ಮಡಿಕೇರಿ, ಏ. 21: ಕೊಡವ ಜನಾಂಗದ ಮದುವೆಯಲ್ಲಿ ನೀರ್ ಎಡ್‍ಪೊ (ಗಂಗಾಪೂಜೆ) ಸಂದರ್ಭದಲ್ಲಿ ಮದ್ಯ ಸರಬರಾಜು ಮಾಡುವದನ್ನು ನಿಷೇಧಿಸಿ ಅಮ್ಮತ್ತಿ ಕೊಡವ ಸಮಾಜ ನಿರ್ಣಯ ಕೈಗೊಂಡಿರುವದನ್ನು ಅನುಷ್ಠಾನಕ್ಕೆ ತರಲಾಗಿದೆ.

ಇತ್ತೀಚೆಗೆ ಅಮ್ಮತ್ತಿ ಕೊಡವ ಸಮಾಜದ ಮಹಾಸಭೆಯಲ್ಲಿ ಒಂದು ರೀತಿಯಲ್ಲಿ ಐತಿಹಾಸಿಕವಾದ ಈ ತೀರ್ಮಾನವನ್ನು ಕೈಗೊಳ್ಳಲಾಗಿತ್ತು. ಮಹಾಸಭೆಯ ಬಳಿಕ ಶೂನ್ಯ ಮಾಸವಿದ್ದು, ಸಮಾರಂಭಗಳು ಇರಲಿಲ್ಲ. ಇದೀಗ ಶೂನ್ಯಮಾಸ ಕಳೆದ ಬಳಿಕ ನಿಗದಿಯಾಗಿರುವ ಮದುವೆಗಳು ನಡೆಯುತ್ತಿದ್ದು, ಸಮಾಜದ ತೀರ್ಮಾನಕ್ಕೆ ಬದ್ಧರಾಗಿ ಉಭಯ ಕಡೆಯವರು ನಡೆದುಕೊಳ್ಳುತ್ತಿದ್ದಾರೆ. ಕೆಲವು ದಿನದ ಹಿಂದೆ ಅಣ್ಣಾಳಮಾಡ ಹಾಗೂ ಮಾಚಿಮಾಡ ಕುಟುಂಬದ ವಿವಾಹ ಸಮಾರಂಭ ಇದೇ ರೀತಿಯಲ್ಲಿ ಜರುಗಿದೆ. ತಾ. 20 ಹಾಗೂ 21 ರಂದು ಕಾಣತಂಡ ಹಾಗೂ ಕೊರವಂಡ ವಿವಾಹವಿದ್ದು, ಈ ಸಮಾರಂಭದಲ್ಲೂ ಇದು ಯಶಸ್ವಿಯಾಗಿ ಕಾರ್ಯರೂಪಕ್ಕೆ ಬಂದಿದೆ.

ಗಂಗಾಪೂಜೆ ಶಾಸ್ತ್ರ ಮುಗಿದ ಬಳಿಕ ಮದ್ಯ ಬಳಕೆಗೆ ಸಮಾಜ ಕಡಿವಾಣ ಹಾಕಿಲ್ಲ. ಈ ತೀರ್ಮಾನದ ಬಗ್ಗೆ ಜನವಲಯದಲ್ಲಿ ಉತ್ತಮ ರೀತಿಯ ಪ್ರತಿಕ್ರಿಯೆ ವ್ಯಕ್ತಗೊಳ್ಳುತ್ತಿದೆ. ಅಲ್ಲದೆ ಇದು ಎಲ್ಲಾ ಕಡೆಗಳಲ್ಲಿಯೂ ಸಕಾರಾತ್ಮಕವಾದ ಚರ್ಚೆಗೆ, ಜಾಗೃತಿಗೆ ಕಾರಣವಾಗಿದ್ದು, ಇತರೆಡೆಗಳಲ್ಲಿಯೂ ಅನುಷ್ಠಾನಗೊಳ್ಳುವ ಬೆಳವಣಿಗೆಗಳು ಕಂಡು ಬರುತ್ತಿರುವದಾಗಿ ಸಮಾಜದ ಅಧ್ಯಕ್ಷ ಮೂಕೋಂಡ ಬೋಸ್ ದೇವಯ್ಯ ಅವರು ‘ಶಕ್ತಿ’ಯೊಂದಿಗೆ ಅನಿಸಿಕೆ ವ್ಯಕ್ತಪಡಿಸಿದರು.

ಸಮಾರಂಭಕ್ಕೆ ಮಂಟಪ ಕಾಯ್ದಿರಿಸಿದವರಿಗೆ ಸಮಾಜದ ತೀರ್ಮಾನವನ್ನು ಪತ್ರದ ಮುಖೇನ ತಿಳಿಸಲಾಗುತ್ತಿದೆ. ಅಲ್ಲದೆ ‘ಚಾರ್ಜ್’ ಕೊಡವ ಸಂದರ್ಭ ಉಭಯ ಕಡೆಯವರೊಂದಿಗೆ ಮಾತುಕತೆಯನ್ನೂ ನಡೆಸಿ ನಿಯಮ ಉಲ್ಲಂಘನೆಯಾಗದಂತೆ ಗಮನ ಹರಿಸಲಾಗುತ್ತಿದೆ ಎಂದು ಬೋಸ್ ದೇವಯ್ಯ ವಿವರಿಸಿದರು.