ಚೆಯ್ಯಂಡಾಣೆ: ಇಲ್ಲಿಗೆ ಸಮೀಪದ ಚೇಲವಾರ ಗ್ರಾಮದ ಚೇಲಮಾನಿ ಶ್ರೀ ಭಗವತಿ ದೇವರ ಉತ್ಸವವು ತಾ. 24 ರಿಂದ 30 ರ ತನಕ ನಡೆಯಲಿದೆ. ತಾ. 27 ರಂದು ಸಂಜೆ 5 ಗಂಟೆಗೆ ಪಟ್ಟಣಿ, ದೇವಸ್ಥಾನದಲ್ಲಿ ಪ್ರಾರ್ಥನೆ, ದೇವತಕ್ಕರ ಮನೆಯಿಂದ ಭಂಡಾರ ತರುವದು ಮತ್ತು ದುರ್ಗಾಸೇವೆ, ದೀಪಾರಾಧನೆ, ಅಂದಿ ಬೆಳಕು, ತಂತ್ರ ಸಹಿತ ದೇವರ ಬಲಿ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. 28ರಂದು ನೈರ್ಮಲ್ಯ ಬಲಿ ಇರುಬೆಳಕು, ಬೆಳಿಗ್ಗೆ ಎತ್ತು ಪೋರಾಟ, ತೆಂಗಿನಕಾಯಿಗೆ ಗುಂಡು ಹೊಡೆಯುವದು, ವಿಶೇಷ ಪೂಜೆ, ಮಹಾಪೂಜೆ, ಅನ್ನ ಸಂತರ್ಪಣೆ ನಡೆಯಲಿದೆ. 29ರಂದು ಬೆಳಿಗ್ಗೆ ಶ್ರೀ ಭಗವತಿ ದೇವರು ಪೊನ್ನೋಲ ಶಾಸ್ತಾವು ದೇವರ ಸನ್ನಿಧಿಗೆ ಹೋಗುವದು. 12.30ಕ್ಕೆ ವಿಶೇಷಪೂಜೆ, ಅನ್ನ ಸಂತರ್ಪಣೆ, 2 ಗಂಟೆಗೆ ಮಹಾಸಭೆ, ಸಂಜೆ 4 ಗಂಟೆಗೆ ದೇವರ ಅವಭೃತ ಸ್ನಾನ, ದೇವರ ನೃತ್ಯ, ಮಹಾಪೂಜೆ, ಅನ್ನ ಸಂತರ್ಪಣೆ ನಡೆಯಲಿದೆ. ತಾ. 30 ರಂದು ಬೆಳಿಗ್ಗೆ ಕಲಶಪೂಜೆ, ಅಭಿಷೇಕ ಮಹಾ ಪೂಜೆ, ಮಂತ್ರಾಕ್ಷತೆ, ಅನ್ನಸಂತರ್ಪಣೆ ನಡೆಯಲಿದೆ.

ಕುಶಾಲನಗರ: ರಾಮನವಮಿ ಅಂಗವಾಗಿ ಕುಶಾಲನಗರ ಆರ್ಯವೈಶ್ಯ ಮಹಿಳಾ ಮಂಡಳಿ ವತಿಯಿಂದ ಸ್ಥಳೀಯ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು. ಆರ್ಯವೈಶ್ಯ ಮಂಡಳಿ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಿಳಾ ಮಂಡಳಿಯ ಸದಸ್ಯರು ಸಾಮೂಹಿಕವಾಗಿ ರಾಮನಾಮ ಜಪಿಸುವ ಮೂಲಕ ಪೂಜೆ ಸಲ್ಲಿಸಿದರು. ದೇವಾಲಯದ ಅರ್ಚಕ ಪ್ರಮೋದ್ ಭಟ್ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ಜರುಗಿದವು. ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಬಿ.ಎಲ್.ಸತ್ಯನಾರಾಯಣ, ಮಹಿಳಾ ಮಂಡಳಿ ಅಧ್ಯಕ್ಷೆ ಶೋಭಾ ಸತ್ಯ ಮತ್ತಿತರರು ಇದ್ದರು. ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಶ್ರೀ ರಾಮ ಸೇವಾ ಸಮಿತಿ ವತಿಯಿಂದ ನಡೆಯುತ್ತಿರುವ 21ನೇ ವರ್ಷದ ಶ್ರೀ ರಾಮೋತ್ಸವ ಕಾರ್ಯಕ್ರಮ ಅಂಗವಾಗಿ ಶ್ರೀರಾಮ ಪಟ್ಟಾಭಿಷೇಕ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು. ಶ್ರೀರಾಮ ಸೇವಾ ಸಮಿತಿ ಅಧ್ಯಕ್ಷ ಕೆ.ಎಸ್. ರಾಜಶೇಖರ್, ಕಾರ್ಯದರ್ಶಿ ಎಸ್. ಅನಿಲ್, ಖಜಾಂಚಿ ಸುಬ್ರಮಣ್ಯ ಭಟ್, ನಿರ್ದೇಶಕರಾದ ಗೋಪಾಲಕೃಷ್ಣ, ರಮಾ ವಿಜಯೇಂದ್ರ, ರಜನಿ ಪ್ರದೀಪ್, ವಿಜಯೇಂದ್ರ ಮತ್ತಿತರರು ಇದ್ದರು.ಮಡಿಕೇರಿ: ಭಾಗಮಂಡಲ ಸಮೀಪದ ಚೆಟ್ಟಿಮಾನಿ-ಪದಕಲ್ಲು ಗ್ರಾಮದ ಶ್ರೀ ಭಗವತಿ ದೇವರ ವಾರ್ಷಿಕ ಹಬ್ಬ ಶ್ರದ್ಧಾಭಕ್ತಿಯಿಂದ ನೆರವೇರಿತು. ತಾ. 14 ರಿಂದ ಆರಂಭಗೊಂಡು ವಿವಿಧ ಪೂಜಾ ವಿಧಿವಿಧಾನಗಳೊಂದಿಗೆ ತಾ. 21 ರಂದು ಸಮಾಪ್ತಿಗೊಂಡಿತು.ಸಿದ್ದಾಪುರ: ಇಂಜಲಗರೆಯ ಪೂಮಡಪುರ ಶ್ರೀ ಮುತ್ತಪ್ಪ ದೇವಾಲಯದ ವಾರ್ಷಿಕೋತ್ಸವ ಮತ್ತು ತೆರೆ ಮಹೋತ್ಸವ ಅದ್ಧೂರಿಯಿಂದ ನಡೆಯಿತು. ಮುತ್ತಪ್ಪ, ತಿರುವಪ್ಪನ ವೆಳ್ಳಾಟಂ, ಶಾಸ್ತಪ್ಪನ ವೆಳ್ಳಾಟಂ, ಗುಳಿಗನ ತೆರೆ, ವಸೂರಿಮಾಲ ತೆರೆ, ಭಗವತಿ ತೆರೆ ನಡೆಯಿತು. ಉತ್ಸವದ ಅಂಗವಾಗಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಸೋಮವಾರಪೇಟೆ: ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮದ ಶ್ರೀ ಸಬ್ಬಮ್ಮ ದೇವರ ವಾರ್ಷಿಕ ಸುಗ್ಗಿ ಉತ್ಸವ ತಾ. 25 ಮತ್ತು 26 ರಂದು ನಡೆಯಲಿದೆ. ತಾ. 25 ರಂದು ಪೂರ್ವಾಹ್ನ 6.30 ರಿಂದ 8.30 ರವರೆಗೆ ಗಂಗಾಸ್ನಾನ, ಮುಡಿ ಹರಕೆ ಒಪ್ಪಿಸುವದು, ಬೀದಿ ರಾಜಾಂಗಣದಲ್ಲಿ ಮೆರವಣಿಗೆ, ಸನ್ನಿಧಿ ಪ್ರವೇಶ ನಡೆಯಲಿದೆ. ತಾ. 26 ರಂದು ಬೆಳಿಗ್ಗೆ 6.30 ರಿಂದ 9.30ರ ವರೆಗೆ ಹಣ್ಣುಕಾಯಿ ಮತ್ತು ಮಡೆ ಉತ್ಸವ, ನಂತರ ಸುಗ್ಗಿ ಕುಣಿತ ಕಾರ್ಯಕ್ರಮ ನಡೆಯಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ರಾಜ್‍ಗೋಪಾಲ್ ತಿಳಿಸಿದ್ದಾರೆ.ಸೋಮವಾರಪೇಟೆ: ಸಮೀಪದ ಹಾನಗಲ್ಲು ಬಾಣೆಯಲ್ಲಿರುವ ಶ್ರೀ ಚೌಡೇಶ್ವರಿ ದೇವರ ವಾರ್ಷಿಕ ಮಹಾಪೂಜೋತ್ಸವದ ಅಂಗವಾಗಿ ದೇವಾಲಯದಲ್ಲಿ ಗಣಪತಿ ಹೋಮ ಸೇರಿದಂತೆ ಇತರ ಪೂಜಾ ಕೈಂಕರ್ಯಗಳು ನೆರವೇರಿದವು.

ಅರ್ಚಕ ಮಿಥುನ್ ಶಾಸ್ತ್ರೀ ಅವರ ಪೌರೋಹಿತ್ಯದಲ್ಲಿ ಗಣಪತಿ ಹೋಮ ನಡೆಯಿತು. ಕಲಶ ಮೆರವಣಿಗೆಯೊಂದಿಗೆ ದೇವರಿಗೆ ಗಂಗಾಪೂಜೆ ನೆರವೇರಿಸಲಾಯಿತು. ಗ್ರಾಮದ ರಾಜು ಮತ್ತು ವನಿತಾ ದಂಪತಿಗಳು ದೇವಿಯ ಮುಖವಾಡವನ್ನು ಸಮರ್ಪಿಸಿದರು. ಮಹಾ ಮಂಗಳಾರತಿ ನಂತರ ಕ್ರೀಡಾಕೂಟ ಜರುಗಿತು.ಕುಶಾಲನಗರ: ಸಮೀಪದ ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಳುವಾರ ಗ್ರಾಮದ ಗ್ರಾಮದೇವತೆ ಅಳುವಾರದಮ್ಮ ದೇವಾಲಯದ ವಾರ್ಷಿಕ ಪೂಜೋತ್ಸವ ತಾ. 25 ಮತ್ತು 26 ರಂದು ಜರುಗಲಿದೆ.

ತಾ 25 ರಂದು ದೇವಾಲಯದ ಆವರಣದಲ್ಲಿ ಅಮ್ಮನ ಸನ್ನಿಧಿಯಲ್ಲಿ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಲಿವೆ. ಹೋಮ ಹವನ, ನವಗ್ರಹ ಪೂಜೆ, ಕಲಶ ಸ್ಥಾಪನೆ, ಪೂಜಾದಿಗಳು ನಡೆಯಲಿವೆ.

ತಾ. 26 ರಂದು ಅಳುವಾರದಮ್ಮನ ವಾರ್ಷಿಕ ಪೂಜೋತ್ಸವ ಜರುಗಲಿದೆ. ಶ್ರೀ ದೇವಿಯ ಉತ್ಸವ ವಿದ್ಯುತ್ ದೀಪಾಲಂಕೃತಗೊಂಡ ಭವ್ಯ ಮಂಟಪದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಾದ್ಯಗೋಷ್ಠಿಗಳೊಂದಿಗೆ ಮೆರವಣಿಗೆ ನಡೆಯಲಿದೆ. ನಂತರ ಸಿಡಿಮದ್ದು ಪ್ರದರ್ಶನ ನಡೆಯಲಿದೆ. ಅಂದು ಬೆಳಿಗ್ಗೆ 6 ಗಂಟೆಗೆ ಗಂಗಾ ಸ್ಥಾನದಿಂದ ಗರ್ಭಗುಡಿಗೆ ಮಂಗಳ ವಾದ್ಯಗಳೊಂದಿಗೆ ಕಲಶ ತರುವ ಕಾರ್ಯಕ್ರಮ ಏರ್ಪಡಿಸಲಾಗಿದೆ.