ಮಡಿಕೇರಿ, ಏ. 21: ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳನ್ನು ಅಭಿವೃದ್ಧಿಗೊಳಿಸು ವದರೊಂದಿಗೆ ಜಿಲ್ಲೆಯತ್ತ ಬರುವ ಪ್ರವಾಸಿಗರಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ದಿಸೆಯಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ವಿಶೇಷ ಕಾಳಜಿ ವಹಿಸಿದ್ದಾರೆ. ಈ ಸಂಬಂಧ ಪ್ರವಾಸಿ ತಾಣಗಳನ್ನು ಅಭಿವೃದ್ಧಿಗೊಳಿಸಲು ಖುದ್ದು ಪರಿಶೀಲಿಸಿರುವ ಅವರು ಅಗತ್ಯ ಕಾಮಗಾರಿಗೆ ನಿರ್ದೇಶನ ನೀಡಿದ್ದಾರೆ.ಇತ್ತೀಚಿನ ವರ್ಷಗಳಲ್ಲಿ ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಇತರೆಡೆಗಳಲ್ಲಿ ಪ್ರವಾಸಿ ತಾಣಗಳತ್ತ ಅಧಿಕ ಸಂಖ್ಯೆಯಲ್ಲಿ ಬರುತ್ತಿರುವ ಜನರನ್ನು ನಿಭಾಯಿಸುವ ದಿಸೆಯಲ್ಲಿ ದೂರದೃಷ್ಟಿಯ ಯೋಜನೆ ರೂಪಿಸಲಾಗುತ್ತಿದೆ. ಆ ಮೂಲಕ ವಾಹನ ದಟ್ಟಣೆ ಹಾಗೂ ಜನದಟ್ಟಣೆಯ ಒತ್ತಡ ತಪ್ಪಿಸುವ ಸಲುವಾಗಿ ಹಲವಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ.
ರಾಜಾಸೀಟು ಅಭಿವೃದ್ಧಿ: ಮುಖ್ಯವಾಗಿ ಪ್ರವಾಸೋದ್ಯಮ ಇಲಾಖೆಯಿಂದ ನಗರದ ರಾಜಾಸೀಟ್ ಉದ್ಯಾನಕ್ಕೆ ಕಾಯಕಲ್ಪ ನೀಡುವ ದಿಸೆಯಲ್ಲಿ ರೂ. 50 ಕೋಟಿ ವೆಚ್ಚದ ಯೋಜನೆ ರೂಪಿಸಿದ್ದು, ಈಗಾಗಲೇ ಸರಕಾರದಿಂದ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ ಎಂದು ಗೊತ್ತಾಗಿದೆ. ಈ ಯೋಜನೆಯಡಿ ರಾಜಾಸೀಟ್ ಉದ್ಯಾನದ ಕೆಳ ಭಾಗಕ್ಕೆ (ಮಂಗಳೂರು ರಸ್ತೆ ಭಾಗ) ಅಲ್ಲಿನ ಗುಡ್ಡಗಳಲ್ಲಿ ಪ್ರವಾಸಿಗರು ವಿಹರಿಸುವ ನಿಟ್ಟಿನಲ್ಲಿ ಕಲ್ಲು ಬೆಂಚುಗಳನ್ನು ಹಾಕುವದರೊಂದಿಗೆ, ಪುಷ್ಪೋದ್ಯಾನ ದೊಂದಿಗೆ ಅಂದವನ್ನು ಹೆಚ್ಚಿಸಲಾಗು ತ್ತದೆ. ಈ ಪ್ರದೇಶದಲ್ಲಿ ಪ್ರವಾಸಿಗರ ಸುರಕ್ಷತಾ ಕ್ರಮ ಸಹಿತ ತಡೆಬೇಲಿ ನಿರ್ಮಿಸಿ ಪ್ರಕೃತಿ ಸೌಂದರ್ಯ ವೀಕ್ಷಿಸುತ್ತಾ ವಿಹರಿಸಲು ವ್ಯವಸ್ಥೆ ಕಲ್ಪಿಸಲಾಗುತ್ತದೆ.
ಅಲ್ಲದೆ ರಾಜಾಸೀಟ್ ಹಾಗೂ ಪುಟಾಣಿ ರೈಲು ನಡುವೆ ಜಾಗ ವಿಸ್ತರಿಸಿ ಪ್ರವಾಸಿಗರು ನಿರಾಳವಾಗಿ ಸುಳಿದಾಡುವ ದಿಸೆಯಲ್ಲಿ ಅಭಿವೃದ್ದಿಗೆ ಒತ್ತು ನೀಡಲಾಗುತ್ತಿದ್ದು, ಈ ಪ್ರದೇಶದಲ್ಲಿ ವಾಹನದಟ್ಟಣೆ ತಡೆಯಲು ಪೂರಕ ವ್ಯವಸ್ಥೆ ಕೈಗೊಳ್ಳಲಾಗುತ್ತದೆ. ಅಂತೆಯೇ ಹೊಸಬಡಾವಣೆಯತ್ತ ಸಾಗುವ ಮುಖ್ಯ ರಸ್ತೆ ಬದಿ, ಕುಂದೂರುಮೊಟ್ಟೆ ದೇವಾಲಯ ಬಳಿ ವಾಹನ ನಿಲುಗಡೆಗೆ ಕ್ರಮದೊಂದಿಗೆ, ರಸ್ತೆಯ ಕೆಳ ಭಾಗದಲ್ಲಿರುವ ಕೆರೆ ಸುತ್ತಮುತ್ತ ಪ್ರವಾಸಿಗರು ವಿಹರಿಸಲು ಅಭಿವೃದ್ಧಿ ಹಮ್ಮಿಕೊಳ್ಳಲಾಗಿದೆ. ಈ ಸಂಬಂಧ ರೂಪುಗೊಳ್ಳಲಿರುವ ವಿನೂತನ ಯೋಜನೆಯಿಂದ ರಾಜಾಸೀಟ್
(ಮೊದಲ ಪುಟದಿಂದ) ಬಳಿ ಜನ ಸಾಂದ್ರತೆ ಹಾಗೂ ವಾಹನ ದಟ್ಟಣೆಗೆ ಅವಕಾಶವಾಗದಂತೆ ಈ ಪ್ರದೇಶದ ಅಗತ್ಯ ವಿಸ್ತರಿಸುವತ್ತ ಗಮನ ಹರಿಸಲಾಗುತ್ತಿದೆ.
ನೆಹರೂ ಮಂಟಪ ಅಭಿವೃದ್ಧಿ: ಮಾತ್ರವಲ್ಲದೆ ಅತ್ಯಂತ ರಮಣೀಯ ತಾಣವಾಗಿ, ಇದುವರೆಗೆ ಕಾಡುಪಾಲಾಗಿದ್ದ ನೆಹರೂ ಮಂಟಪಕ್ಕೆ ಕಾಯಕಲ್ಪ ನೀಡಲಾಗುತ್ತಿದೆ. ಇಲ್ಲಿಯೂ ಪ್ರಾಕೃತಿಕ ಸೌಂದರ್ಯವನ್ನು ಪ್ರವಾಸಿ ಮಂದಿ ಕುಳಿತು ವೀಕ್ಷಿಸುವಂತೆ ಅಲ್ಲಲ್ಲಿ ಮರಗಿಡಗಳ ನಡುವೆ ಕಲ್ಲು ಬೆಂಚುಗಳನ್ನು ಅಳವಡಿಸಲಾಗುತ್ತಿದೆ. ಈಗಾಗಲೇ ನೆಹರೂ ಮಂಟಪಕ್ಕೆ ತೆರಳುವ ಹಾದಿಯ ಮೆಟ್ಟಿಲುಗಳ ನವೀಕರಣ, ಅಲ್ಲಲ್ಲಿ ವಿದ್ಯುತ್ ದೀಪಾಲಂಕಾರದ ತಯಾರಿ ಮುಂದುವರಿದಿದೆ.
ಇದರೊಂದಿಗೆ ನೆಹರೂ ಮಂಟಪಕ್ಕೆ ತೆರಳುವಲ್ಲಿ ಪ್ರವೇಶ ದ್ವಾರ, ಅನಂತರದಲ್ಲಿ ಹಿರಿಯ ನಾಗರಿಕರು, ಅಬಲೆಯರು ಸುಧಾರಿಸಿಕೊಂಡು ತೆರಳುವ ಉದ್ದೇಶದಿಂದ ವಿಶ್ರಾಂತ ಮಂಟಪ ಇತ್ಯಾದಿ ಮೂಲಭೂತ ಸೌಲಭ್ಯ ಕಲ್ಪಿಸಲಾಗುತ್ತಿದೆ. ಇಲ್ಲಿ ಮುಖ್ಯವಾಗಿ ರಾಜಾಸೀಟ್, ಪುಟಾಣಿ ರೈಲು, ನೆಹರೂ ಮಂಟಪಗಳಿಗೆ ಪ್ರವಾಸಿಗರು ತೆರಳಿ ಸಾಕಷ್ಟು ಇಲ್ಲಿನ ಪ್ರಕೃತಿ ಸೌಂದರ್ಯ ವೀಕ್ಷಿಸುತ್ತಾ ಸಮಯ ಕಳೆಯಲು ಪೂರಕ ಅಭಿವೃದ್ಧಿ ರೂಪುಗೊಳ್ಳುತ್ತಿದೆ. ಈ ದಿಸೆಯಲ್ಲಿ ನೆಹರೂ ಮಂಟಪದ ನವೀಕರಣಕ್ಕೆ ರೂ. 18.50 ಲಕ್ಷದ ಕೆಲಸ ಸಾಗಿದೆ.
ಮಲ್ಲಳ್ಳಿ ಅಭಿವೃದ್ಧಿ: ಇನ್ನು ಪದೇ ಪದೇ ಪ್ರಾಣಹಾನಿಗೆ ಎಡೆಯಾಗುತ್ತಿರುವ ಸೋಮವಾರಪೇಟೆ ತಾಲೂಕಿನ ಮಲ್ಲಳ್ಳಿ ಜಲಪಾತ ವೀಕ್ಷಿಸಲು ಅಗತ್ಯ ಸುರಕ್ಷಾ ಕ್ರಮ ಕೈಗೊಂಡಿದ್ದು, ರೂ. 1.92 ಕೋಟಿ ವೆಚ್ಚದ ಕಾಮಗಾರಿ ನಡೆಯುತ್ತಿದೆ. ಅಲ್ಲಿ ಪ್ರಕೃತಿಯೊಂದಿಗೆ ಜಲಪಾತದ ಸೌಂದರ್ಯ ವೀಕ್ಷಿಸಲು ಬೆಟ್ಟ ಸಾಲಿನ ಸುತ್ತಲೂ ‘ಮೆಸ್’ (ತಂತಿ) ಅಳವಡಿಕೆಯೊಂಡಿದೆ ಸಮರ್ಪಕ ಮಾರ್ಗದ ಕೆಲಸ ಸಾಗಿದೆ.
ಮಾತ್ರವಲ್ಲದೆ ಪ್ರವಾಸಿಗರಿಗಾಗಿ ಸೂಕ್ತ ಉಪಹಾರ ಗೃಹ, ಶೌಚಾಲಯ, ವಾಹನ ಪಾರ್ಕಿಂಗ್ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಕೆಲಸ ಭರದಿಂದ ಸಾಗಿದೆ. ಸ್ವತಃ ಜಿಲ್ಲಾಧಿಕಾರಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಖುದ್ದು ಭೇಟಿ ನೀಡಿ ಆಗಬೇಕಿರುವ ಕೆಲಸಗಳನ್ನು ಶೀಘ್ರ ಪೂರೈಸುವಂತೆ ನಿರ್ದೇಶಿಸಿದ್ದಾರೆ. ಜಿಲ್ಲೆಯ ಇತರ ಜಲಪಾತಗಳು, ದುಬಾರೆ, ನಾಲ್ಕುನಾಡು ಅರಮನೆ, ಮಾಂದಲಪಟ್ಟಿ ಸಹಿತ ಎಲ್ಲ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಯೋಜನೆ ರೂಪಿಸಿ, ಹಂತ ಹಂತವಾಗಿ ಕೊಡಗಿನ ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ ಕಲ್ಪಿಸಲು ಜಿಲ್ಲಾಡಳಿತ ಕಾಳಜಿ ವಹಿಸಿರುವದು ಗೋಚರಿಸುವಂತಾಗಿದೆ.