ಕೊಲಂಬೊ, ಏ. 21: ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಇಂದು ರಕ್ತದೋಕುಳಿ ಹರಿದಿದೆ.ಎಂಟು ಕಡೆ ನಡೆದ ಆತ್ಮಾಹುತಿ ಬಾಂಬ್ ಧಾಳಿಯಿಂದಾಗಿ 35 ವಿದೇಶಿಯರು ಸೇರಿದಂತೆ 207 ಜನರು ಮೃತಪಟ್ಟಿದ್ದಾರೆ. 400 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.ಈ ಧಾಳಿಯ ಹಿಂದೆ ಉಗ್ರರ ಕೈವಾಡದ ಶಂಕೆ ವ್ಯಕ್ತವಾಗಿದ್ದು, ಏಳು ಮಂದಿ ಶಂಕಿತ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಶ್ರೀಲಂಕಾ ರಕ್ಷಣಾ ಸಚಿವ ರುವಾನ್ ವಿಜೆವರ್ದನೆ ತಿಳಿಸಿದ್ದಾರೆ.

ಕೊಲಂಬೊದಲ್ಲಿನ ಮೂರು ಹೋಟೆಲ್ ಹಾಗೂ ಚರ್ಚ್‍ನಲ್ಲಿ ಮೊದಲ ಬಾಂಬ್ ಸ್ಟೋಟಿಸಿದ್ದರೆ, ಕೊಲಂಬೊ ಹೊರವಲಯದಲ್ಲಿನ ಇನ್ನಿತರ ಎರಡು ಚರ್ಚ್‍ಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯುತ್ತಿದ್ದಾಗ ಬಾಂಬ್ ಸ್ಟೋಟಿಸಿದೆ. ತದನಂತರ ದಾಹಿವಾಲಾದಲ್ಲಿನ ರಾಷ್ಟ್ರೀಯ ಪ್ರಾಣಿ ಸಂಗ್ರಹಾಲಯದಲ್ಲಿ ಎದುರುಗಡೆಯ ಹೋಟೆಲ್‍ನಲ್ಲಿ ಮತ್ತೊಂದು ಬಾಂಬ್ ಸ್ಟೋಟಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಸ್ಥಳೀಯ ಕಾಲಮಾನ ಬೆಳಗ್ಗೆ 8-45 ರ ಸುಮಾರಿನಲ್ಲಿ ಬಾಂಬ್ ಸ್ಟೋಟಿಸಿದ್ದು, ಯಾವದೇ ಸಂಘಟನೆ ಧಾಳಿಯ ಹೊಣೆ ಹೊತ್ತುಕೊಂಡಿಲ್ಲ.

ಈ ಹೇಯಕೃತ್ಯವನ್ನು ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಾ ಸಿಂಘೆ ಖಂಡಿಸಿದ್ದು, ಸದೃಢ ಹಾಗೂ ಐಕ್ಯತೆಯಿಂದ ಇರುವಂತೆ ಜನತೆಗೆ ಕರೆ ನೀಡಿದ್ದಾರೆ. ವದಂತಿಗಳನ್ನು ಹರಡದಂತೆ ಅವರು ಮನವಿ ಮಾಡಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು

(ಮೊದಲ ಪುಟದಿಂದ) ಸರ್ಕಾರ ಸೂಕ್ತ ಕ್ರಮ ಕೈಗೊಂಡಿದೆ ಎಂದು ಅವರು ಟ್ವಿಟ್ ಮಾಡಿದ್ದಾರೆ.ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡಾ ಈ ಘಟನೆಯನ್ನು ಖಂಡಿಸಿದ್ದು, ನಮ್ಮ ವಲಯದಲ್ಲಿ ಬರ್ಬರ ಕೃತ್ಯಕ್ಕೆ ಅವಕಾಶವಿಲ್ಲ, ಶ್ರೀಲಂಕಾ ಜನರೊಂದಿಗೆ ಭಾರತ ಇರುವದಾಗಿ ಹೇಳಿದ್ದಾರೆ. ಶ್ರೀಲಂಕಾ ದಲ್ಲಿ ಭಾರತದ ಹೈ ಕಮೀಷನರ್ ಅಲ್ಲಿಯೇ ಇದ್ದು ಪರಿಸ್ಥಿತಿಯ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ ಸರಣಿ ಸ್ಫೋಟದ ನಂತರ ಶ್ರೀಲಂಕಾದಲ್ಲಿ ಕಫ್ರ್ಯೂ ವಿಧಿಸಲಾಗಿದೆ.