ಮಡಿಕೇರಿ, ಏ. 26: ಪ್ರಸಕ್ತ ವರ್ಷ ಸಾರ್ವಜನಿಕರಿಗೆ ಅತಿವೃಷ್ಟಿಯಿಂದ ತೊಂದರೆ ಯಾಗದಂತೆ ಅಗತ್ಯ ತುರ್ತು ಸೇವೆಗಳನ್ನು ನೀಡಲು ಕೊಡಗು ಜಿಲ್ಲಾಡಳಿತ ಸನ್ನದ್ಧವಾಗಿದೆ. ಸಾರ್ವಜನಿಕರು ಆತಂಕಕ್ಕೆ ಒಳಗಾಗದಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮನವಿ ಮಾಡಿದ್ದಾರೆ ಈ ಕುರಿತು ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಅತಿವೃಷ್ಟಿಯಿಂದ ಉಂಟಾಗಬಹುದಾದ ಹಾನಿಯ ಬಗ್ಗೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಕರೆದು ತುರ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ನಿರ್ದೇಶನ ನೀಡಲಾಗಿದೆ. ಅಲ್ಲದೆ ವಿಪತ್ತು ಉಂಟಾಗುವ ಸಾಧ್ಯತೆ ಇರುವ ಪ್ರದೇಶಗಳನ್ನು ಗುರುತಿಸಿ ಅಗತ್ಯ ಕ್ರಮ ವಹಿಸಲು ಮುಂಜಾಗ್ರತೆ ವಹಿಸಲಾಗುತ್ತಿದೆ. ಜಿಲ್ಲಾಡಳಿತದ ವತಿಯಿಂದ ತುರ್ತು ಪರಿಸ್ಥಿತಿ ಪರಿಹಾರ ಮತ್ತು ಪುನರ್ ನಿರ್ಮಾಣ ಸಮಿತಿಯನ್ನು ಜಿಲ್ಲಾ ಮಟ್ಟದಲ್ಲಿ ಹಿರಿಯ ನೇತೃತ್ವದಲ್ಲಿ ತಂಡಗಳನ್ನು ರಚನೆ ಮಾಡಲಾಗಿದೆ. ಈ ತಂಡವು ಸಾರ್ವಜನಿಕರಿಗೆ ಅಗತ್ಯ ಮಾಹಿತಿ, ಸಲಹೆ ನೆರವನ್ನು ನೀಡುತ್ತದೆ.

ಮುನ್ನೆಚ್ಚರಿಕೆ ಮತ್ತು ಸ್ಥಳಾಂತರಿಸುವ ಸಮಿತಿ, ಶೋಧನೆ ಮತ್ತು ರಕ್ಷಣಾ ಸಮಿತಿ, ಪ್ರಥಮ ಚಿಕಿತ್ಸಾ, ಸಾಮೂಹಿಕ ಅಪಘಾತ ನಿರ್ವಹಣೆ ಸಮಿತಿ, ಆಶ್ರಯ ನಿರ್ವಹಣೆ, ಪರಿಹಾರ ನಿರ್ವಹಣೆ, ಪ್ರಾಣಿ ರಕ್ಷಣಾ ಸಮಿತಿ, ಪೌಷ್ಠಿಕ ಆಹಾರ ವಿತರಣಾ ಸಮಿತಿ, ಸ್ವಚ್ಛತಾ ಸಮಿತಿ, ಹಾನಿ ಮೌಲ್ಯಮಾಪನ ಸಮಿತಿಗಳ ರಚಿಸಲಾಗಿದೆ. ಅಲ್ಲದೇ ಇದೇ ಸಮಿತಿಯನ್ನು ತಾಲೂಕು, ಗ್ರಾಮ ಮತ್ತು ಪಂಚಾಯತ್ ಮಟ್ಟದಲ್ಲಿ ಕೂಡ ರಚಿಸಲು ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ, ಯೂನಿಸೆಫ್, ಕ್ರೈಸ್ಟ್ ಯೂನಿವರ್ಸಿಟಿ, ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ, ಆಡಳಿತ ತರಬೇತಿ ಸಂಸ್ಥೆ, ಜಿಲ್ಲಾ ತರಬೇತಿ ಸಂಸ್ಥೆ ಮತ್ತು ಇತರೆ ಸಂಸ್ಥೆಗಳ ಸಹಯೋಗದೊಂದಿಗೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ ವಿಪತ್ತು ನಿರ್ವಹಣಾ ಯೋಜನೆ ತಯಾರಿಕೆ ಮತ್ತು ತರಬೇತಿಗೆ ಕ್ರಮವಹಿಸಲಾಗಿದೆ.

ತುರ್ತು ಪರಿಸ್ಥಿತಿ ಎದುರಾದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಬಗ್ಗೆ ಗ್ರಾಮ ಮಟ್ಟದಲ್ಲಿ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಎನ್‍ಡಿಆರ್‍ಎಫ್ ಸಿದ್ಧ

ಜಿಲ್ಲಾಡಳಿತದ ಕೋರಿಕೆಯಂತೆ ಸರ್ಕಾರದಿಂದ ಎನ್‍ಡಿಆರ್ ಎಫ್‍ನ ಒಂದು ತಂಡವನ್ನು ಪೂರ್ವ ನಿಯೋಜಿತವಾಗಿ ಕೊಡಗು ಜಿಲ್ಲೆಗೆ ನಿಯೋಜಿಸ ಲಾಗಿದ್ದು, ಈ ತಂಡವು ಮೇ ಕೊನೆಯ ವಾರದಿಂದ ಕಾರ್ಯ ಪ್ರವೃತ್ತವಾಗಿ ಸಾರ್ವಜನಿಕರಿಗೆ ಅಗತ್ಯ ನೆರವು ನೀಡಲು ಸಿದ್ದವಿದೆ. ಅತೀ ಸೂಕ್ಷ್ಮ ಮತ್ತು ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ವರದಿ ಸಲ್ಲಿಸುವ ಬಗ್ಗೆ ಈಗಾಗಲೇ ಜಿಯೋಲಾಜಿಕಲ್ ಸರ್ವೆ ಇಂಡಿಯಾ ಅಧಿಕಾರಿಗಳು ಸರ್ವೆ ನಡೆಸಿದ್ದು, ಅಂತಿಮ ವರದಿಯನ್ನು ನಿರೀಕ್ಷಿಸಲಾಗಿದ್ದು, ಜಿಎಸ್‍ಐ ನೆರವಿನೊಂದಿಗೆ ವೈಜ್ಞಾನಿಕ ಕ್ರಮದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವದು ಎಂದು ಮಾಹಿತಿ ನೀಡಿದ್ದಾರೆ.

ಕಾಮಗಾರಿ ಪ್ರಗತಿ ವಿವರ

ಜಿಲ್ಲೆಯಲ್ಲಿ ಜೂನ್ 2018 ರಿಂದ ಆಗಸ್ಟ್ 2018ರವರೆಗೆ ಸುರಿದ ಭಾರೀ ಮಳೆಯಿಂದಾಗಿ ಲೋಕೋಪಯೋಗಿ ಇಲಾಖಾ ವ್ಯಾಪ್ತಿಯಲ್ಲಿ ಬರುವ ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ ಮಣ್ಣು ಜರಿದು ಹಾಗೂ ರಸ್ತೆ ಕುಸಿದು ತೀವ್ರ ಹಾನಿಯಾಗಿದ್ದು, ಆ ರಸ್ತೆಗಳನ್ನು ಸಂಚಾರ ಯೋಗ್ಯ ಮಾಡಲು ತುರ್ತಾಗಿ ದುರಸ್ತಿ ಗೊಳಿಸಲು ರೂ.50 ಲಕ್ಷಗಳ ವೆಚ್ಚದಲ್ಲಿ 53 ಕಾಮಗಾರಿ ಗಳನ್ನು ಕೈಗೊಂಡು ಪೂರ್ಣ ಗೊಳಿಸಲಾಗಿದೆ. ಮುಖ್ಯ ಮಂತ್ರಿಗಳ ವಿಶೇಷ ಮಳೆಹಾನಿ ದುರಸ್ತಿ ಅನುದಾನದಲ್ಲಿ 4435 ಲಕ್ಷಗಳು ದೊರೆತಿದ್ದು, ಆಡಳಿತಾತ್ಮಕ ಅನುಮೋದನೆ ನೀಡಲಾದ 81 ಕಾಮಗಾರಿಗಳನ್ನು ಕೈಗೆತ್ತಿಕೊಂಡು 75 ಕಾಮಗಾರಿಗಳನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ. ಉಳಿದ 6 ಕಾಮಗಾರಿಗಳು ಪ್ರಗತಿಯಲ್ಲಿದೆ. ರೂ. 4100 ಲಕ್ಷ ವೆಚ್ಚ ಮಾಡಲಾಗಿದೆ.

ಕೊಡಗು ಜಿಲ್ಲೆ, ಮಡಿಕೇರಿಯ ಜಿಲ್ಲಾಡಳಿತ ಭವನ ಕಟ್ಟಡದ ಪೂರ್ವ ಭಾಗದಲ್ಲಿರುವ ಮಂಗಳೂರು ರಸ್ತೆ ಕಡೆ ತಡೆಗೋಡೆ ಮತ್ತು ಸಂಪರ್ಕ ರಸ್ತೆ ಹಾಗೂ ದಕ್ಷಿಣ ಭಾಗದಲ್ಲಿ ತಡೆಗೋಡೆ ನಿರ್ಮಿಸುವ ಕಾಮಗಾರಿಗೆ ರೂ. 7 ಕೋಟಿಗಳ ಪರಿಷ್ಕøತ ಅಂದಾಜು ಪಟ್ಟಿಯನ್ನು ಕಾರ್ಯಪಾಲಕ ಅಭಿಯಂತರರು, ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯಿಂದ ಸಲ್ಲಿಸಿದ್ದು, ಅನುಮೋದನೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

2018-019ನೇ ಸಾಲಿನಲ್ಲಿ ಪ್ರಕೃತಿ ವಿಕೋಪದಿಂದಾಗಿ ಆದ ಮಳೆ ಹಾಗೂ ಭೂಕುಸಿತಕ್ಕೆ ರಸ್ತೆಗಳು, ಅಂಗನವಾಡಿ ಕಟ್ಟಡಗಳು, ಶಾಲಾ ಕಟ್ಟಡಗಳು, ಡ್ರೈನೇಜ್, ಮೋರಿಗಳು ಹಾಳಾಗಿದ್ದು, ಇದರ ದುರಸ್ತಿಗಾಗಿ ಒಟ್ಟಾರೆ ಅಂದಾಜು ಮೊತ್ತ ರೂ. 1055.30 ಲಕ್ಷ ಜಿಲ್ಲಾಡತದಿಂದ ಮಂಜೂರಾಗಿದೆ. ಈ ಪೈಕಿ ರೂ.804.66 ಲಕ್ಷ ಅನುದಾನ ಜಿಲ್ಲಾಡಳಿತದಿಂದ ಬಿಡುಗಡೆಯಾಗಿದೆ. ಮೇಲಿನ ದುರಸ್ತಿ ಕಾಮಗಾರಿಗಳನ್ನು ಪಂಚಾಯಿತಿ ರಾಜ್ ಇಂಜಿನಿಯರಿಂಗ್ ವಿಭಾಗದಿಂದ ಅನುಷ್ಠಾನಗೊಳಿಸಲಾಗುತ್ತಿದ್ದು, ಒಟ್ಟು 650 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಇದರ ಪೈಕಿ 583.61 ಲಕ್ಷಗಳ ವೆಚ್ಚದಲ್ಲಿ 558 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ.

2 ನೇ ಹಂತದ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಜಿಲ್ಲೆಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನ ಒಟ್ಟು 2800 ಲಕ್ಷಗಳ ಅನುದಾನ ನಿಗಧಿಯಾಗಿದೆ. ಈ ಪೈಕಿ ರೂ. 2100 ಲಕ್ಷ ಅನುದಾನವನ್ನು ಬಿಡುಗಡೆಗೊಳಿಸಿದ್ದು, ಆ ಅನುದಾನದಲ್ಲಿ ಒಟ್ಟು 166 ಕಾಮಗಾರಿಗಳನ್ನು ಸರ್ಕಾರ ನೀಡಿರುವ ವಿನಾಯಿತಿಯಂತೆ 4(ಜಿ) ಅಡಿಯಲ್ಲಿ ತ್ವರಿತವಾಗಿ ಕೈಗೊಂಡಿದ್ದು, ಇದರ ಪೈಕಿ 124 ಕಾಮಗಾರಿಗಳು ಪೂರ್ಣಗೊಂಡಿದ್ದು, ರೂ.1053.78 ಲಕ್ಷ ವೆಚ್ಚಗೊಳಿಸಲಾಗಿದೆ.

ಪ್ರಧಾನ ಮಂತ್ರಿ ಗ್ರಾಮ್ ಸಡಕ್ ಯೋಜನೆ ಉಪವಿಭಾಗ (ಪಿಎಂಜಿಎಸ್‍ವೈ) ವ್ಯಾಪ್ತಿಯ ನಮ್ಮ ಗ್ರಾಮ ನಮ್ಮ ರಸ್ತೆ ಹಾಗೂ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ನಿರ್ಮಿಸಲಾದ ಒಟ್ಟು 10 ರಸ್ತೆಗಳು ಮತ್ತು 1 ಇತರೆ ಕಾಮಗಾರಿ 2018-19ನೇ ಸಾಲಿನಲ್ಲಿ ಸುರಿದ ಭಾರೀ ಮಳೆಗೆ ಹಾನಿಯಾಗಿದೆ. ತಾತ್ಕಾಲಿಕ ರಸ್ತೆ ಸಂಪರ್ಕಕ್ಕಾಗಿ ರೂ. 31.21 ಲಕ್ಷಗಳ 11 ಕಾಮಗಾರಿಗಳ ಮಂಜೂರಾತಿ ನೀಡಿ ಈವರೆಗೆ ರೂ. 23.37 ಲಕ್ಷ ಜಿಲ್ಲಾಡಳಿತದಿಂದ ಬಿಡುಗಡೆ ಮಾಡಲಾಗಿದೆ. ಈ ಪೈಕಿ 10 ಕಾಮಗಾರಿಗಳನ್ನು ಪೂರ್ಣ ಗೊಳಿಸಲಾಗಿದ್ದು, ರೂ. 21.13 ಲಕ್ಷ ವೆಚ್ಚ ಮಾಡಲಾಗಿದೆ.

ಮೇಲಿನ ರಸ್ತೆಗಳ ಪೈಕಿ 6 ರಸ್ತೆಗಳ ಆಯ್ದ ಭಾಗಗಳಲ್ಲಿ ಶಾಶ್ವತ ದುರಸ್ತಿ ಕೈಗೊಳ್ಳಲು ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿಯಲ್ಲಿ ರೂ. 515 ಲಕ್ಷಗಳು 6 ಕಾಮಗಾರಿಗಳಿಗೆ ಆಡಳಿತಾತ್ಮಕ ಮಂಜೂರಾತಿ ನೀಡಿ ರೂ. 386.25 ಲಕ್ಷಗಳ ಅನುದಾನವನ್ನು ಜಿಲ್ಲಾಡಳಿತದಿಂದ ಬಿಡುಗಡೆ ಮಾಡಲಾಗಿದೆ. ಮೇಲಿನ 6 ಕಾಮಗಾರಿಗಳ ಪೈಕಿ

(ಮೊದಲ ಪುಟದಿಂದ) 1 ಕಾಮಗಾರಿಗಳಿಗೆ ರೂ. 16.81 ವೆಚ್ಚ ಮಾಡಲಾಗಿದೆ.

ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅನುಮೋದನೆಗೊಂಡ ರೂ. 362 ಲಕ್ಷ ಅಂದಾಜು ಮೊತ್ತದ 17 ಕಾಮಗಾರಿಗಳ ಪೈಕಿ 16 ಕಾಮಗಾರಿಗಳು ಪೂರ್ಣಗೊಂಡಿದ್ದು, ರೂ. 233.73 ಲಕ್ಷ ವೆಚ್ಚ ಮಾಡಲಾಗಿರುತ್ತದೆ. ರಸ್ತೆ ದುರಸ್ಥಿ, ತಡೆಗೋಡೆ ನಿರ್ಮಾಣ, ಪೈಪ್ ಲೈನ್ ದುರಸ್ತಿ ಕಾಮಗಾರಿ, ಸ್ಯಾಂಡ್ ಬ್ಯಾಗ್ ಅಳವಡಿಸುವ ಕಾಮಗಾರಿಗಳನ್ನು ನಿರ್ವಹಿಸಲಾಗಿದೆ.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ವ್ಯಾಪ್ತಿಯಲ್ಲಿ 2018-19 ನೇ ಸಾಲಿನ ಭಾರೀ ಮಳೆ ಹಾಗೂ ಪ್ರವಾಹದಿಂದ ಜಿಲ್ಲೆಯಲ್ಲಿನ ಗ್ರಾಮೀಣ ಕುಡಿಯುವ ನೀರಿನ ಕಾಮಗಾರಿಗಳು ಹಾನಿಗೊಳಗಾಗಿದ್ದು, 1ನೇ ಹಂತವಾಗಿ ಅವುಗಳ ತುರ್ತು ದುರಸ್ತಿಗಾಗಿ ರೂ.198.50 ಲಕ್ಷ ಅಂದಾಜು ಮೊತ್ತದ 139 ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಈ ಪೈಕಿ 134 ಕಾಮಗಾರಿಗಳು ಪೂರ್ಣಗೊಂಡಿದ್ದು, ರೂ.105.96 ಲಕ್ಷ ವೆಚ್ಚ ಮಾಡಲಾಗಿದೆ. 2ನೇ ಹಂತವಾಗಿ ರೂ. 88 ಲಕ್ಷ ಅಂದಾಜಿನ 59 ಕಾಮಗಾರಿಗಳಿಗೆ ಆಡಳಿತಾತ್ಮಕ ಮಂಜೂರಾತಿ ದೊರೆತಿದ್ದು, ರೂ. 66.08 ಲಕ್ಷ ಜಿಲ್ಲಾಡಳಿತದಿಂದ ಬಿಡುಗಡೆಯಾಗಿದ್ದು, ಈ ಪೈಕಿ 53 ಕಾಮಗಾರಿಗಳು ಪೂರ್ಣಗೊಂಡಿದ್ದು, ರೂ. 26.67 ಲಕ್ಷಗಳು ವೆಚ್ಚವಾಗಿದೆ.

ಚೆಸ್ಕಾಂ ಇಲಾಖಾ ವ್ಯಾಪ್ತಿಯಲ್ಲಿ 2018-19ನೇ ಸಾಲಿನ ಮಳೆ - ಗಾಳಿ ಮತ್ತು ಭೂ ಕುಸಿತದಿಂದ ರೂ. 780.50 ಲಕ್ಷ ಅಂದಾಜಿನ 4269 ಕಂಬಗಳು, 363 ಪರಿವರ್ತಕಗಳು, 65.69 ಕಿ.ಮೀ. ವಾಹಕಗಳು, 7 11 ಕೆವಿ ಮಾರ್ಗಗಳು ಹಾನಿಯಾಗಿದ್ದು, ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ರೂ. 206 ಲಕ್ಷ ಮೊತ್ತ ಮತ್ತು ಎನ್‍ಡಿಆರ್‍ಎಫ್ ನಡಿಯಲ್ಲಿ ಜಿಲ್ಲಾಡಳಿತದಿಂದ ರೂ. 25 ಲಕ್ಷ ಒಟ್ಟು ರೂ. 549.50 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಎಲ್ಲಾ ಕಂಬಗಳು, ಮಾರ್ಗಗಳು ಮತ್ತು ಉಪಕರಣಗಳನ್ನು ದುರಸ್ತಿಪಡಿಸಲಾಗಿದೆ.

ಸಣ್ಣ ನೀರಾವರಿ ವಿಭಾಗ ವ್ಯಾಪ್ತಿಯಲ್ಲಿ 2018-19ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಬಿದ್ದ ಭಾರೀ ಮಳೆಯಿಂದಾಗಿ ಪ್ರಕೃತಿ ವಿಕೋಪದಿಂದ ಭೂಕುಸಿತ ಉಂಟಾಗಿದ್ದು, ಕೆಲವು ನದಿ, ತೊರೆ, ಹಳ್ಳಗಳಲ್ಲಿ ಯಥೇಚ್ಛವಾಗಿ ನೀರು ಹರಿದು ಹೊಂದಿಕೊಂಡಂತೆ ಇರುವ ರಸ್ತೆಗಳ ಬದಿ ಕುಸಿದಿದ್ದು, ನೀರು ವ್ಯವಸಾಯ ಯೋಗ್ಯ ಜಮೀನಿಗೆ ಹರಿದು ನಷ್ಟ ಉಂಟಾಗಿರುತ್ತದೆ. ಇದಕ್ಕಾಗಿ ಅಂದಾಜು ಮೊತ್ತ ರೂ. 182 ಲಕ್ಷಗಳಿಗೆ ಜಿಲ್ಲಾಡಳಿತದಿಂದ ರೂ. 136.46 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಒಟ್ಟು 30 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿರುತ್ತದೆ. ಇದರಲ್ಲಿ 16 ಕಾಮಗಾರಿಗಳು ಪೂರ್ಣಗೊಂಡಿದ್ದು, ಇದಕ್ಕೆ ಒಟ್ಟಾರೆ ರೂ.93.84 ಲಕ್ಷ ವೆಚ್ಚವಾಗಿರುತ್ತದೆ. ಇನ್ನು ಉಳಿದ ಕಾಮಗಾರಿಗಳು ಪ್ರಗತಿಯಲ್ಲಿವೆ.

ಮನೆಗಳ ನಿರ್ಮಾಣ ಪ್ರಗತಿ : ವಾಸದ ಮನೆ ಕಳೆದುಕೊಂಡು ನಿರಾಶ್ರಿತರಾದವರಿಗೆ ಪುನರ್ವಸತಿ ಕಲ್ಪಿಸಲು ಕರ್ಣಂಗೇರಿ, ಬಿಳಿಗೇರಿ, ಗಾಳಿಬೀಡು, ಮದೆ ಮತ್ತು ಜಂಬೂರು ಗ್ರಾಮದಲ್ಲಿ 78.46 ಎಕ್ರೆ ಜಾಗದಲ್ಲಿ 770 ನಿವೇಶನಗಳನ್ನು ಗುರುತಿಸಲಾಗಿದೆ. ಕರ್ಣಂಗೇರಿ, ಮದೆ ಮತ್ತು ಜಂಬೂರು ಗ್ರಾಮದಲ್ಲಿ 433 ಮನೆಗಳ ಕಾಮಗಾರಿ ಭರದಿಂದ ಸಾಗುತ್ತಿದ್ದು, ಕರ್ಣಂಗೇರಿ ಗ್ರಾಮದಲ್ಲಿ 35 ಮನೆಗಳ ಕಾಮಗಾರಿ ಏಪ್ರಿಲ್ ತಿಂಗಳ ಅಂತ್ಯದೊಳಗೆ ಸಂಪೂರ್ಣವಾಗಿ ಮುಗಿಯಲಿದೆ. ಮದೆ, ಜಂಬೂರು ಗ್ರಾಮಗಳಲ್ಲಿ 112 ಮನೆಗಳ ಕಾಮಗಾರಿ ಮೇ ತಿಂಗಳ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ.

ಮೊದಲನೆಯ ಹಂತದಲ್ಲಿ ಪೂರ್ಣ, ತೀವ್ರ ಮನೆ ಹಾನಿಯಾದ 417 ಕುಟುಂಬಗಳ ಪೈಕಿ 53 ನಿರಾಶ್ರಿತ ಕುಟುಂಬಗಳು ಅವರ ಸ್ವಂತ ಜಾಗದಲ್ಲಿ ಪುನರ್ವಸತಿ ಕಲ್ಪಿಸಕೊಳ್ಳುವದಾಗಿ ಘೋಷನಾ (ಒಪ್ಪಿಗೆ) ಪತ್ರ ನೀಡಿರುತ್ತಾರೆ. ಅದರಂತೆ 53 ನಿರಾಶ್ರಿತ ಕುಟುಂಬಗಳಿಗೆ ಸರ್ಕಾರದಿಂದ ತಲಾ 1 ಮನೆಗೆ ರೂ. 9.85 ಲಕ್ಷ ಅನುದಾನವನ್ನು 4 ಹಂತಗಳಲ್ಲಿ ಬಿಡುಗಡೆ ಮಾಡಲು ಕ್ರಮವಹಿಸಲಾಗುತ್ತಿದೆ.

ಇನ್‍ಫೋಸಿಸ್ ವತಿಯಿಂದ ಸೋಮವಾರಪೇಟೆ ತಾಲೂಕಿನ ಜಂಬೂರು ಗ್ರಾಮದ ಸ.ನಂ. 33/45ರಲ್ಲಿ 200 ಮನೆಗಳನ್ನು ನಿರ್ಮಿಸಲು ಮಂಜೂರಾತಿ ನೀಡಲಾಗಿದ್ದು, ಆ ಸಂಸ್ಥೆಯವರು ಕಾಮಗಾರಿ ಕೈಗೆತ್ತಿಕೊಂಡಿದ್ದಾರೆ. ಮನೆ ಕಳೆದುಕೊಂಡ ಸಂತ್ರಸ್ತರಿಗೆ ರಾಜ್ಯ ಸರ್ಕಾರದ ವತಿಯಿಂದ ಪ್ರತಿ ತಿಂಗಳಿಗೆ ರೂ. 10,000 ಸಾವಿರದಂತೆ ನವೆಂಬರ್ 2018 ಮಾಹೆಯಿಂದ ಮನೆ ಬಾಡಿಗೆಯನ್ನು ನೀಡಲಾಗುತ್ತಿದೆ. ಇದುವರೆಗೆ 412 ಫಲಾನುಭವಿಗಳಿಗೆ ರೂ. 212.10 ಲಕ್ಷ ಬಾಡಿಗೆ ಭತ್ಯೆ ಪಾವತಿಸಲಾಗಿದೆ.

ಬೆಳೆ ಪರಿಹಾರ ಮತ್ತು ಭೂಕುಸಿತಕ್ಕೆ ಸಂಬಂಧಿಸಿದಂತೆ ಒಟ್ಟು 33548 ರೈತರ ಮಾಹಿತಿಯನ್ನು ಪರಿಹಾರ ತಂತ್ರಾಂಶದಲ್ಲಿ ದಾಖಲಿಸಲಾಗಿರುತ್ತದೆ. ಈ ಪೈಕಿ ಒಟ್ಟು 21167 ರೈತರಿಗೆ ರೂ.1889.69 ಲಕ್ಷ ಪರಿಹಾರ ಮೊತ್ತವನ್ನು ಸರ್ಕಾರದಿಂದ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾಹಿತಿ ನೀಡಿದ್ದಾರೆ.