ಕುಶಾಲನಗರ, ಏ. 17: ಸೋಮವಾರ ಕುಶಾಲನಗರದಲ್ಲಿ ನಡೆದ ಮೈತ್ರಿ ಪಕ್ಷಗಳ ಚುನಾವಣಾ ಸಮಾವೇಶದಲ್ಲಿ ಕಾರ್ಯಕರ್ತರಿಗೆ ಸಾರ್ವಜನಿಕವಾಗಿ ಹಣ ಹಂಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಸೋಮವಾರ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿಜಯಶಂಕರ್ ಪರವಾಗಿ ಮತಯಾಚನೆಗೆ ಸ್ಥಳೀಯ ತಾವರೆಕೆರೆ ಎದುರು ಭಾಗದ ಎಸ್ಎಲ್ಎನ್ ಸ್ಕ್ವೇರ್ ಆವರಣದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್, ಮಾಜಿ ಸಚಿವ ಬಿ.ಎ.ಜೀವಿಜಯ ಮತ್ತಿತರರು ಪಾಲ್ಗೊಂಡ ಸಭೆಗೆ ಆಗಮಿಸಿದ ಕಾರ್ಯಕರ್ತರಿಗೆ ಹಣ ಹಂಚಿಕೆ ಮಾಡುತ್ತಿರುವ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಈ ಬಗ್ಗೆ ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್, ಅಧಿಕಾರಿ ಆರ್.ಅವಿನ್ ಅವರು ತನಿಖೆ ಕೈಗೊಳ್ಳುವಂತೆ ಠಾಣೆಗೆ ದೂರು ದಾಖಲಿಸಿದ್ದಾರೆ. ಕಾಂಗ್ರೆಸ್ನ ಕೆಲವು ಕಾರ್ಯಕರ್ತರನ್ನು ಆರೋಪಿಗಳನ್ನಾಗಿ ಮಾಡಿದ್ದು ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಕುಶಾಲನಗರ ಪೊಲೀಸ್ ಠಾಣಾಧಿಕಾರಿ ಜಗದೀಶ್ ತಿಳಿಸಿದ್ದಾರೆ.