ಮಡಿಕೇರಿ, ಏ. 25: ಜಿಲ್ಲೆಯ ನಾನಾ ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ದೂರುಗಳು ಕೇಳಿ ಬರುತ್ತಿದ್ದು, ತ್ವರಿತವಾಗಿ ಕುಡಿಯುವ ನೀರು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು ನಿರ್ದೇಶನ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ಕುಡಿಯುವ ನೀರು ಹಾಗೂ ಬರ ನಿರ್ವಹಣೆ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕುಡಿಯುವ ನೀರಿನ ಸಂಬಂಧ ಸಮಸ್ಯೆಗಳು ಕೇಳಿ ಬಂದಲ್ಲಿ ತಕ್ಷಣವೇ ತಹಶೀಲ್ದಾರರು, ಸಂಬಂಧಪಟ್ಟ ಎಂಜಿನಿಯರ್ಗಳು ಸ್ಥಳಕ್ಕೆ ಭೇಟಿ ನೀಡಿ ಪರಿಹರಿಸಬೇಕು ಎಂದು ಅವರು ಸೂಚಿಸಿದರು. ಕುಡಿಯುವ ನೀರಿನ ಸಮಸ್ಯೆ ಇದೆ ಎಂಬ ದೂರುಗಳು ಕೇಳಿ ಬರದಂತೆ ನೋಡಿಕೊಳ್ಳುವದು ಸಂಬಂಧಪಟ್ಟ ಅಧಿಕಾರಿಗಳ ಜವಾಬ್ದಾರಿಯಾಗಿದೆ. ಆ ನಿಟ್ಟಿನಲ್ಲಿ ಹೆಚ್ಚಿನ ಗಮನಹರಿಸುವಂತೆ ನಿರ್ದೇಶನ ನೀಡಿದರು.
ಜಾನುವಾರುಗಳಿಗೆ ಮೇವು, ಗೋಶಾಲೆ ತೆರೆಯುವದು, ಮೇವು ಬ್ಯಾಂಕ್ ನಿರ್ಮಾಣ ಮತ್ತಿತರ ಬಗ್ಗೆ ಗಮನಹರಿಸುವಂತೆ ಸೂಚಿಸಿದರಲ್ಲದೆ, ಯಾವದೇ ಕಾರಣಕ್ಕೂ ಸಮಸ್ಯೆ ಉಂಟಾಗಬಾರದು ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳ ಪಟ್ಟಿ ಮಾಡಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಮುಂದಿನ ಮಳೆಗಾಲಕ್ಕೆ ಈಗಿನಿಂದಲೇ ಅಗತ್ಯ ತಯಾರಿ ಮಾಡಿಕೊಳ್ಳಬೇಕಿದೆ. ಮಳೆಯಿಂದ ಹೆಚ್ಚಿನ ಹಾನಿಯಾಗುವ ಸಾಧ್ಯತೆ ಇರುವದರಿಂದ ಅಧಿಕಾರಿಗಳು ಈಗಾಗಲೇ ಪ್ರಕೃತಿ ವಿಕೋಪ ಸಂಭವಿಸಿದ ಗ್ರಾಮಗಳಿಗೆ ಭೇಟಿ ನೀಡುವ ಮೂಲಕ ಸದ್ಯದ ಸ್ಥಿತಿಗತಿಯ ಮಾಹಿತಿಯನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಪ್ರಕೃತಿ ವಿಕೋಪದಡಿ ನಿರ್ಮಾಣವಾಗುತ್ತಿರುವ ಮನೆಗಳ ನಿರ್ಮಾಣ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಎಂಜಿನಿಯರ್ಗಳಿಗೆ ಅವರು ನಿರ್ದೇಶನ ನೀಡಿದರು.
ಜಿ.ಪಂ. ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಂಜಿನಿಯರ್ ರೇವಣ್ಣವರ್ ಜಿಲ್ಲೆಯ ಮೂರು ತಾಲೂಕು ಬರಪೀಡಿತ ಪ್ರದೇಶವೆಂದು ಘೋಷಣೆಯಾಗಿದ್ದು, ಕುಡಿಯುವ ನೀರು ಸಂಬಂಧ ಹೆಚ್ಚಿನ ಗಮನಹರಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಕಳೆದ ವರ್ಷ ಟಾಸ್ಕ್ಪೋರ್ಸ್ನಡಿ ಜಿಲ್ಲೆಯ ಮೂರು ತಾಲೂಕಿಗೆ ತಲಾ 75 ಲಕ್ಷದಂತೆ ಒಟ್ಟು 225 ಲಕ್ಷ ರೂ. 149 ಲಕ್ಷ ರೂ. ಬಿಡುಗಡೆಯಾಗಿದ್ದು, 107 ಕಾಮಗಾರಿ ತೆಗೆದುಕೊಳ್ಳಲಾಗಿದೆ. ಇದರಲ್ಲಿ 68 ಕಾಮಗಾರಿಗಳು ಪೂರ್ಣಗೊಂಡಿವೆ. 15 ಕಾಮಗಾರಿ ಗಳು ಪ್ರಗತಿಯಲ್ಲಿದೆ. 24 ಕಾಮಗಾರಿ ಗಳನ್ನು ಪ್ರಾರಂಭಿಸಬೇಕಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮವಹಿಸಲು ಗ್ರಾ.ಪಂ. ಮೂಲಕ ನೀರಿನ ತೊಟ್ಟಿ ಅಳವಡಿಸಲು ಕ್ರಮವಹಿಸಲಾಗುತ್ತಿದೆ ಎಂದು ಪಶುಪಾಲನ ಇಲಾಖೆಯ ಉಪ ನಿರ್ದೇಶಕ ತಮ್ಮಯ್ಯ ಹೇಳಿದರು.
ಉಪ ವಿಭಾಗಾಧಿಕಾರಿ ಟಿ.ಜವರೇಗೌಡ ಪ್ರಥಮ ಹಂತದಲ್ಲಿ 417 ಕುಟುಂಬಗಳನ್ನು ಆಯ್ಕೆ ಮಾಡಲಾಗಿದೆ. ಎರಡನೇ ಹಂತದಲ್ಲಿ 411 ಮನೆಗಳ ಪಟ್ಟಿ ಸಿದ್ಧಪಡಿಸ ಲಾಗಿದ್ದು, ಒಟ್ಟು 829 ಮನೆಗಳನ್ನು ನಿರ್ಮಿಸಲಾಗುತ್ತಿದೆ. ಬಾಕಿ ಇರುವದನ್ನು ಪಟ್ಟಿ ಮಾಡಿ ಮನೆ ನಿರ್ಮಿಸಲಾಗುವದು ಎಂದು ಹೇಳಿದರು.
ಈ ಬಗ್ಗೆ ಮಾಹಿತಿ ನೀಡಿದ ಹೆಬಿಟೇಟ್ ಸಂಸ್ಥೆಯ ಎಂಜಿನಿಯರ್ ಈಗಾಗಲೇ ಕರ್ಣಂಗೇರಿಯಲ್ಲಿ 35, ಮದೆನಾಡು ಗ್ರಾಮದಲ್ಲಿ 53 ಮನೆಗಳು ಪೂರ್ಣಗೊಳ್ಳುವ ಹಂತದಲ್ಲಿದ್ದು, ಮೇ ಅಂತ್ಯದೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವದು ಎಂದರು.
ಡಿಎಚ್ಒ ಡಾ. ಕೆ. ಮೋಹನ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಗೋಪಾಲಕೃಷ್ಣ, ನಗರಸಭೆ ಆಯುಕ್ತ ಎಂ.ಎಲ್. ರಮೇಶ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಗುಪ್ತಾಜಿ, ಕಾರ್ಮಿಕ ಅಧಿಕಾರಿ ರಾಮಕೃಷ್ಣ, ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್ ಸೋಮಶೇಖರ್, ಅಗ್ನಿಶಾಮಕ ದಳದ ಅಧಿಕಾರಿ ಚಂದನ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಚಂದ್ರಶೇಖರ್, ತಹಶೀಲ್ದಾರ್ ಗೋವಿಂದರಾಜು ಇತರರು ಇದ್ದರು.