*ಗೋಣಿಕೊಪ್ಪಲು, ಏ. 16 : ದೇಶ ಅಭಿವೃದ್ಧಿ ಹೊಂದಬೇಕಾದರೆ, ಬಡವರ ಏಳಿಗೆ, ಹಾಗೂ ಯುವ ಸಮುದಾಯಕ್ಕೆ ಉದ್ಯೋಗ ಮತ್ತು ಬದುಕುವ ಮಾರ್ಗ ದೊರೆಯಬೇಕಾದರೆ ಮತ್ತೊಮ್ಮೆ ಮೋದಿ ಸರÀಕಾರ ಆಡಳಿತಕ್ಕೆ ಬರಬೇಕು ಎಂದು ವೀರಾಜಪೇಟೆ ತಾಲೂಕು, ಬಿಜೆಪಿ ಮಹಿಳಾ ಮೋರ್ಚ ಅಧ್ಯಕ್ಷೆ ಚೇಂದಂಡ ಸುಮಿ ಸುಬ್ಬಯ್ಯ ಕರೆ ನೀಡಿದರು.

ಗೋಣಿಕೊಪ್ಪಲು ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು ಮೋದಿ ಸರ್ಕಾರದ ಕಳೆದ ಐದು ವರ್ಷದ ಆಡಳಿತದಲ್ಲಿ ದೇಶ ಉತ್ತುಂಗ ಶಿಖರಕ್ಕೇರಿದೆ. ವಿದೇಶ ಗಳಲ್ಲಿ ಭಾರತಕ್ಕೆ ಅಪಾರ ಗೌರವ ಸಿಗುತ್ತಿದೆ. ಮೋದಿ ಸರ್ಕಾರದ ಆಡಳಿತದಿಂದ ದೇಶವನ್ನು ನೋಡುವ ದೃಷ್ಟಿಯೇ ವಿದೇಶಿಗರಲ್ಲಿ ಬದಲಾವಣೆ ಯಾಗಿದೆ. ದೇಶಕ್ಕೆ ಮಾದರಿ ಸರ್ಕಾರವಾಗಿದ್ದು, ಸೈನಿಕರಿಗೆ ಬಲ, ಮಹಿಳೆಯರಿಗೆ ಗೌರವ ಸಿಗುತ್ತಿದೆ. ನೂರಾರು ಯೋಜನೆಗಳ ಮೂಲಕ ರೈತರಿಗೆ ಯುವ ಸಮುದಾಯದ ಅಭಿವೃದ್ಧಿಗೆ ಕಾರಣವಾಗುತ್ತಿದೆ.

ಗ್ರಾ.ಪಂ ಸದಸ್ಯೆ, ಮಹಿಳಾ ಮೋರ್ಚ ಸಹಕಾರ್ಯದರ್ಶಿ ನೂರೇರ ರತಿ ಅಚ್ಚಪ್ಪ ಮಾತನಾಡಿ ನಮ್ಮ ಜನ್ಮ ಸಿದ್ದ ಹಕ್ಕನ್ನು ಚಲಾಯಿಸುವಾಗ ಎಚ್ಚರ ತಪ್ಪದೆ ಸೂಕ್ತ ಅಭ್ಯರ್ಥಿಗೆ ಮತ ನೀಡಿ ದೇಶದ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ಬಿಜೆಪಿ ತಾಲೂಕು ಉಪಾಧ್ಯಕ್ಷೆ, ತಾ.ಪಂ ಮಾಜಿ ಅಧ್ಯಕ್ಷೆ ರಾಣಿ ನಾರಾಯಣ್ ಮಾತನಾಡಿ ಮತದಾನ ಮಾಡುವದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಈ ಬಗ್ಗೆ ನಿರ್ಲಕ್ಷ ತಾಳದೆ ಮತದಾನ ಮಾಡಿ ದೇಶ ಉತ್ತಮ ಹಾದಿಯಲ್ಲಿ ಸಾಗಲು ಮತ್ತು ಬಡವರ ಉದ್ದಾರಕ್ಕಾಗಿ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಎಂದು ಹೇಳಿದರು.