ ಅಂಗಡಿಯಲ್ಲಿ ಸರ್ವರ್ ಸಮಸ್ಯೆಯ ಕಾರಣ ಅನ್ನ ಭಾಗ್ಯ ಯೋಜನೆಯಡಿ ನೀಡುವ ಪಡಿತರ ಪಡೆಯಲು ಗ್ರಾಹಕರು ಪರದಾಡುವಂತಹ ಸ್ಥಿತಿ ಸೋಮವಾರ ನಿರ್ಮಾಣವಾಗಿದೆ.ಸಾಮಗ್ರಿಗಳನ್ನು ಪಡೆಯಲು ಬಯೋ ಮೆಟ್ರಿಕ್ ಪದ್ಧತಿ ಅಳವಡಿಸಿ ರುವದರಿಂದ ಆನ್‍ಲೈನ್‍ನಲ್ಲಿ ಸರ್ವರ್ (ಮೊದಲ ಪುಟದಿಂದ) ದೋಷವಿದ್ದ ಕಾರಣ ಗ್ರಾಹಕರು ಬೆಳಿಗ್ಗೆಯಿಂದ ಸಂಜೆಯವರೆಗೂ ಸರತಿ ಸಾಲಿನಲ್ಲಿ ನಿಲ್ಲಬೇಕಾಯಿತು. ನೂರಾರು ಮಂದಿ ಪಡಿತರ ಸಾಮಗ್ರಿಯಿಂದ ವಂಚಿತರಾಗುತ್ತಿದ್ದಾರೆ. ವಯೋವೃದ್ಧರು, ಮಹಿಳೆಯರು ಕಾಯುತ್ತ ನಿಂತವರು ಬಿಸಿಲ ಬೇಗೆಗೆ ಸುಸ್ತಾಗಿದ್ದರೂ, ಕೆಲವರು ವಾಪಸ್ಸು ಮನೆಗೆ ಹೋಗುವ ದೃಶ್ಯ ಕಂಡು ಬಂತು.
ಬೆಟ್ಟಗೇರಿ, ಅವಂದೂರು, ಅರ್ವತ್ತೊಕ್ಲು, ಹೆರವನಾಡು, ಪಾಲೂರು ಗ್ರಾಮದ ನೂರಾರು ಕುಟುಂಬಕ್ಕೆ ಅಲ್ಲಿ ಪಡಿತರ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ. ಪಡಿತರ ಸಾಮಗ್ರಿಗಳನ್ನು ಸಿಬ್ಬಂದಿಗಳು ಸರಿಯಾಗಿ ನೀಡುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಿಗ್ಗೆ 9 ಗಂಟೆಯಿಂದ ಸಂಜೆಯವರೆಗೂ ಕಾದರೂ ಸಾಮಗ್ರಿಗಳು ಸಿಗಲ್ಲ. ಪಡಿತರ ಸಾಮಗ್ರಿ ಪಡೆಯಲು 2 ದಿನದ ಕೂಲಿ ವ್ಯರ್ಥವಾಗುತ್ತಿದೆ. ಆಯಾ ತಿಂಗಳ ಪಡಿತರ ಆಯಾ ತಿಂಗಳಲ್ಲಿಯೇ ಪಡೆಯಬೇಕು. ಇಲ್ಲದೇ ಹೋದಲ್ಲಿ ಪಡಿತರದಿಂದ ವಂಚಿತವಾಗಬೇಕಾಗುತ್ತದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ. ಈ ಬಗ್ಗೆ ಮೇಲಧಿಕಾರಿಗಳು ತುರ್ತು ಗಮನ ಹರಿಸಿ ಜನರ ಸಮಸ್ಯೆ ಬಗೆಹರಿಸಬೇಕೆಂದು ಆಗ್ರಹಿಸಿದ್ದಾರೆ.