ಕುಶಾಲನಗರ, ಏ. 19: ಕುಶಾಲನಗರ ಸಮೀಪ ರಂಗಸಮುದ್ರ ಬಳಿ ನಡೆದ ಬುಲೆಟ್ ಬೈಕ್ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ ಪಶ್ಚಿಮ ಬಂಗಾಳದ ರಾಯಪುರದ ನಿವಾಸಿ ಸುಮನ್ವಿತ್ ರಾಯ್ ಎಂದು ತಿಳಿದುಬಂದಿದೆ. ಬೆಂಗಳೂರಿನಿಂದ ಬಾಡಿಗೆ ಬುಲೆಟ್ ಬೈಕ್ ಪಡೆದು ಮೃತ ವ್ಯಕ್ತಿ ತನ್ನ ಪತ್ನಿ ಸುಚಂದ್ರ ರಾಯ್ ಜೊತೆಗೆ ದುಬಾರೆಗೆ ತೆರಳುತ್ತಿದ್ದ ಸಂದರ್ಭ ಪುತ್ತೂರಿನಿಂದ ದುಬಾರೆಗೆ ಆಗಮಿಸುತ್ತಿದ್ದ ಪ್ರವಾಸಿ ಬಸ್ ಬೈಕ್ ಅನ್ನು ಹಿಂದಿಕ್ಕುವ ಸಂದರ್ಭ ಸುಮನ್ವಿತ್ ರಾಯ್ ರಸ್ತೆಗೆ ಬಿದ್ದಿದ್ದು, ತಲೆಯ ಮೇಲೆ ಬಸ್ ಹರಿದ ಕಾರಣ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪತ್ನಿಗೆ ಕೈ ಮತ್ತು ತಲೆಗೆ ಏಟುಗಳಾಗಿದ್ದು ಅವರನ್ನು ಬೆಂಗಳೂರಿಗೆ ಸಾಗಿಸಲಾಗಿದೆ. ಮೃತನ ಕುಟುಂಬ ಸದಸ್ಯರು ಕುಶಾಲನಗರಕ್ಕೆ ಆಗಮಿಸಿದ್ದು, ಮೃತ ದೇಹದ ಮರಣೋತ್ತರ ಪರೀಕ್ಷೆ ನಂತರ ಬೆಂಗಳೂರಿಗೆ ಸಾಗಿಸಲಾಯಿತು.